ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಹೋರಾಟದ ದಿನಗಳ ಮೆಲುಕು ಹಾಕಿದ ‘ಇಂಗ್ಲಿಷ್ ಕರಿಯಪ್ಪ’

ಹಿರಿಯರ ಬಗ್ಗೆ ಯುವ ಪೀಳಿಗೆಗಿಲ್ಲ ಗೌರವ: ಸ್ವಾತಂತ್ರ್ಯ ಯೋಧನ ಬೇಸರ
Last Updated 12 ಆಗಸ್ಟ್ 2022, 6:00 IST
ಅಕ್ಷರ ಗಾತ್ರ

ಧರ್ಮಪುರ: ‘ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳಿಗೆ ಮಾರುಹೋಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದೆ. ಸ್ವಾತಂತ್ರ್ಯವೇ ನನ್ನ ಉಸಿರಾಗಿತ್ತು. ಹೋರಾಟಕ್ಕೆ ನಾನು ಎಂದಿಗೂ ಅಂಜಲಿಲ್ಲ. ಪ್ರಾಣತ್ಯಾಗಕ್ಕೂ ಸಿದ್ಧನಾಗಿದ್ದೆ...’ ಎನ್ನುವಾಗ 97ರ ಇಳಿವಯಸ್ಸಿನ ಕರಿಯಪ್ಪ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದರು.

‘ಹರಿಯಬ್ಬೆ ಪಾಳ್ಯ ಇಂಗ್ಲಿಷ್ ಕರಿಯಪ್ಪ’ ಎಂದೇ ಗುರುತಿಸಿಕೊಂಡಿರುವ ಕರಿಯಪ್ಪಸ್ವಾತಂತ್ರ್ಯ ಹೋರಾಟಗಾರು.ಹರಿಯಬ್ಬೆ ಪಾಳ್ಯದ ಕೃಷಿ ಕುಟುಂಬದ ಹನುಮಂತಪ್ಪ ಮತ್ತು ಕರಿಯಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಕರಿಯಪ್ಪ ಐದನೇಯವರು. ಹರಿಯಬ್ಬೆ ಗ್ರಾಮದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದಿದ್ದಾರೆ. ಪ್ರೌಢಶಾಲೆ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದಾಗ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಪ್ರೌಢಶಾಲೆ ವ್ಯಾಸಂಗಕ್ಕಾಗಿ ಮೈಸೂರಿನ ಡಿ.ಬನುಮಯ್ಯ ಶಾಲೆ ಸೇರಿದೆ. 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕರೆಕೊಟ್ಟ ಹೋರಾಟ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿತು. ಈ ಮಧ್ಯೆ ನೆಹರೂ ಅವರು ಬೆಂಗಳೂರಿಗೆ ಬಂದು ಭಾಷಣ ಮಾಡಿದರು. ಇದರಿಂದ ವಿದ್ಯಾರ್ಥಿಗಳು ಸಂಘಟಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಗ್ಗಿದೆವು. 1944-45ರಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ ರೈಲಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದೆವು’ ಎಂದು ಸ್ವಾತಂತ್ರ್ಯ ಪೂರ್ವದ ದಿನಗಳ ನೆನಪಿಗೆ ಜಾರಿದರು.

‘ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಹೋರಾಟ ಮಾಡಿದೆವು. ಅಂದಿನ ಜಿಲ್ಲಾಧಿಕಾರಿ ನಾಗರಾಜ ರಾವ್ ಪ್ರತಿಭಟನಾ ಸ್ಥಳಕ್ಕೆ ಬಂದಾಗ ಅವರ ತಲೆಗೆ ನಮ್ಮ ಸ್ನೇಹಿತರು ಕಲ್ಲು ಹೊಡೆದರು. ಆಗ ‘ಫೈರಿಂಗ್‌ ಆನ್’ ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದರು. ಈ ಗೋಲಿಬಾರ್‌ನಲ್ಲಿ ಸ್ನೇಹಿತ ರಾಮಸ್ವಾಮಿ ಗುಂಡಿಗೆ ಬಲಿಯಾದರು. ಉಳಿದ ನಾವೆಲ್ಲರೂ ಮೂರು ತಿಂಗಳು ಶ್ರೀರಂಗಪಟ್ಟಣದಲ್ಲಿ ಜೈಲುವಾಸ ಅನುಭವಿಸಬೇಕಾಯಿತು’ ಎಂದು ಹೋರಾಟದ ಅಂದಿನ ಕಾಲಘಟ್ಟವನ್ನು ಸ್ಮರಿಸಿಕೊಂಡರು.

‘ಜೈಲುವಾಸದಲ್ಲಿರುವ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹೋರಾಟ ಆರಂಭವಾಯಿತು. ಜಯಚಾಮರಾಜ ಒಡೆಯರ್ ಅರಮನೆಯ ಮುಂದೆಯೂ ಪ್ರತಿಭಟನೆ ಮಾಡಲಾಯಿತು. ಆಗ ನಮ್ಮ ಬಿಡುಗಡೆಯಾಯಿತು. ನಂತರ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮಿಡಿಯಟ್ ಪ್ರವೇಶ ಪಡೆದೆ. ಆ ಬಳಿಕ ಕೆ.ವಿ. ಪುಟ್ಟಪ್ಪ ಅವರಂಥ ಗುರುಗಳು ನಮಗೆ ಮಾರ್ಗದರ್ಶಕರಾದರು. ಅನೇಕ ಸಾಹಿತಿಗಳು ನಮಗೆ ಗುರುಗಳಾಗಿ ಸಿಕ್ಕಿದ್ದು ನಮ್ಮ ಹೋರಾಟಕ್ಕೆ ಸ್ಫೂರ್ತಿಯಾಯಿತು’ ಎಂದು ಹೇಳಿದರು. ಗುರುಗಳಾದ ತಳುಕಿನ ಕೃಷ್ಣರಾವ್ ಅವರನ್ನು ನೆನೆದು ಭಾವುಕರಾದರು.

‘ಸ್ವಾತಂತ್ರ್ಯ ಬಂದರೂ ಕರ್ನಾಟಕದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಲಿಲ್ಲ. ಅದಕ್ಕಾಗಿ ಮೈಸೂರು ಚಲೋ ಚಳವಳಿಯನ್ನು ಹಮ್ಮಿಕೊಳ್ಳಬೇಕಾಯಿತು. ಆನಂತರ ಕೆ.ಸಿ. ರೆಡ್ಡಿ ಮುಖ್ಯಮಂತ್ರಿಯಾದರು. ಇಂದಿನ ಯುವಕರಲ್ಲಿ ದೇಶಭಕ್ತಿ, ಹಿರಿಯರ ಬಗ್ಗೆ
ಗೌರವ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ’ ಎಂದ ಅವರು ‘ಗಂಗಾ, ಕಾವೇರಿನದಿ ಜೋಡಣೆಯಾಗಬೇಕು. ಆಗ ನಮ್ಮಗಳ ಬದುಕು ಹಸನಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT