ಬುಧವಾರ, ಸೆಪ್ಟೆಂಬರ್ 29, 2021
20 °C
ಮಳೆ ಅಭಾವ, ದರ ಕುಸಿತದಿಂದ ರೈತ ಕಂಗಾಲು

ಕೊಳೆರೋಗ ಬಾಧೆ: ಶೇಂಗಾ ಇಳುವರಿ ಕುಸಿತ

ಎಸ್‌. ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಶೇಂಗಾ ಬೆಳೆಗೆ ಬುಡಕೊಳೆರೋಗ ತಗುಲಿದ್ದರಿಂದ ಬೆಳೆಯ ಇಳುವರಿ ಕುಸಿತವಾಗಿದ್ದು, ತಾಲ್ಲೂಕಿನ ರೈತರು ಕಂಗಾಲಾಗಿದ್ದಾರೆ.

ಮೇ ಆರಂಭದಲ್ಲಿ ಮಳೆಯಾಗಿದ್ದರಿಂದ ಜಮೀನು ಹದ ಮಾಡಿಕೊಂಡ ಇಲ್ಲಿಯ ರೈತರು ಮೇನಿಂದ ಜೂನ್‌ ಮೊದಲ ವಾರದವರೆಗೂ ಶೇಂಗಾ ಬಿತ್ತನೆ ಮಾಡಿದ್ದರು. ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ 2,120 ಹೆಕ್ಟೇರ್‌ ಶೇಂಗಾ ಬಿತ್ತನೆ ಗುರಿಯಿದ್ದು, ಈ ಬಾರಿ 1,913 ಮಾತ್ರ ಬಿತ್ತನೆಯಾಗಿದೆ. ಜೂನ್‌ ಕೊನೆಯವರೆಗೂ ಆಗಾಗ ಮಳೆಯಾಗಿದ್ದರಿಂದ ಬಿತ್ತನೆಯಾಗಿದ್ದ ಬೆಳೆ ಉತ್ತಮವಾಗಿ
ಬೆಳವಣಿಗೆಯಾಗಿತ್ತು.

‘ಆದರೆ, ಜುಲೈ 15ರಿಂದ ಒಂದೂವರೆ ತಿಂಗಳ ಕಾಲ ಮೋಡ ಕವಿದ ವಾತಾವರಣವಿತ್ತು. ಶೀತಗಾಳಿ ಬೀಸುವ ಜೊತೆಗೆ ಕೆಲವೆಡೆ ತುಂತುರು ಮಳೆ ಬರುತ್ತಿತ್ತು. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿತ್ತು. ಬೆಳೆಗೆ ಸೂರ್ಯನ ಬಿಸಿಲು ಹೆಚ್ಚಾಗಿ ಬೀಳಲಿಲ್ಲ. ಇದರಿಂದಾಗಿ ಬೆಳೆ ಬುಡಕೊಳೆ ಹಾಗೂ ಎಲೆಚುಕ್ಕಿ ರೋಗಕ್ಕೆ ತುತ್ತಾಗಿತ್ತು. ಇದರಿಂದ ಬೆಳೆಗೆ ಆಹಾರ ಸರಿಯಾಗಿ ಪೂರೈಕೆ ಆಗುವುದಿಲ್ಲ. ಗಿಡದಲ್ಲಿ ಹೆಚ್ಚು ಕಾಯಿಗಟ್ಟುವುದಿಲ್ಲ. ಈ ಬಾರಿ ಶೇ 40ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಯ ಇಳುವರಿ ಕುಸಿತವಾಗಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎನ್ನುತ್ತಾರೆ ಬೆಳೆಗಾರ
ರಾಜಪ್ಪ.

‘ಹಲವೆಡೆ ಶೇಂಗಾ ಬೆಳೆ ಹೂ ಬಿಡುವ ಹಾಗೂ ಕಾಯಿಗಟ್ಟುವ ಹಂತದಲ್ಲಿ ಮಳೆಯೂ ಕೈಕೊಟ್ಟಿತ್ತು. ಹೆಚ್ಚು ಬಿಳಿಲು(ಕಾಯಿ) ಬರಲಿಲ್ಲ. ಇರುವ ಕಾಯಿಗಳು ಬಲಿಯಲಿಲ್ಲ. ಹಲವು ರೈತರ ಶೇಂಗಾ ಜೊಳ್ಳು ಬಿದ್ದಿತ್ತು. ಇದರಿಂದಲೂ ಇಳುವರಿ ಕುಸಿತವಾಗಿದೆ. ಒಂದು ಎಕರೆಗೆ ಆರೇಳು ಚೀಲ ಶೇಂಗಾ ಬೆಳೆಯುತ್ತಿದ್ದ ರೈತರಿಗೆ ಮೂರ್ನಾಲ್ಕು ಚೀಲವಷ್ಟೇ ಕೈಸೇರಿದೆ. ಹಲವು ಸಮಸ್ಯೆಗಳ ನಡುವೆಯೂ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ಮಾರಾಟಕ್ಕೆ ತಂದರೆ ಮಧ್ಯವರ್ತಿಗಳು ಪ್ರತಿ ಕ್ವಿಂಟಲ್‌ ಶೇಂಗಾಕ್ಕೆ ₹ 2,900ರಿಂದ ₹ 6,569ರವರೆಗೆ ಅಷ್ಟೇ ದರ ನಿಗದಿ ಮಾಡುತ್ತಿದ್ದಾರೆ. ಇದರಿಂದಾಗಿ ಶೇಂಗಾ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ. ಶೇಂಗಾ ಬಿತ್ತನೆ ಬೀಜ ಖರೀದಿಸಿದ್ದು, ಬೆಳೆ ಎಡೆಕುಂಟೆ ಹೊಡೆಸಿ, ಕಳೆ ತೆಗೆಸಿದ್ದೇವೆ. ಕೊಯ್ಲಿಗೆ ಬಂದಿದ್ದ ಗಿಡ ಕೀಳಿಸಿದ್ದು, ಗಿಡದಿಂದ ಕಾಯಿ ಬೇರ್ಪಡಿಸಿದ್ದೇವೆ. ಶೇಂಗಾ ಚೀಲ ಮಾರುಕಟ್ಟೆಗೆ ತರಲು, ಬಾಡಿಗೆ ಕೊಟ್ಟಿದ್ದು ಸೇರಿ ಒಂದು ಎಕರೆಗೆ ಸುಮಾರು
₹ 16 ಸಾವಿರ ಖರ್ಚಾಗಿದೆ. 4 ಕ್ವಿಂಟಲ್‌ಗಳಷ್ಟು ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 4,000 ದರ ನಿಗದಿ ಮಾಡಿದ್ದಾರೆ. ನಾನು ಬೆಳೆ ಬೆಳೆಯಲು ಖರ್ಚು ಮಾಡಿದ್ದ ಹಣವಷ್ಟೇ ಕೈಸೇರಿದೆ. ಪರಿಸ್ಥಿತಿ ಹೀಗಾದರೆ 3 ತಿಂಗಳು ಕಷ್ಟಪಟ್ಟು ಏಕೆ ಬೆಳೆ ಬೆಳೆಯಬೇಕು’ ಎಂದು ಮಾಡದಕೆರೆಯ ರೈತರಾದ ಹನುಮಂತಪ್ಪ, ಬಸವರಾಜು ಪ್ರಶ್ನಿಸಿದ್ದಾರೆ.

ವೈಜ್ಞಾನಿಕ ಬೆಲೆ ನಿಗದಿಗೊಳಿಸಿ

ರೈತರ ಕೃಷಿ ಸಾಧನ ಸಲಕರಣೆ, ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ಹಾಗೂ ಅಡುಗೆ ಶೇಂಗಾ ದರ ಗಗನಕ್ಕೇರಿದೆ. ಮಳೆ ಅಭಾವ, ರೋಗಬಾಧೆಯ ನಡುವೆಯೂ ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವುದು ದುರದೃಷ್ಟಕರ ಸಂಗತಿ. ಹೀಗಾಗಿ, ಶೇಂಗಾ ಬೆಳೆಗಾರರ ಹಿತ ಕಾಪಾಡಲು ಪ್ರತಿ ಕ್ವಿಂಟಲ್‌ ಶೇಂಗಾಕ್ಕೆ ಕನಿಷ್ಠ ₹ 8,000 ದರ ನಿಗದಿ ಮಾಡಬೇಕು ಎಂಬುದು ತಾಲ್ಲೂಕಿನ ರೈತರ ಒತ್ತಾಯವಾಗಿದೆ.

ಮ್ಯಂಕೋಜೆಬ್‌ ಔಷಧ ಸಿಂಪಡಿಸಿ

ಪ್ರತಿ ವರ್ಷ ಶೇಂಗಾ ಬಿತ್ತನೆ ಬೀಜ ಖರೀದಿಸುವುದರಿಂದ ರೈತರಿಗೆ ಹೆಚ್ಚು ಖರ್ಚು ಬರುತ್ತದೆ. ಹೀಗಾಗಿ, ಬೆಳೆದ ಗುಣಮಟ್ಟದ ಶೇಂಗಾ ಶೇಖರಿಸಿಟ್ಟುಕೊಂಡು ಮುಂದಿನ ವರ್ಷ ಬಿತ್ತನೆ ಮಾಡುವುದರಿಂದ ಖರ್ಚು ಕಡಿಮೆಯಾಗುತ್ತದೆ. ಕೊಳೆ ರೋಗ ತಗುಲಿದ ತಕ್ಷಣ 2 ಗ್ರಾಂ ಮ್ಯಂಕೋಜೆಬ್‌ ಔಷಧವನ್ನು 1 ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌. ಈಶ ತಿಳಿಸಿದ್ದಾರೆ.

...........

ಮಾರುಕಟ್ಟೆಯಲ್ಲಿ ದಲ್ಲಾಳಿ, ಹಮಾಲರು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಗುಣಮಟ್ಟ ನೋಡಲೆಂದು ಶೇಂಗಾ ತೆಗೆದುಕೊಂಡು ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು.

-ಬಸವರಾಜಪ್ಪ, ರೈತ, ಶ್ರೀರಾಂಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.