ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮೈದುಂಬಿ ಹರಿಯುತ್ತಿವೆ ನದಿ, ಹಳ್ಳ

ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ, ಚೆಕ್ ಡ್ಯಾಂ, ಜಲಮೂಲಗಳಿಗೆ ನೀರು
Last Updated 20 ಮೇ 2022, 4:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಜಲಮೂಲಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಹಿರಿಯೂರು ತಾಲ್ಲೂಕಿನ ಸುವರ್ಣಮುಖಿ ನದಿ ಸೇರಿ ಹಳ್ಳ–ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಜೋಗಿಮಟ್ಟಿಯ ಹಿಮವತ್‌ ಕೇದಾರ ಜಲಪಾತದ ರೂಪ ಪಡೆದಿದೆ.

ಬುಧವಾರ ರಾತ್ರಿ ಆರಂಭವಾದ ಮಳೆ ನಸುಕಿನವರೆಗೂ ನಿರಂತರವಾಗಿ ಸುರಿದಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭೋರ್ಗರೆದ ಮಳೆಗೆ ಎಲ್ಲೆಲ್ಲೂ ನೀರು ಕಾಣುವಂತಾಗಿದೆ. ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ಕೆರೆ, ಕಟ್ಟೆ, ಜಲಮೂಲಗಳು ಬಹುತೇಕ ಭರ್ತಿಯಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಗೊಂಡಿದ್ದಾರೆ.

ಜಲಪಾತವಾದ ಹಿಮವತ್‌ ಕೇದಾರ:ಜೋಗಿಮಟ್ಟಿ ವನ್ಯಧಾಮದ ವ್ಯಾಪ್ತಿಯಲ್ಲಿರುವ ಹಿಮವತ್‌ ಕೇದಾರವೆಂಬ ಜರಿಯೊಂದು ಜಲಪಾದ ಸ್ವರೂಪ ಪಡೆದಿದೆ. ಅಪಾರ ಪ್ರಮಾಣದ ಮಳೆ ಸುರಿದಾಗ ಮಾತ್ರ ಇದು ಮೈದುಂಬಿಕೊಳ್ಳುತ್ತಿತ್ತು. ಮಳೆಗಾಲಕ್ಕೂ ಮೊದಲೇ ಭೋರ್ಗರೆಯುತ್ತಿರುವುದನ್ನು ಕಂಡು ಜನರು ಸಂತಸಗೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಜಲಪಾತದಲ್ಲಿ ಮಿಂದೆದ್ದು, ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಜೋಗಿಮಟ್ಟಿ ಅರಣ್ಯ ಪ್ರದೇಶ ಮಂಜು ಹಾಗೂ ಮೋಡದಿಂದ ಸಂಪೂರ್ಣ ಮುಚ್ಚಿಹೋಗಿತ್ತು. ಮಲೆನಾಡ ವಾತಾವರಣದಂತೆ ಭಾಸವಾಗುತ್ತಿತ್ತು. ಕಲ್ಲುಬಂಡೆಗಳ ನಡುವೆ ಹರಿಯುವ ನೀರಿನ ಝುಳು–ಝುಲು ಸದ್ದು ಮನಸ್ಸಿಗೆ ಮುದ ನೀಡುತ್ತಿತ್ತು. ಕಪ್ಪೆ, ಪಕ್ಷಿಗಳ ಕಿಲರವ ಮುದ ನೀಡುತ್ತಿತ್ತು. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹಲವರು ಇಲ್ಲಿಗೆ ಭೇಟಿ ನೀಡಿದ್ದರು.

ಪಿಳ್ಳೆಕೇರನಹಳ್ಳಿ ಶಾಲೆ ಜಲಾವೃತ:ನಿರಂತರ ಮಳೆ ಸುರಿದಿದ್ದರಿಂದ ಚನ್ನಕ್ಕಿಹೊಂಡ, ಗುಮಾಸ್ತರ ಕಾಲೊನಿಯ ಕೆಲವೆಡೆ ನೀರು ನುಗ್ಗಿತ್ತು. ಕಲ್ಲಿನಕೋಟೆಯಿಂದ ನೀರು ಹರಿದು ಬಂದಿದ್ದರಿಂದ ಸಿಹಿನೀರು ಹೊಂಡ ಹಾಗೂ ಎಲ್‌ಐಸಿ ಪಕ್ಕದ ಕೆಂಚಮಲ್ಲಪ್ಪ ಹೊಂಡ ಭರ್ತಿಯಾಗಿವೆ. ಸಂತೆಹೊಂಡಕ್ಕೂ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆ ಕೋಡಿಬಿದ್ದಿದೆ.

ಮಲ್ಲಾಪುರ ಕೆರೆ ಕೋಡಿ ಬಿದ್ದಿದ್ದರಿಂದ ಚಿತ್ರದುರ್ಗ ತಾಲ್ಲೂಕಿನ ಪಿಳ್ಳೆಕೇರನಹಳ್ಳಿಯ ಸರ್ಕಾರಿ ಶಾಲೆ ಜಲಾವೃತಗೊಂಡಿದೆ. ಆವರಣದಲ್ಲಿರುವ ಎರಡು ಮರಗಳು ನೆಲಕ್ಕುರುಳಿರುಳಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಜಲಾವೃತವಾಗಿರುವ ಕಾರಣ ಶಾಲೆಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಪದೇ ಪದೇ ನೀರು ನುಗ್ಗುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

21 ಹೆಕ್ಟೇರ್‌ ಬೆಳೆ ಹಾನಿ
ಬುಧವಾರ ರಾತ್ರಿ ಹಾಗೂ ಗುರುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 21 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 12.4 ಹೆಕ್ಟೇರ್‌ ತೋಟಗಾರಿಕೆ ಹಾಗೂ 8.6 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗೀಡಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 10 ಹೆಕ್ಟೇರ್‌ ತೋಟಗಾರಿಕೆ ಹಾಗೂ 5 ಹೆಕ್ಟೇರ್‌ ಕೃಷಿ ಬೆಳೆ ನಾಶವಾಗಿದೆ.

ಜಿಲ್ಲೆಯಲ್ಲಿ 53 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿತ್ರದುರ್ಗದಲ್ಲಿ 11, ಚಳ್ಳಕೆರೆ 10, ಹೊಸದುರ್ಗ 2, ಹೊಳಲ್ಕೆರೆ 11, ಹಿರಿಯೂರು 11 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 8 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಚಿತ್ರದುರ್ಗದಲ್ಲಿ 9 ಸೆಂ.ಮೀ. ಮಳೆ
ಚಿತ್ರದುರ್ಗ ನಗರದಲ್ಲಿ 9 ಸೆಂ.ಮೀ. ಮಳೆಯಾಗಿದೆ. ಗುರುವಾರ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ. ಜಿಲ್ಲೆಯಲ್ಲಿ ಸರಾಸರಿ 3.9 ಸೆಂ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿಯಲ್ಲಿ 7.8 ಸೆಂ.ಮೀ., ಭರಮಸಾಗರ 4, ಸಿರಿಗೆರೆ 5, ತುರುವನೂರು, ಹಿರೇಗುಂಟನೂರು 6, ಹಿರಿಯೂರಿನಲ್ಲಿ 5, ಬಬ್ಬೂರು 4, ಸುಗೂರು 4, ಚಳ್ಳಕೆರೆಯಲ್ಲಿ 3, ನಾಯಕನಹಟ್ಟಿ 3, ಪರಶುರಾಮಪುರ 4 ಸೆಂ.ಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 2, ಮಾಡದಕೆರೆ 6, ಹೊಳಲ್ಕೆರೆಯಲ್ಲಿ 3, ಬಿ.ದುರ್ಗ 5, ಎಚ್.ಡಿ.ಪುರ, ತಾಳ್ಯ 5ಸೆಂ.ಮೀ ಮಳೆ ಸುರಿದಿದೆ. ಮೊಳಕಾಲ್ಮೂರಿನಲ್ಲಿ 3, ರಾಂಪುರ 6, ದೇವಸಮುದ್ರ 5 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT