ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ಹಳ್ಳದಲ್ಲಿ ಮುಳುಗುವ ಸ್ಮಶಾನ

ಹಳ್ಳದ ಸುತ್ತಲಿನ ಒತ್ತುವರಿ ತೆರವುಗೊಳಿಸಿ ಭೂಮಿ ನೀಡಲು ಆಗ್ರಹ
Last Updated 18 ನವೆಂಬರ್ 2022, 5:40 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಾವಿಲ್ಲದ ಮನೆ ಇಲ್ಲ. ರುದ್ರಭೂಮಿ ಇರದ ಊರಿಲ್ಲ ಎಂಬ ಮಾತಿದೆ. ಆದರೆ, ಇಂದು ಆಧುನಿಕತೆ ಹಾಗೂ ಆರ್ಥಿಕತೆ ಬೆನ್ನ ಹಿಂದೆ ಬಿದ್ದಿರುವ ಜನರು ರುದ್ರಭೂಮಿಗೆ ನಿಗದಿಪಡಿಸಿರುವ ಸ್ಥಳವನ್ನೂ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಜಾಜೂರು ಬಿ.ದುರ್ಗ ಹೋಬಳಿಯ ದೊಡ್ಡ ಗ್ರಾಮಗಳಲ್ಲಿ ಒಂದು. ಆದರೆ, ಗ್ರಾಮದಲ್ಲಿ ಪರಿಶಿಷ್ಟರ ಸ್ಮಶಾನ ಹಾಗೂ ಕ್ರೈಸ್ತ ಸಮುದಾಯದವರಿಗೆ ಮೀಸಲಾಗಿರುವ ಸ್ಮಶಾನಗಳು ಮಾತ್ರ ಗುರುತು ಸಿಗವಂತಿವೆ. ಇತರೆ ಸಮುದಾಯದವರಿಗಾಗಿ ಹಲವು ವರ್ಷಗಳ ಹಿಂದೆಯೇ ಸ್ಮಶಾನಕ್ಕಾಗಿ ಸ್ಥಳ ಗುರುತಿಸಿದ್ದರೂ, ಶವವನ್ನು ಹೂಳಲು ಪರದಾಡಬೇಕಾದ ಸ್ಥಿತಿ ಇದೆ.

ಗ್ರಾಮದ ಚಿಕ್ಕಂದವಾಡಿ ರಸ್ತೆಯಲ್ಲಿರುವ ಮಾರುತಿ ನಗರ ಬಡಾವಣೆಯ ಸರ್ವೆ ನಂ.27ರಲ್ಲಿ ಗ್ರಾಮದ ಜೈನ ಹಾಗೂ ಮುಸ್ಲಿಂ ಸಮುದಾಯಕ್ಕೆ ತಲಾ 2 ಎಕರೆ, ಕ್ರೈಸ್ತ ಸಮುದಾಯಕ್ಕೆ ಒಂದು ಎಕರೆ ಮತ್ತು ಇತರೆ ಜನಾಂಗದವರಿಗಾಗಿ 5 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಭೂಮಿ ಅಳತೆ ಮಾಡಿ, ನಿಗದಿಪಡಿಸಿದ್ದಾರೆ.

ಕ್ರೈಸ್ತ ಸಮುದಾಯದವರು ಮಾತ್ರ ತಮಗೆ ನಿಗದಿಪಡಿಸಿರುವ ಜಾಗಕ್ಕೆ ಕಲ್ಲು ಕಂಬಗಳನ್ನು ನೆಟ್ಟಿ, ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಉಳಿದವರಿಗೆ ನೀಡಿರುವ ಜಾಗದಲ್ಲಿ ಹಳ್ಳದ ನೀರು ಹರಿಯುತ್ತದೆ. ದಶಕಗಳ ಹಿಂದೆಯೇ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಿಸಿರುವುದರಿಂದ ಸ್ಮಶಾನ ಜಾಗದ ಶೇ 90 ಭಾಗ ನೀರಿನಿಂದ ಆವೃತ್ತವಾಗಿದ್ದು, ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ.

‘ಗ್ರಾಮದ ಆಂಜಿನಪ್ಪ ಅವರುಈಚೆಗೆ ಮೃತಪಟ್ಟಾಗ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳವನ್ನು ಪಡೆದು ಅಂತ್ಯಸಂಸ್ಕಾರ ನಡೆಸಬೇಕಾಯಿತು. ಹಳ್ಳದ ಜಾಗದ ಸುತ್ತಮುತ್ತ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಸಿಗುವಷ್ಟು ಜಾಗವನ್ನು ಆಯಾ ಸಮುದಾಯದವರಿಗೆ ಹದ್ದುಬಸ್ತು ಮಾಡಿ ಕೊಡಬೇಕು’ ಎಂದು ಗ್ರಾಮಸ್ಥರಾದ ಬಸವರಾಜಯ್ಯ, ಸಿದ್ದಪ್ಪ, ಈಶ್ವರಪ್ಪ, ರಂಗನಾಥ್‌, ನಟರಾಜ್‌ ಆಗ್ರಹಿಸುತ್ತಾರೆ.

ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ

ಬಿ. ದುರ್ಗ ಹೋಬಳಿಯ ಅನೇಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗವೇ ಇಲ್ಲ. ಸರ್ವೆ ನಂ.13ರಲ್ಲಿ 8 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ನೀಡಲಾಗಿತ್ತು. ಈ ಜಾಗದಲ್ಲಿ ಪ್ರಸ್ತುತ ಕೆರೆ ನೀರು ಭರ್ತಿಯಾಗಿರುವುದರಿಂದ ಗ್ರಾಮದಲ್ಲಿ ಪ್ರತ್ಯೇಕ ಸ್ಮಶಾನ ಜಾಗ ಇಲ್ಲದಂತಾಗಿದೆ. ಜಮೀನು ಹಾಗೂ ತೋಟ ಇರುವವರು ಅವರ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡಿಕೊಳ್ಳುತ್ತಾರೆ. ಆದರೆ, ಕೂಲಿಕಾರ್ಮಿಕರು ಹಾಗೂ ಜಮೀನು ಇಲ್ಲದವರು ಅಂತ್ಯಸಂಸ್ಕಾರ ಮಾಡಲು ಕೆರೆ ಅಂಗಳವನ್ನೋ ಅಥವಾ ಹಳ್ಳಗಳ ಬದಿಯನ್ನೋ ಆಶ್ರಯಿಸಬೇಕಿದೆ.

ಗ್ರಾಮದ ಸರ್ವೆ ನಂ.78ರಲ್ಲಿ ಸ್ಮಶಾನಕ್ಕಾಗಿ 4 ಎಕರೆ ಭೂಮಿ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಿಡಿಒ ನಟರಾಜ್‌ ತಿಳಿಸಿದ್ದಾರೆ.

ಸಮೀಪದ ಹನುಮನಕಟ್ಟೆ ಗ್ರಾಮದ ಸರ್ವೆ ನಂ.5ರಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿರುವ ಜಮೀನನ್ನು ಗ್ರಾಮಸ್ಥರ ವಶಕ್ಕೆ ನೀಡಬೇಕು ಎಂದು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜೈನ ಧರ್ಮೀಯರು ಶವಗಳನ್ನು ಸುಡುತ್ತಾರೆ. ಸಮುದಾಯಕ್ಕೆ ಮೀಸಲಿರುವ 2 ಎಕರೆ ಜಾಗದಲ್ಲಿ ಚಿತಾಗಾರ ನಿರ್ಮಿಸಿಕೊಟ್ಟರೆ ಒಳ್ಳೆಯದು. ಸ್ಮಾಶಾನದಲ್ಲಿ ಕೊಳವೆಬಾವಿಯನ್ನು ಕೊರೆಸಿದರೆ ಅಂತ್ಯಸಂಸ್ಕಾರಕ್ಕೆ ಬರುವವರು ಕೈಕಾಲು, ಮುಖ ತೊಳೆಯಲು ಅನುಕೂಲವಾಗುತ್ತದೆ.
- ಸುನಿಲ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತ

ಚಿಕ್ಕಜಾಜೂರು ಗ್ರಾಮದ ಸ್ಮಶಾನ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೇಲಧಿಕಾರಿಗಳ ಪ್ರತಿಕ್ರಿಯೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಜಯಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಿಕ್ಕಜಾಜೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT