ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹಕ್ಕಿಗಾಗಿ ಕಾಲ್ನಡಿಗೆ ಜಾಥಾ

65ಕ್ಕೂ ಹೆಚ್ಚು ಸಾಗುವಳಿ ಭೂಮಿ ವಂಚಿತ ನೆಲಗೇತನಹಟ್ಟಿ ಪರಿಶಿಷ್ಟ ಜಾತಿ ರೈತರು
Last Updated 13 ಅಕ್ಟೋಬರ್ 2020, 4:35 IST
ಅಕ್ಷರ ಗಾತ್ರ

ನಾಯಕನಹಟ್ಟಿ: 25 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಪಶುಸಂಗೋಪನೆ ಇಲಾಖೆಗೆ ವರ್ಗಾಯಿಸಿರುವ ನೀತಿಯನ್ನು ಖಂಡಿಸಿ ನೆಲಗೇತನಹಟ್ಟಿ ಗ್ರಾಮದ ಪರಿಶಿಷ್ಟ ಜಾತಿಯ 65ಕ್ಕೂ ಹೆಚ್ಚು ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಕರ್ನಾಟಕ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಆದಿವಾಸಿ ಭೂಮಿಹಕ್ಕಿನ ಆಂದೋಲನ ಸಂಘಟನೆ, ಅಂಬೇಡ್ಕರ್ ಸೇನೆ ಸೇರಿ ಹಲವು ಸಂಘಟನೆಗಳು ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿದ್ದವು.

ದಲಿತ ಆದಿವಾಸಿ ಭೂಮಿಹಕ್ಕಿನ ಆಂದೋಲನ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ಮಾತನಾಡಿ, ‘ನೆಲಗೇತನಹಟ್ಟಿ ಗ್ರಾಮದಲ್ಲಿ 65ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ಗ್ರಾಮದ ಸರ್ವೆ ನಂ.6ರಲ್ಲಿ 138.21 ಎಕರೆ, 7ರಲ್ಲಿ 77.26 ಎಕರೆ, 8ರಲ್ಲಿ 88.26 ಎಕರೆ, 9ರಲ್ಲಿ 79.39 ಎಕರೆಯಷ್ಟು ಸರ್ಕಾರಿ ಭೂಮಿಯಿದೆ. 25 ವರ್ಷಗಳಿಂದ ಬಗರ್‌ಹುಕುಂ ಯೋಜನೆಯ ಅಡಿಯಲ್ಲಿ ಈ ಎಲ್ಲ ಪರಿಶಿಷ್ಟ ಜಾತಿಯ ಕುಟುಂಬಗಳು ಸಾಗುವಳಿ ಮೂಲಕ ಜೀವನ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಹಲವು ಬಾರಿ ಕಂದಾಯ ಇಲಾಖೆಗೆ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಂದಾಯ ಇಲಾಖೆ ಮತ್ತು ಸರ್ಕಾರ ಸಾಗುವಳಿ ನಿರತ ರೈತರಿಗೆ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ನೀಡದೆ ವಂಚಿಸಿದೆ. ಇದಕ್ಕಾಗಿ ಹಲವು ಬಾರಿ ಸರ್ಕಾರ ಮತ್ತು ಕಂದಾಯ ಇಲಾಖೆ ವಿರುದ್ಧ ಧರಣಿ, ಚಳವಳಿ ನಡೆಸಿ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಪರಿಶಿಷ್ಟ ಜಾತಿಯ ರೈತರ ಹಿತಕಾಯಲು ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸರ್ಕಾರಿ ಸಂಸ್ಥೆಗಳಿಗೆ ನೀಡಿದ ಭೂಮಿಯನ್ನು ವಾಪಸ್ ಪಡೆದು ನೊಂದ ರೈತರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಜಾಥಾದಲ್ಲಿ ಡಿಎಸ್‌ಎಸ್ ಸಂಚಾಲಕ ಎನ್.ಪ್ರಕಾಶ್, ಗ್ರಾಮಸ್ಥರಾದ
ಕೆ.ಬಿ.ನಾಗರಾಜ್, ಕಾಳೆಕ್ಯಾಸಯ್ಯ,
ಕೆ.ಬಿ.ಬೋರಯ್ಯ, ಪಣಿಯಪ್ಪ, ಮಹಾಸ್ವಾಮಿ, ಮುತ್ತಯ್ಯ, ಕ್ಯಾಸಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT