ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಬದಲಾದರೆ ಹೋರಾಟ–ಎಚ್ಚರಿಕೆ

7

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಬದಲಾದರೆ ಹೋರಾಟ–ಎಚ್ಚರಿಕೆ

Published:
Updated:
Deccan Herald

ಚಿತ್ರದುರ್ಗ: ಬಿಜೆಪಿಗೆ ಅಧಿಕಾರ ತಪ್ಪಿಸುವ ಉದ್ದೇಶದಿಂದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿಯನ್ನು ಬದಲಾಯಿಸಿದರೆ ನಾಯಕ ಸಮಾಜ ಉಗ್ರ ಹೋರಾಟ ಕೈಗೆತ್ತಿಕೊಳ್ಳುತ್ತದೆ ಎಂದು ನಗರಸಭೆಯ ನೂತನ ಸದಸ್ಯ ಬಿ.ವೆಂಕಟೇಶಪ್ಪ ಎಚ್ಚರಿಕೆ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳ ಬಳಿಕ ಪರಿಶಿಷ್ಟ ಪಂಗಡದ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದಿದೆ. ನಾಯಕ ಸಮುದಾಯದ ಮಹಿಳೆಗೆ ಸಿಕ್ಕಿರುವ ಅವಕಾಶವನ್ನು ತಪ್ಪಿಸಲು ಕಾಂಗ್ರೆಸ್‌–ಜೆಡಿಎಸ್‌ ಹುನ್ನಾರ ನಡೆಸುತ್ತಿವೆ. ಮೀಸಲಾತಿ ಬದಲಾವಣೆಗೆ ಸರ್ಕಾರದ ಮೇಲೆ ಒತ್ತಡ ತರಲು ಸ್ಥಳೀಯ ಮುಖಂಡರು ಬೆಂಗಳೂರಿಗೆ ತೆರಳಿದ್ದಾರೆ. ಈ ಒತ್ತಡಕ್ಕೆ ಸರ್ಕಾರ ಮಣಿದರೆ ನಾಯಕ ಸಮಾಜದ ವಿರೋಧ ಎದುರಿಸಬೇಕಾಗುತ್ತದೆ’ ಎಂದರು.

‘ನಾಯಕ ಸಮುದಾಯ ಅಧಿಕಾರ ಹಿಡಿಯದಂತೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಧಿಕೃತವಾಗಿ ಘೋಷಣೆಯಾಗಿರುವ ಮೀಸಲಾತಿಯನ್ನು ಬದಲಾಯಿಸಲು ಹವಣಿಸುತ್ತಿದ್ದಾರೆ. ಅಧಿಕಾರ ತಪ್ಪಿಸಿದರೆ ಹೋರಾಟ ಮಾರ್ಗ ಹಿಡಿಯುತ್ತೇವೆ. ಜಿಲ್ಲೆಯಾದ್ಯಂತ ನಾಯಕ ಸಮುದಾಯ ಪ್ರತಿಭಟನೆ ನಡೆಸಲಿದೆ’ ಎಂದು ಹೇಳಿದರು.

ಬಿಜೆಪಿ ಎಸ್‌ಟಿ ಘಟಕದ ಅಧ್ಯಕ್ಷ ಧನಂಜಯ್‌ ಮಾತನಾಡಿ, ‘ಇದೇ ಮೊದಲ ಬಾರಿಗೆ ನಗರಸಭೆ ಆಡಳಿತ ಬಿಜೆಪಿಗೆ ಸಿಕ್ಕಿದೆ. ಬಿಜೆಪಿಯ ತಿಪ್ಪಾರೆಡ್ಡಿ ಸ್ಥಳೀಯ ಶಾಸಕರು. ಒಂದೇ ಪಕ್ಷದ ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಇರುತ್ತದೆ. ನಗರದ ಅಭಿವೃದ್ಧಿಗೂ ಇದು ಸಹಕಾರಿಯಾಗುತ್ತದೆ. ಹೀಗಾಗಿ, ಮೀಸಲಾತಿ ಬದಲಾವಣೆಯಂತಹ ಕೀಳು ರಾಜಕೀಯಕ್ಕೆ ಸರ್ಕಾರ ಮುಂದಾಗಬಾರದು. ಒಂದು ವೇಳೆ ಮೀಸಲಾತಿ ಬದಲಿಸಿದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದರು.

19ನೇ ವಾರ್ಡ್‌ ಸದಸ್ಯೆ ತಿಪ್ಪಮ್ಮ, ನಾಯಕ ಸಮಾಜದ ಮುಖಂಡರಾದ ಷಣ್ಮುಖ, ತಿಪ್ಪೇಸ್ವಾಮಿ, ಮಾರುತಿ, ರುದ್ರೇಶ್‌, ಶಾಂತಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !