ಬುಧವಾರ, ಡಿಸೆಂಬರ್ 2, 2020
24 °C
ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಶೋಕ್, ಉಪಾಧ್ಯಕ್ಷರಾಗಿ ಕೆ.ಸಿ.ರಮೇಶ್ ಆಯ್ಕೆ

ಹೊಳಲ್ಕೆರೆ: ಮೊದಲ ಬಾರಿಗೆ ಗದ್ದುಗೆ ಏರಿದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಅಶೋಕ್, ಉಪಾಧ್ಯಕ್ಷರಾಗಿ ಕೆ.ಸಿ.ರಮೇಶ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 8ನೇ ವಾರ್ಡ್‌ನ ಬಿಜೆಪಿ ಸದಸ್ಯ ಅಶೋಕ್ ಒಬ್ಬರೇ ಪರಿಶಿಷ್ಟ ವರ್ಗಕ್ಕೆ ಸೇರಿರುವುದರಿಂದ ಯಾವುದೇ ಪೈಪೋಟಿ ಇಲ್ಲದೆ ನಿರಾಯಾಸವಾಗಿ ಅಧ್ಯಕ್ಷ ಸ್ಥಾನ ಪಡೆದರು. ಒಟ್ಟು 16 ವಾರ್ಡ್‌ಗಳು ಹಾಗೂ ಶಾಸಕ, ಸಂಸದರ ಎರಡು ಮತಗಳು ಸೇರಿ ಒಟ್ಟು 18 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು 10 ಸದಸ್ಯರ ಬೆಂಬಲ ಬೇಕಾಗಿತ್ತು. ಆದರೆ, ಕೇವಲ 6 ಸದಸ್ಯರು ಹಾಗೂ ಶಾಸಕ, ಸಂಸದರ 2 ಮತಗಳನ್ನು ಹೊಂದಿರುವ ಬಿಜೆಪಿ ಸುಲಭವಾಗಿ ಅಧಿಕಾರ ಪಡೆಯಿತು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕೆ.ಸಿ.ರಮೇಶ್, ವಿಜಯ್, ಕಾಂಗ್ರೆಸ್‌ನ ಬಿ.ಎಸ್.ರುದ್ರಪ್ಪ, ಪಕ್ಷೇತರ ಸದಸ್ಯೆ ಪೂರ್ಣಿಮಾ ನಾಮಪತ್ರ ಸಲ್ಲಿಸಿದರು. ಕೊನೆಗೆ ಕೆ.ಸಿ.ರಮೇಶ್ ಹೊರತುಪಡಿಸಿ ಉಳಿದ ಮೂವರು ನಾಮಪತ್ರ ವಾಪಸ್ ಪಡೆದರು. ಆಗ ಕೆ.ಸಿ.ರಮೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಪೈಪೋಟಿ ಇತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಬಿಜೆಪಿಯ ಉಳಿದ 5 ಸದಸ್ಯರು ಹಾಗೂ ಬೆಂಬಲ ಸೂಚಿಸಿದ್ದ ಇಬ್ಬರು ಪಕ್ಷೇತರ ಸದಸ್ಯರು ಆಕಾಂಕ್ಷಿಗಳಾಗಿದ್ದರು. ಬೆಳಿಗ್ಗೆ ಶಾಸಕ ಎಂ.ಚಂದ್ರಪ್ಪ ಅವರ ನೇತೃತ್ವದಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆಯ್ಕೆ ಮಾಡಲು ಸಭೆ ನಡೆಸಲಾಯಿತು.

ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಯಾಗಿದ್ದ ಬಿಜೆಪಿ ಸದಸ್ಯ ವಿಜಯ್ ಅಸಮಾಧಾನಗೊಂಡು ಹೊರನಡೆದು ಬಂಡಾಯ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ 10 ಸದಸ್ಯರ ಬೆಂಬಲ ಬೇಕಾಗಿತ್ತು. ವಿಜಯ್ ಹೊರತುಪಡಿಸಿ ಬಿಜೆಪಿಯ 5 ಹಾಗೂ ಇಬ್ಬರು ಪಕ್ಷೇತರರು ಹಾಗೂ ಶಾಸಕ, ಸಂಸದರ ಮತಗಳು ಸೇರಿ 9 ಮತಗಳಷ್ಟೇ ಇದ್ದವು. ಕೊನೆಗಳಿಗೆಯಲ್ಲಿ ಪಕ್ಷೇತರ ಸದಸ್ಯೆ ವಸಂತಾ ರಾಜಪ್ಪ ಅವರನ್ನು ಕರೆತರುವಲ್ಲಿ ಬಿಜೆಪಿ ಬಣದವರು ಯಶಸ್ವಿಯಾದರು. ಆಗ ಬಿಜೆಪಿ ಮುಖಂಡರು, ಕಾರ್ಯಕರ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

‘ಇಲ್ಲಿನ ಪಟ್ಟಣ ಪಂಚಾಯಿತಿ ಬಿಜೆಪಿಯ ಭದ್ರಕೋಟೆ ಆಗಲಿದೆ. ಮುಂಬರುವ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಕಾರ್ಯಕರ್ತರು ಅಧ್ಯಕ್ಷ, ಉಪಾಧ್ಯಕ್ಷರನ್ನು ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಶಾಸಕ ಎಂ.ಚಂದ್ರಪ್ಪ, ಸಂಸದ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ಬಿ.ದುರ್ಗ ಲಿಂಗರಾಜು, ಎಲ್.ಬಿ.ರಾಜಶೇಖರ್, ನೆಲ್ಲಿಕಟ್ಟೆ ಜಗದೀಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿ ರೂಪಾ ಸುರೇಶ್, ಕಣಿವೆ ಹಳ್ಳಿ ಜಗದೀಶ್ ಇದ್ದರು.

‘ಪ.ಪಂ. ವಶಕ್ಕೆ ರಘುಚಂದನ್ ಸೂತ್ರದಾರ’

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯುವ ಮುಖಂಡ ರಘುಚಂದನ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿಯೂ ಯುವ ಕಾರ್ಯಕರ್ತರನ್ನು ಸಂಘಟಿಸಿ 6 ಸದಸ್ಯರು ಆಯ್ಕೆಯಾಗುವಲ್ಲಿ ರಘುಚಂದನ್ ಸಫಲರಾಗಿದ್ದರು. ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಬಿಜೆಪಿ ಪಾಲಾಗಲು ಅವರ ತಂತ್ರಗಾರಿಕೆ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.

ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಯೂತ್ ಐಕಾನ್ ರಘಚಂದನ್ ಅವರಿಗೆ ಕಾರ್ಯಕರ್ತರು ಸೇಬಿನ ಹಾರ ಹಾಕಿ, ಮೆರವಣಿಗೆ ಮಾಡಿ ಸಂಭ್ರಮಿಸಿದರು.

‘ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಅತಿದೊಡ್ಡ ಹುದ್ದೆ ಪಡೆಯಬಹುದು. ಯುವ ಕಾರ್ಯಕರ್ತರೇ ನಮಗೆ ಶಕ್ತಿ. ಮುಂದೆ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿ ಮಾಡಲಾಗುವುದು’ ಎಂದು ರಘುಚಂದನ್ ಪ್ರತಿಕ್ರಿಯೆ ನೀಡಿದರು.

ಸ್ವಾತಂತ್ರ್ಯ ಬಂದು 72 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಲ್ಲಿನ ಪಟ್ಟಣ ಪಂಚಾಯಿತಿ ಬಿಜೆಪಿ ವಶವಾಗಿದೆ. ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲಾಗುವುದು.

ಎಂ.ಚಂದ್ರಪ್ಪ, ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.