ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಜಾಗೃತಿ ಸಮಾವೇಶ: ಡಿ.ಕೆ.ಶಿವಕುಮಾರ್ ಸಿಎಂ ಆದರೆ ಅಸೂಯೆಪಡಲ್ಲ –ಎಚ್‌ಡಿಕೆ

Last Updated 18 ಆಗಸ್ಟ್ 2022, 21:56 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ ಜಿಲ್ಲೆ): ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಒಲಿದರೆ ನಾನು ಅಸೂಯೆ ಪಡುವುದಿಲ್ಲ. ಆದರೆ, ಅವರ ಪಕ್ಷದಲ್ಲಿ ಹಿಂದುಳಿದ ವರ್ಗದ ಮಹಾನ್ ನಾಯಕರೊಬ್ಬರು ಇದ್ದಾರೆ ಎಂಬುದನ್ನು ಮರೆಯಬಾರದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಗುರುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ತಾಲ್ಲೂಕು ಒಕ್ಕಲಿಗರ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಗಾದಿಗೆ ಡಿ.ಕೆ.ಶಿವಕುಮಾರ್ ಹೋರಾಟ ನಡೆಸಲಿ. ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ನಾನೂ ಹೋರಾಡುತ್ತೇನೆ. ಅಧಿಕಾರ ಯಾರಿಗೆ ಬೇಕಾದರೂ ಸಿಗಲಿ. ಭಗವಂತನ ಅನುಗ್ರಹ, ಸ್ವಾಮೀಜಿಗಳ ಇಚ್ಛೆ ಏನಿದೆಯೊ ನೋಡೋಣ’ ಎಂದರು.

ಡಿ.ಕೆ. ಶಿವಕುಮಾರ್‌ ಸಹ ವೇದಿಕೆಯಲ್ಲಿ ಇದ್ದರು.

‘ಒಕ್ಕಲಿಗರೇ ಇಲ್ಲದ ಉತ್ತರ ಕರ್ನಾಟಕದ ನೀರಾವರಿ ಯೋಜನೆ ಗಳನ್ನು ತ್ವರಿತಗತಿಯಲ್ಲಿಪೂರ್ಣಗೊಳಿಸಲು ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರಮಿಸಿದರು. ಇದನ್ನು ಮೆಚ್ಚಿ ಆಲಮಟ್ಟಿ ಭಾಗದ ಸಾಮಾನ್ಯ ರೈತನೊಬ್ಬ ‘ಭಾರತರತ್ನ ದೇವೇಗೌಡ’ ಎಂದು ಫಲಕ ಹಾಕಿದ್ದ. ಆದರೆ, ಆ ಭಾಗದ ಜನ ಚುನಾವಣೆಯಲ್ಲಿ ನಮಗೆ ಕೊಟ್ಟಿದ್ದೇನು’ ಎಂದು ಪ್ರಶ್ನಿಸಿದ ಅವರು, ‘ಬಹಳಷ್ಟು ಸಂದರ್ಭಗಳಲ್ಲಿ ನಮ್ಮಿಂದ ಎಲ್ಲವನ್ನೂ ಪಡೆದವರು ನಮ್ಮ ಕತ್ತು ಕೊಯ್ದಿದ್ದಾರೆ’ ಎಂದು ಅವರು ಅಸಮಾಧಾನ ಹೊರಹಾಕಿದರು.

‘ವಾಲ್ಮೀಕಿ ಸಮುದಾಯದ 15ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗುವಂತೆ ಪರಿಶ್ರಮಪಟ್ಟಿದ್ದು ದೇವೇಗೌಡರು. ಆದರೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಸಮುದಾಯದವರು ನನ್ನ ವಿರುದ್ಧ ಪಾದಯಾತ್ರೆ ನಡೆಸಿದರು. ಈಗ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ 180 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದರು.

ಅಪೇಕ್ಷೆ ವ್ಯಕ್ತಪಡಿಸಿದ ಡಿಕೆಶಿ: ರಾಜಕೀಯದ ಬಗ್ಗೆ ಜಾಗರೂಕರಾಗಿ ವಿಷಯ ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಗಾದಿ ಮೇಲಿನ ಅಭಿಲಾಷೆಯನ್ನು ಮಾರ್ಮಿಕವಾಗಿ ವ್ಯಕ್ತಪಡಿಸಿದರು.

‘ಕಿಟಕಿ, ಬಾಗಿಲು ತೆರೆದು ಮನೆಯೊಳಗೆ ಬೆಳಕು ಬರುತ್ತಿದೆ. ಬಾಗಿಲು ತೆರೆದು ಲಕ್ಷ್ಮಿಯನ್ನು ಒಳಗೆ ಕರೆದುಕೊಳ್ಳುವಂತೆ ಸಮುದಾಯದ ಇಬ್ಬರೂ ಶ್ರೀಗಳಲ್ಲಿ ಕೈಮುಗಿದು ಬೇಡಿಕೊಂಡಿದ್ದೇನೆ. ಬಾಗಿಲು ತೆರೆದು ಒಳಗೆ ಬರಮಾಡಿಕೊಳ್ಳುವ, ಇಲ್ಲವೇ ಹೊರಗೆ ಓಡಿಸುವ ವಿಚಾರ ಅವರಿಗೆ ಬಿಟ್ಟಿದ್ದು’ ಎಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಅವರತ್ತ ದೃಷ್ಟಿ ಹಾಯಿಸಿದರು.

‘ಯಾರಿಗೆ ಅಧಿಕಾರ ಸಿಕ್ಕರೂ ಸಂತೋಷ’
‘ಅಧಿಕಾರ ಒಕ್ಕಲಿಗರಿಗೆ ಸಿಗುತ್ತದೆ ಎಂಬುದು ಭಗವಂತನ ಇಚ್ಛೆ. ಡಿ.ಕೆ.ಶಿವಕುಮಾರ್ ಅಥವಾ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಯಾರಿಗೆ ಅಧಿಕಾರ ಸಿಕ್ಕರೂ ನಮಗೆ ಸಂತೋಷ’ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಹೇಳಿದರು.

‘ಇಬ್ಬರಲ್ಲಿ ಒಬ್ಬರಿಗೆ ಅಧಿಕಾರ ಸಿಗುವುದು ನಿಶ್ಚಿತ. ಭಗವಂತ ಯಾರಿಗೇ ಅಧಿಕಾರ ನೀಡಿದರೂ ನಮಗೆ ಖುಷಿ. ಕುಮಾರಸ್ವಾಮಿ ಅವರನ್ನು ಎರಡನೇ ಬಾರಿ ಮುಖ್ಯಮಂತ್ರಿ ಮಾಡುವಾಗ ಡಿ.ಕೆ. ಶಿವಕುಮಾರ್ ಅವರಲ್ಲಿದ್ದ ಉತ್ಸಾಹ ಬಣ್ಣಿಸಲು ಸಾಧ್ಯವಿಲ್ಲ. ಇಂದು ಇಬ್ಬರೂ ಒಂದೆಡೆ ಸೇರಿರುವುದು ಉತ್ತಮ ಬೆಳವಣಿಗೆ. ಇಂತಹ ಹೊಂದಾಣಿಕೆ ಇರಲಿ’ ಎಂದರು.

***

ಬಹುಮತದ ವಿಶ್ವಾಸದಲ್ಲಿ ಡಿ.ಕೆ.ಶಿವಕುಮಾರ್‌ ಇದ್ದಾರೆ. ಆದರೆ, ಸಿ.ಎಂ ಗಾದಿಗೆ ಸಿದ್ದರಾಮಯ್ಯ ಟವಲ್‌ ಹಾಕಿದ್ದಾರೆ. ಡಿಕೆಶಿ ಓವರ್‌ ಟೇಕ್‌ ಮಾಡುತ್ತಾರಾ ನೋಡೋಣ.
–ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT