ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಶಾಲೆಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭ

ಪಾರದರ್ಶಕತೆಗೆ ಒತ್ತು: ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ನಿಂಗರಾಜಪ್ಪ ಹೇಳಿಕೆ
Last Updated 22 ಮೇ 2018, 12:20 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಲಾಗಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಕೆ.ಬಿ.ನಿಂಗರಾಜಪ್ಪ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ 16 ಮೊರಾರ್ಜಿ ದೇಸಾಯಿ, 4 ಕಿತ್ತೂರು ರಾಣಿ ಚೆನ್ನಮ್ಮ, 1 ಏಕಲವ್ಯ ಹಾಗೂ 3 ಅಂಬೇಡ್ಕರ್‌ ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ 1,210 ಸೀಟು ಲಭ್ಯವಿವೆ’ ಎಂದು ಹೇಳಿದರು.

‘ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ತಲಾ 50ರಂತೆ 800 ಸೀಟುಗಳಿವೆ. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಲ್ಲಿ ತಲಾ 50ರಂತೆ 200, ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ತಲಾ 50ರಂತೆ 150 ಸೀಟು ಹಾಗೂ ಏಕಲವ್ಯ ವಸತಿ ಶಾಲೆಯಲ್ಲಿ 60 ಸೀಟುಗಳಿವೆ’ ಎಂದು ಮಾಹಿತಿ ನೀಡಿದರು.

‘ಕೌನ್ಸೆಲಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಾಲೆ ಆಯ್ಕೆಯ ಅವಕಾಶವಿದ್ದು, ಸ್ಥಳದಲ್ಲೇ ದಾಖಲಾತಿ ಆದೇಶ ನೀಡಲಾಗುತ್ತದೆ. ಮಕ್ಕಳು ಆಯ್ಕೆ ಮಾಡಿಕೊಂಡ ಶಾಲೆಗಳಲ್ಲಿ ಮೇ 28ರೊಳಗೆ ದಾಖಲಾಗಬೇಕು’ ಎಂದು ವಿವರಿಸಿದರು.

ಗುಣಮಟ್ಟ ಒಂದೇ: ‘ಪೋಷಕರು ತಮ್ಮ ಊರುಗಳಿಗೆ ಹತ್ತಿರವಾದ ಶಾಲೆಗಳೇ ಬೇಕು ಎಂದರೆ ಮಕ್ಕಳಿಗೆ ಸೀಟು ಸಿಗುವುದು ಕಷ್ಟ. ಆದ್ದರಿಂದ ಅವಕಾಶ ಸಿಕ್ಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡಬೇಕು. ಎಲ್ಲಾ ವಸತಿ ಶಾಲೆಗಳಲ್ಲೂ ನೀಡುವ ಸೌಲಭ್ಯಗಳು ಮತ್ತು ಶಿಕ್ಷಣದ ಗುಣಮಟ್ಟ ಒಂದೇ ಆಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ (ಪ್ರಭಾರ) ಜಂಟಿ ನಿರ್ದೇಶಕ ನಾಗರಾಜ್ ಸಲಹೆ ನೀಡಿದರು.

4,019 ಅರ್ಜಿ: ‘ಜಿಲ್ಲೆಯಲ್ಲಿ ಲಭ್ಯವಿರುವ 1,210 ಸೀಟುಗಳಿಗೆ 4,019 ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮೂರು ದಿನಗಳ ಕಾಲ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತದೆ. ಮೊದಲ ದಿನ ಅಂಗವಿಕಲ ಮಕ್ಕಳು, ವಿಧವೆಯರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ಅನಾಥ ಮಕ್ಕಳು, ಬಾಲ ಕಾರ್ಮಿಕರು, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ, ಪ್ರವರ್ಗ-1, ಪ್ರವರ್ಗ-2ಎಗೆ ಸೇರಿದ ಮಕ್ಕಳು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಕೌನ್ಸೆಲಿಂಗ್‌ ಪ್ರಕ್ರಿಯೆಯ ಜಿಲ್ಲಾ ಸಮನ್ವಯಯಾಧಿಕಾರಿ ಆರ್.ವಿ.ಚಂದ್ರು ತಿಳಿಸಿದರು.

‘ಪ್ರವರ್ಗ 3ಎ, ಪ್ರವರ್ಗ 3ಬಿ ಹಾಗೂ ಪರಿಶಿಷ್ಟ ಜಾತಿಯ ಮಕ್ಕಳಿಗೆ ಮೇ 22ರಂದು ಕೌನ್ಸೆಲಿಂಗ್‌ ನಡೆಯುತ್ತದೆ. ಪ್ರವರ್ಗ 2ಬಿಯ ಕಾಯ್ದಿರಿಸಿದ ಪಟ್ಟಿಯಲ್ಲಿನ ಮಕ್ಕಳಿಗೆ ಮೇ 23ರಂದು ಕೌನ್ಸೆಲಿಂಗ್‌ ನಡೆಯುತ್ತದೆ. ಸೀಟು ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಬೆಂಗಳೂರು ಹಾಗೂ ಕೋಲಾರದ ಎನ್‍ಐಸಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

‘ಮೊದಲ ದಿನ 509 ಸೀಟುಗಳಿಗೆ ಮೆರಿಟ್ ಮತ್ತು ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಂಗವಿಕಲ ಮಕ್ಕಳ ಖೋಟಾದಲ್ಲಿ ಉಳಿಯುವ ಸೀಟುಗಳನ್ನು ನಂತರ ಎರಡನೇ ಪಟ್ಟಿಯಲ್ಲಿ ಪ್ರಕಟಿಸಿ ದಾಖಲು ಮಾಡಿಕೊಳ್ಳಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ವಸತಿ ಶಾಲೆಗಳ ಪ್ರಾಂಶುಪಾಲರಾದ ಜಿ.ಎಂ.ವೆಂಕಟರಮಣಪ್ಪ, ಅನಂತಕುಮಾರ್, ನಾರಾಯಣಸ್ವಾಮಿ, ಶ್ರೀನಿವಾಸ್, ಸುಗುಣಾ, ಆರ್.ಭಾರತಮ್ಮ, ಶಶಿಕಲಾ ಹಾಜರಿದ್ದರು.

ಅಂಕಿ ಅಂಶ.....
* 1,210 ಸೀಟು ಲಭ್ಯವಿವೆ
* 4,019 ಅರ್ಜಿ ಸಲ್ಲಿಕೆ
* 3 ದಿನ ಕೌನ್ಸೆಲಿಂಗ್‌

**
ಜಿಲ್ಲೆಯ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈ ಶಾಲೆಗಳಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ, ವಸತಿ ಸೇರಿದಂತೆ ಎಲ್ಲಾ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ
–ನಾಗರಾಜ್‌, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT