ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲೇನಹಳ್ಳಿ: ಹೆಚ್ಚಿದ ಜ್ವರ, ಜನ ಹೈರಾಣ

ಮೊಳಕಾಲ್ಮುರು ಪಟ್ಟಣಕ್ಕೆ ಹೊಂದಿಕೊಂಡ ಗ್ರಾಮ, ವೈರಸ್ ಜ್ವರ ಹರಡುವಿಕೆ
Last Updated 30 ಅಕ್ಟೋಬರ್ 2020, 10:46 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣ ಸಮೀಪದ ಸೂಲೇನಹಳ್ಳಿಯಲ್ಲಿ ಕೆಲ ದಿನಗಳಿಂದ ಜ್ವರ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗಿದ್ದು, ಜನ ಆತಂಕಕ್ಕೀಡಾಗಿದ್ದಾರೆ.

ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮದಲ್ಲಿ 150 ಕುಟುಂಬಗಳು ವಾಸವಿದ್ದು, 1000 ಜನಸಂಖ್ಯೆ ಇದೆ.

‘15ಕ್ಕೂ ಹೆಚ್ಚು ದಿನಗಳಿಂದ ಜ್ವರ, ಮೈಕೈ ನೋವು, ಬಿಟ್ಟು ಬಿಟ್ಟು ಜ್ವರ ಬರುವುದು, ಆಯಾಸ, ನಿಶ್ಶಕ್ತಿ ಲಕ್ಷಣಗಳು ಇರುವ ಪ್ರಕರಣಗಳು ಕಂಡುಬರುತ್ತಿವೆ. ಕೂಲಿ ಕಾರ್ಮಿಕರು ಹೆಚ್ಚು ವಾಸವಿದ್ದು, ಚಿಕಿತ್ಸೆಗಾಗಿ ಯಾತನೆ ಪಡುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಸಮಸ್ಯೆ ಹೆಚ್ಚಳಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ’ ಎಂದು ಗ್ರಾಮಸ್ಥ, ಶಿಕ್ಷಕ ರಾಜು ಸೂಲೇನಹಳ್ಳಿ ಮಾಹಿತಿ ನೀಡಿದರು.

ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರಲ್ಲಿ ಕೆಲವರು ಗುಣಮುಖರಾಗಿ ವಾಪಸ್ ಆಗಿದ್ದಾರೆ. ಆದರೂ ಮೈಕೈ ನೋವು, ಆಯಾಸ ಕಡಿಮೆಯಾಗಿಲ್ಲ. ಚಿಕೂನ್‌ಗುನ್ಯಾ ಲಕ್ಷಣಗಳು ಹೆಚ್ಚಾಗಿವೆ. ಬಸ್ ನಿಲ್ದಾಣ ಮುಂಭಾಗದಲ್ಲಿ ಚರಂಡಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿದೆ. ನೀರು ಹರಿದು ಹೋಗಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಭಿನವ್, ‘ಈವರೆಗೆ ಆಸ್ಪತ್ರೆಗೆ 9 ಜನ ಒಳರೋಗಿ ವಿಭಾಗಕ್ಕೆ ದಾಖಲಾಗಿದ್ದಾರೆ. ಕೋವಿಡ್ ಪರೀಕ್ಷೆಯನ್ನೂ ಮಾಡಿಸಲಾಗಿದೆ. ಸ್ವಚ್ಛತೆ ಕೊರತೆಯಿಂದಾಗಿ ಸೊಳ್ಳೆ ಕಡಿದು ಜ್ವರ ಬಂದಿರುವ ಸಾಧ್ಯತೆಗಳಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಪಂಚಾಯಿತಿ ಸಿಬ್ಬಂದಿ ಗ್ರಾಮದ ಚರಂಡಿಗಳ ಸ್ವಚ್ಛತೆ ಕಾರ್ಯ ಆರಂಭಿಸಿದ್ದಾರೆ. ಕುಡಿಯುವ ನೀರಿನಿಂದ ಸಮಸ್ಯೆ ಆಗಿರಬಹುದು ಎಂಬ ಕಾರಣಕ್ಕಾಗಿ ಮೂರು ದಿನಗಳಿಂದ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಮಟ್ಟದಿಂದ ತಜ್ಞರ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಮನೆ ಭೇಟಿ ಮೂಲಕ ಮಾಹಿತಿ ಸಂಗ್ರಹಿಸಿ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT