ಬ್ರಾಂಡ್ ರಹಿತ ಉತ್ಪನ್ನಕ್ಕೆ ಹೆಚ್ಚಿದ ಬೇಡಿಕೆ

7
ಜಿಎಸ್‌ಟಿಗೆ ಹೊಂದಿಕೊಳ್ಳುತ್ತಿರುವ ಚಿಲ್ಲರೆ ಅಂಗಡಿ ಮಾಲೀಕರು

ಬ್ರಾಂಡ್ ರಹಿತ ಉತ್ಪನ್ನಕ್ಕೆ ಹೆಚ್ಚಿದ ಬೇಡಿಕೆ

Published:
Updated:
Deccan Herald

ಚಿತ್ರದುರ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಬ್ರಾಂಡ್‌ ರಹಿತ ಆಹಾರೋತ್ಪನ್ನಗಳ ಮಾರಾಟ ಹೆಚ್ಚಾಗಿದ್ದು, ಬ್ರೆಂಡೆಡ್‌ ಧಾನ್ಯ ಹಾಗೂ ಬೇಳೆಕಾಳುಗಳ ಬೇಡಿಕೆ ಇಳಿಮುಖವಾಗುತ್ತಿದೆ.

‘ಟ್ರೇಡ್‌ ಮಾರ್ಕ್‌ ಕಾಯ್ದೆ–1999’ರ ಅನ್ವಯ ಟ್ರೇಡ್‌ ಹೆಸರು ಮತ್ತು ವ್ಯವಹಾರವನ್ನು ನೋಂದಣಿ ಮಾಡಿಸಿದ ಕಂಪನಿಯ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ. ಬ್ರಾಂಡೆಡ್‌ ಅಕ್ಕಿ, ಗೋದಿ, ಸಕ್ಕರೆ, ತೊಗರಿ, ಹೆಸರು, ಕಡಲೆಕಾಳು ಸೇರಿ ಇತರ ಧಾನ್ಯ, ಬ್ರಾಂಡೆಡ್‌ ಮಸಾಲೆ, ಹಿಟ್ಟುಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಸಹಜವಾಗಿ ಏರಿಕೆಯಾಗಿರುವುದು ಮಾರಾಟ ಕುಸಿತಕ್ಕೆ ಕಾರಣವಾಗಿದೆ.

ಬ್ರಾಂಡ್‌ ರಹಿತ ಧಾನ್ಯ, ಆಹಾರ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಹೀಗಾಗಿ, ಬ್ರಾಂಡೆಂಡ್‌ ಉತ್ಪನ್ನಕ್ಕಿಂತ ಇವು ತುಸು ಅಗ್ಗದಲ್ಲಿ ದೊರೆಯುತ್ತಿವೆ. ಕಡಿಮೆ ಬೆಲೆ ಹಾಗೂ ಗುಣಮಟ್ಟದ ಉತ್ಪನ್ನಕ್ಕೆ ಆದ್ಯತೆ ನೀಡುವ ಗ್ರಾಹಕರ ಮನಸ್ಥಿತಿ ಅರಿತ ಚಿಲ್ಲರೆ ವ್ಯಾಪಾರಿಗಳು ಬ್ರಾಂಡ್‌ ರಹಿತ ಆಹಾರೋತ್ಪನ್ನ ಮಾರಾಟಕ್ಕೆ ಉತ್ಸುಕತೆ ತೋರುತ್ತಿದ್ದಾರೆ.

‘ಮದರ್‌’ ಬ್ರಾಂಡಿನ ಕೆ.ಜಿ ಸಕ್ಕರೆಗೆ ₹ 45 ಬೆಲೆ ನಿಗದಿ ಮಾಡಲಾಗಿದೆ. ಇದೇ ಗುಣಮಟ್ಟದ ಬ್ರಾಂಡ್‌ ರಹಿತ ಸಕ್ಕರೆ ₹ 36ಕ್ಕೆ ಲಭ್ಯವಿದೆ. ಪ್ರತಿಯೊಂದಕ್ಕೂ ಚೌಕಾಸಿ ಮಾಡುವ ಗ್ರಾಹಕರು ಇದನ್ನು ಪ್ರಶ್ನಿಸುತ್ತಿದ್ದಾರೆ. ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬ್ರಾಂಡ್‌ ರಹಿತ ಉತ್ಪನ್ನ ನೀಡುವುದು ಅನಿವಾರ್ಯ’ ಎನ್ನುತ್ತಾರೆ ನಿರಂಜನ್‌ ಪ್ರಾವಿಜನ್‌ ಸ್ಟೋರ್‌ನ ಬದ್ರಿನಾಥ್‌.

ಜಿಎಸ್‌ಟಿ ಜಾರಿಯಾದ ಬಳಿಕ ಬೇಳೆಕಾಳು ಹಾಗೂ ಧಾನ್ಯಗಳ ಬೆಲೆಯಲ್ಲಿ ಭಾರಿ ಏರಿಳಿತ ಉಂಟಾಗಿಲ್ಲ ಎಂಬುದು ಬಹುತೇಕ ವ್ಯಾಪಾರಸ್ಥರ ವಾದ. ಇದನ್ನು ಸಮರ್ಥಿಸುವ ಯಾವ ಸಾಕ್ಷ್ಯವನ್ನು ವ್ಯಾಪಾರಿಗಳು ಒದಗಿಸುವುದಿಲ್ಲ. ಆದರೆ, ಅಕ್ರಮ ವಹಿವಾಟಿಗೆ ಕಡಿವಾಣ ಬಿದ್ದರುವುದರಿಂದ ಬೆಲೆ ಏರಿಕೆ ಮತ್ತು ಇಳಿಕೆಯಲ್ಲಿ ಭಾರಿ ವ್ಯತ್ಯಾಸಗಳು ಆಗುತ್ತಿಲ್ಲ ಎಂಬುದು ಬಹುತೇಕರ ನಂಬಿಕೆ.

₹ 10 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಚಿಲ್ಲರೆ ವ್ಯಾಪಾರಿಗಳು ಜಿಎಸ್‌ಟಿ ರಿಟರ್ನ್‌ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಅಂಗಡಿಗೆ ಬೇಕಾಗಿರುವ ಉತ್ಪನ್ನಗಳನ್ನು ಖರೀದಿಸಲು ಜಿಎಸ್‌ಟಿ ನೋಂದಣಿ ಅನಿವಾರ್ಯ. ಹೀಗಾಗಿ, ಬಹುತೇಕ ಚಿಲ್ಲರೆ ವ್ಯಾಪಾರಸ್ಥರು ಜಿಎಸ್‌ಟಿ ನೋಂದಣಿ ಮಾಡಿಸಿಕೊಂಡಿದ್ದಾರೆ. ವಿವರಪಟ್ಟಿ ಸಿದ್ಧಪಡಿಸುವುದು ಹಾಗೂ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಆರಂಭದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಅವ್ಯಕ್ತ ಭಯ ಮಾಯವಾಗಿ, ವಿಶ್ವಾಸದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ.

ಲೆಕ್ಕಪತ್ರ ನಿರ್ವಹಣೆ, ವಿವರಪಟ್ಟಿ ಸಲ್ಲಿಕೆಗೆ ವ್ಯಾಪಾರಿಗಳು ಲೆಕ್ಕಪರಿಶೋಧಕರನ್ನು ಅವಲಂಬಿಸುತ್ತಿದ್ದಾರೆ. ಸಣ್ಣ ಪ್ರಮಾಣದ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ರಿಟರ್ನ್‌ ಫೈಲ್‌ ಮಾಡಲು ಮೂರು ತಿಂಗಳು ಕಾಲಾವಕಾಶ ಕಲ್ಪಿಸಲಾಗಿದೆ. ಆದರೂ, ಬಹುತೇಕ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು ರಿಟರ್ನ್‌ ಫೈಲ್‌ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಸರಕು ಖರೀದಿ ಹಾಗೂ ಮಾರಾಟದ ವಿವರಗಳನ್ನು ನಿತ್ಯವೂ ಲೆಕ್ಕಪರಿಶೋಧಕರಿಗೆ ನೀಡುತ್ತಿದ್ದಾರೆ. ಇದರಿಂದ ತೆರಿಗೆ ಪಾವತಿಯಲ್ಲಿ ಶಿಸ್ತುಬದ್ಧತೆ ಬೆಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !