ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿನಿಲಯ: ಒಬ್ಬರಲ್ಲೂ ಕೋವಿಡ್ ದೃಢಪಟ್ಟಿಲ್ಲ

ವಸತಿನಿಲಯಗಳ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾವಹಿಸಲು ಸೂಚನೆ l ಹಲವೆಡೆ ಮುಂಜಾಗ್ರತೆ, ಕೆಲವೆಡೆ ನಿರ್ಲಕ್ಷ್ಯ
Last Updated 9 ಡಿಸೆಂಬರ್ 2021, 5:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಉಡುಪಿ ಸೇರಿ ರಾಜ್ಯದ ಕೆಲ ಜಿಲ್ಲೆಗಳ ವಸತಿನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳ ಪೈಕಿ ಕೆಲವರಲ್ಲಿ ಈಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಜಿಲ್ಲೆಯ ಬಹುತೇಕ ವಸತಿನಿಲಯಗಳಲ್ಲಿ ಮೊದಲಿಗಿಂತಲೂ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಇಳಿದಿದೆ. ನಿತ್ಯ ಒಂದಂಕಿಯಷ್ಟೇ ಪ್ರಕರಣಗಳು ಇರುವ ಕಾರಣ ಶಾಲಾ ವಿದ್ಯಾರ್ಥಿಗಳಿಗಿಂತ, ಕಾಲೇಜು ವಿದ್ಯಾರ್ಥಿಗಳ ಪೈಕಿ ಅರ್ಧಕ್ಕರ್ಧ ಮಂದಿ ಮಾಸ್ಕ್ ಧರಿಸುವುದನ್ನೇ ನಿಲ್ಲಿಸಿದ್ದಾರೆ. ಇದನ್ನು ಮನಗಂಡು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಈ ನಡುವೆಯೂ ಕೆಲವೆಡೆ ನಿಯಮ ಉಲ್ಲಂಘನೆ ಆಗುತ್ತಿದೆ.

ನಿಯಮ ಪಾಲಿಸುವಂತೆ ಅಧಿಕಾರಿಗಳು ಭೇಟಿ ನೀಡಿ ಹಲವೆಡೆ ಪರಿಶೀಲಿಸಲು ಮುಂದಾಗಿದ್ದಾರೆ. ಆಯಾ ವಸತಿನಿಲಯಗಳ ನಿಲಯಪಾಲಕರಿಗೂ ಪ್ರತಿಯೊಬ್ಬ ವಿದ್ಯಾರ್ಥಿ, ಸಿಬ್ಬಂದಿಯ ಮೇಲೂ ನಿಗಾವಹಿಸಲು ಈಗಾಗಲೇ ಸೂಚನೆ ಕೂಡ ನೀಡಿದ್ದಾರೆ.

ಜಿಲ್ಲೆಯಲ್ಲಿ ಒಂದೂ ಓಮೈಕ್ರಾನ್ ಪ್ರಕರಣ ಈವರೆಗೂ ಕಂಡು ಬಂದಿಲ್ಲ. ಆದರೆ, ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ತುಸು ಏರಿಕೆ ಆಗಿರುವ ಕಾರಣಕ್ಕೆ ಒಬ್ಬ ವಿದ್ಯಾರ್ಥಿಯಿಂದ ಮತ್ತೊಬ್ಬ ವಿದ್ಯಾರ್ಥಿಗೆ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಡಿ. 3ರಂದು ಜಿಲ್ಲಾ ಆರೋಗ್ಯ ಇಲಾಖೆಯೂ ಸಭೆ ನಡೆಸಿದೆ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿ ಸರ್ಕಾರಿ, ಖಾಸಗಿ ಯಾವುದೇ ವಸತಿನಿಲಯಗಳಾಗಲೀ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಸೂಚನೆ ನೀಡಿದೆ. ಅಂದಿನಿಂದ ವಸತಿನಿಲಯಗಳು ನಿಯಮ ಪಾಲಿಸಲು ಮುಂದಾಗಿವೆ.

ಒಂದು ವಾರದಿಂದಲೂ ಕೇರಳ, ಮಹಾರಾಷ್ಟ್ರ ಸೇರಿ ಸೋಂಕು ಕಾಣಿಸಿಕೊಂಡ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನೆಗೆಟಿವ್ ವರದಿ ಬಂದ ನಂತರವೇ ಅವರಿಗೆ ವಸತಿನಿಲಯ ಹಾಗೂ ಕಾಲೇಜುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ.

ಸೋಂಕಿನ ಲಕ್ಷಣ ಇರಬಹುದಾದ 18 ವರ್ಷದೊಳಗಿನ ಸುಮಾರು 453 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದ್ದಾರೆ. ಈ ಪೈಕಿ ಒಬ್ಬರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಆದರೆ, ವಿದ್ಯಾರ್ಥಿ ಎಂಬುದು ಈವರೆಗೂ ಖಚಿತವಾಗಿಲ್ಲ. ಆತನನ್ನು ಗೃಹ ಕ್ವಾರಂಟೈನ್‌ಗೂ ಒಳಪಡಿಸಲಾಗಿದೆ. ಅದು ಓಮೈಕ್ರಾನ್ ಅಲ್ಲ ಎಂಬುದನ್ನು ಇಲಾಖೆ ದೃಢಪಡಿಸಿದೆ.

ವೈದ್ಯಕೀಯ, ನರ್ಸಿಂಗ್, ಎಂಜಿನಿಯರಿಂಗ್, ಡಿಪ್ಲೊಮಾ, ದಂತ ವೈದ್ಯಕೀಯ, ಕಾನೂನು ಪದವಿ ಸೇರಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ–ವಿದ್ಯಾರ್ಥಿನಿಯರ ವಸತಿನಿಲಯಗಳ ಮೇಲೂ ನಿಗಾವಹಿಸಲಾಗಿದೆ. ಆಯಾ ಕಾಲೇಜಿನ ಆಡಳಿತಾಧಿಕಾರಿ, ಪ್ರಾಂಶುಪಾಲರನ್ನು ಅಧಿಕಾರಿಗಳು ಸಂಪರ್ಕಿಸಿ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೆಟ್ರಿಕ್ ನಂತರದ 35, ಮೆಟ್ರಿಕ್ ಪೂರ್ವ 54 ವಸತಿನಿಲಯಗಳು ಇವೆ. 36 ವಸತಿ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 7 ಹಾಸ್ಟೆಲ್‌ಗಳು ಇವೆ. ವಿವಿಧ ಕಲ್ಯಾಣ ಇಲಾಖೆ ಪೈಕಿ ಮೆಟ್ರಿಕ್ ಪೂರ್ವ 44, ಮೆಟ್ರಿಕ್ ನಂತರದ 57 ವಸತಿನಿಲಯಗಳಿವೆ. ಬಾಲಕರಿಗಾಗಿ 53, ಬಾಲಕಿಯರಿಗಾಗಿ 48 ಪ್ರತ್ಯೇಕಿಸಲಾಗಿದೆ.

ಕೈಗೊಂಡ ಕ್ರಮಗಳು: ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ವಸತಿ ನಿಲಯಗಳಲ್ಲಿ ಕೋವಿಡ್‌ ಸುರಕ್ಷತಾ ಕ್ರಮ, ನಿರ್ವಹಣೆಗೂ ಹೆಚ್ಚು ಗಮನಹರಿಸಲಾಗಿದೆ. ಒಂದು ಮಂಚ ಬಿಟ್ಟು ಮತ್ತೊಂದು ಮಂಚದಲ್ಲೇ ಮಲಗಲು, ಗುಂಪು ಸೇರದಂತೆ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಹಲವೆಡೆ ಇದು ಪಾಲನೆಯಾಗುತ್ತಿದೆ.

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ: ವಿದ್ಯಾರ್ಥಿಗಳು ಕಾಲೇಜು ಮುಗಿಸಿಕೊಂಡು ವಸತಿನಿಲಯ ಪ್ರವೇಶಿಸುವಾಗ, ಬೆಳಿಗ್ಗೆ ತಿಂಡಿ ಹಾಗೂ ಸಂಜೆ ಊಟಕ್ಕೆ ಬರುವಾಗ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ.

ನಿಲಯದೊಳಗಿದ್ದರೂ ಅಗತ್ಯದ ಸಮಯದಲ್ಲೆಲ್ಲ ಮಾಸ್ಕ್ ಧರಿಸಬೇಕಿದೆ. ಕೈಗಳ ಶುಚಿತ್ವಕ್ಕೆ ಸ್ಯಾನಿಟೈಸರ್, ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ. ಆಯಾ ವಸತಿನಿಲಯಗಳ ನಿಲಯಪಾಲಕರು ಕೋವಿಡ್ ಮಾರ್ಗಸೂಚಿ ಅನುಸರಿಸಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದು, ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಎಸ್‌ಒಪಿ ಅನುಸರಿಸದಿದ್ದರೆ, ನಿಲಯಪಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಚನೆಗಳು

ತುರ್ತು ಅನಿವಾರ್ಯ ಇದ್ದರೆ ಮಾತ್ರ ಊರಿಗೆ ತೆರಳಬೇಕು. ವಾರಕ್ಕಿಂತಲೂ ಹೆಚ್ಚು ದಿನ ಇರುವಂತಿಲ್ಲ. ಒಂದು ವೇಳೆ ಇದ್ದಲ್ಲಿ ನಿಲಯಕ್ಕೆ ಮರಳುವಾಗ ವಿದ್ಯಾರ್ಥಿಗಳು ಕೋವಿಡ್‌ (ಆರ್‌ಟಿಪಿಸಿಆರ್) ಪರೀಕ್ಷಾ ನೆಗೆಟಿವ್ ವರದಿ ಸಲ್ಲಿಸಬೇಕು. ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೊರ ತೆರಳುವಾಗ ನಿಲಯದ ಮೇಲ್ವಿಚಾರಕರ ಪೂರ್ವಾನುಮತಿ ಪಡೆಯಬೇಕು. ಹೊರ ಹೋಗುವಾಗ, ಬಂದಾಗ ಪುಸ್ತಕದಲ್ಲಿ ನಮೂದಿಸಲು ನಿರಂತರ ನಿಗಾವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT