ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡಿ: ಡಿ. ಸುಧಾಕರ್

ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ಸೂಚನೆ
Published 3 ಜನವರಿ 2024, 15:13 IST
Last Updated 3 ಜನವರಿ 2024, 15:13 IST
ಅಕ್ಷರ ಗಾತ್ರ

ಹೊಳಲ್ಕೆರೆ: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕರ ಅರ್ಜಿಗಳನ್ನು ತಿಂಗಳ ಒಳಗೆ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಸಂವಿಧಾನ ಸೌಧದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜನತಾ ದರ್ಶನ ಕಾರ್ಯಕ್ರಮ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಪ್ರತಿ ತಿಂಗಳು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಉತ್ತಮ ಕಾರ್ಯಕ್ರಮ. ಸರ್ಕಾರದ ಪ್ರತಿ ಯೋಜನೆಯೂ ಫಲಾನುಭವಿಗಳಿಗೆ ತಲುಪಬೇಕು. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ಉದಾಸೀನ ಮಾಡದೆ ಸಾರ್ವಜನಿಕರ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಕೆಲಸ ಮಾಡಬೇಕು. ಎಲ್ಲ ಸರ್ಕಾರಗಳೂ ಜನರಿಗೆ ಅನುಕೂಲ ಆಗುವ ಕಾರ್ಯಕ್ರಮಗಳನ್ನು ನಡೆಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲೂ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ನಡೆಸಲಾಗುತ್ತಿತ್ತು. ತಹಶೀಲ್ದಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ. ಎಲ್ಲ ಇಲಾಖೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ತಿಂಗಳ ಒಳಗೆ ವಿಲೇವಾರಿ ಆಗದಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಚಂದ್ರಪ್ಪ ಹೇಳಿದರು.

‘ಇದು ಜಿಲ್ಲೆಯಲ್ಲಿ ನಡೆಯುತ್ತಿರುವ 8ನೇ ಜನತಾ ದರ್ಶನ ಕಾರ್ಯಕ್ರಮ. ಇದುವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಒಟ್ಟು 1,580 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 1,294 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 291 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಫ್ರೂಟ್ ತಂತ್ರಾಂಶದಲ್ಲಿ ಬೆಳೆ ವಿವರ ದಾಖಲಿಸಿದ ರೈತರಿಗೆ ₹ 2,000 ಬೆಳೆ ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ತಹಶೀಲ್ದಾರ್ ಬೀಬಿ ಫಾತಿಮಾ, ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಪುರಸಭೆ ಸದಸ್ಯರಾದ ಆರ್.ಎ.ಅಶೋಕ್, ಮುರುಗೇಶ್, ಮಲ್ಲಿಕಾರ್ಜುನ ಸ್ವಾಮಿ, ಕೆ.ಸಿ.ರಮೇಶ್, ಸಜಿಲ್, ಮನ್ಸೂರ್, ಬಿ.ಎಸ್.ರುದ್ರಪ್ಪ, ವಿಜಯಸಿಂಹ ಖಾಟ್ರೋತ್, ನಾಗರತ್ನಾ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಶಾಸಕ ಎಂ.ಚಂದ್ರಪ್ಪ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ ಜೆ ಇದ್ದರು.
ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು. ಶಾಸಕ ಎಂ.ಚಂದ್ರಪ್ಪ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್ ಜೆ ಇದ್ದರು.
ಹಿಂದೆ ರೈತರು ಪೌತಿ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಕಂದಾಯ ಇಲಾಖೆಗೆ ಅಲೆದು ಅಲೆದು ಚಪ್ಪಲಿ ಸವೆದು ಹೋಗುತ್ತಿದ್ದವುಲ. ಈಗ ಅಧಿಕಾರಿಗಳೇ ರೈತರ ಮನೆಗೆ ಹೋಗಿ ಕೆಲಸ ಮಾಡಿಕೊಡುವ ಕಾರ್ಯಕ್ರಮ ರೂಪಿಸಲಾಗಿದೆ.
-ಎಂ. ಚಂದ್ರಪ್ಪ, ಶಾಸಕ

ಒಟ್ಟು 676 ಅರ್ಜಿ ಸಲ್ಲಿಕೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 676 ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆ (257) ವಸತಿ ವಿಭಾಗ (83) ಸಮಾಜ ಕಲ್ಯಾಣ ಇಲಾಖೆಗಳಿಗೆ (76) ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಎಲ್ಲ ಇಲಾಖೆಗಳಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗೆ ಸಂಬಂಧಿಸಿದ ಇಲಾಖೆಯ ಕೌಂಟರ್‌ಗೆ ತೆರಳಿ ಅರ್ಜಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT