ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌: ಲೆಕ್ಕ ಪರಿಶೀಲನೆಗೆ ಸೂಚನೆ

ಪ್ರಗತಿ ಪರೀಶಿಲಾ ಸಭೆಯಲ್ಲಿ ಸಚಿವ ನಾರಾಯಣಗೌಡ
Last Updated 9 ಸೆಪ್ಟೆಂಬರ್ 2020, 16:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಡವರ ಹಸಿವು ನೀಗಿಸಲು ಸರ್ಕಾರ ತೆರೆದ ಇಂದಿರಾ ಕ್ಯಾಂಟೀನ್‌ಗಳು ಅವ್ಯವಹಾರದ ಆಗರಗಳಾಗಿವೆ. 10 ಜನ ಊಟ ಮಾಡಿದ್ದರೆ 50 ಜನರ ಲೆಕ್ಕೆ ತೋರಿಸಲಾಗುತ್ತಿದೆ. ಈ ಕಳ್ಳ ಲೆಕ್ಕವನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತೋಟಗಾರಿಕೆ, ರೇಷ್ಮೆ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಇಂದಿರಾ ಕ್ಯಾಂಟೀನ್‌ಗೆ ಸರ್ಕಾರ ಪ್ರತಿ ತಿಂಗಳು ₹ 20 ಕೋಟಿ ವೆಚ್ಚ ಮಾಡುತ್ತಿದೆ. ಕ್ಯಾಂಟೀನ್‌ ಗುತ್ತಿಗೆ ಪಡೆದವರು ಈ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಕ್ಯಾಂಟೀನ್‌ಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಬಹುತೇಕ ಎಲ್ಲ ಕ್ಯಾಂಟೀನ್‌ಗಳು ಸುಳ್ಳು ಲೆಕ್ಕ ನೀಡುತ್ತಿವೆ’ ಎಂದು ಅಸಮಾಧಾನ ಹೊರಹಾಕಿದರು.

‘ಕ್ಯಾಂಟೀನ್‌ ಆರಂಭಿಸಿದ ಉದ್ದೇಶ ಒಳ್ಳೆಯದು. ಇದನ್ನು ಮುಚ್ಚುವ ಪ್ರಸ್ತಾವ ಸಧ್ಯಕ್ಕೆ ಇಲ್ಲ. ಆದರೆ, ಹಣ ಸೋರಿಕೆ ಆಗುತ್ತಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳು ಸಿಕ್ಕಿವೆ. ಇವುಗಳ ಮೇಲೆ ಜಿಲ್ಲಾಧಿಕಾರಿ ನಿಗಾ ಇಡಬೇಕು. ಪ್ರತಿ ತಿಂಗಳು ಎಷ್ಟು ಜನರು ತಿಂಡಿ ಹಾಗೂ ಊಟ ಸೇವಿಸಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ವರದಿ ನೀಡಬೇಕು’ ಎಂದು ತಾಕೀತು ಮಾಡಿದರು.

ರಾಜಕಾಲುವೆ ಒತ್ತುವರಿ ತೆರವು:ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿಯನ್ನು ಪತ್ತೆಹಚ್ಚಿ ತೆರವುಗೊಳಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಶೇಖರ್‌, ‘ಹೊಸದುರ್ಗದಲ್ಲಿ ತಲೆಯತ್ತಿದ ಖಾಸಗಿ ಬಡಾವಣೆ ತಲೆಯತ್ತಿವೆ ರಾಜಕಾಲುವೆಗೆ 40 ಅಡಿ ಜಾಗ ಬಿಡುವ ಬದಲು 6 ಅಡಿ ಚರಂಡಿ ನಿರ್ಮಿಸಲಾಗಿದೆ. ಮುಂದೊಂದು ದಿನ ಜನರು ಸರ್ಕಾರವನ್ನು ದೂರುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಧ್ವನಿಗೂಡಿಸಿದರು. ‘ಚಿತ್ರದುರ್ಗ ನಗರ ವ್ಯಾಪ್ತಿಯ ರಾಜಕಾಲುವೆ ಒತ್ತುವರಿ ತೆರವು ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ’ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ‘ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಸಿದ್ಧವಿದೆ. ಶಾಸಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯ ರಘು ಆಚಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT