ಭಾನುವಾರ, ಮೇ 22, 2022
26 °C
ಏ.28ರಂದು ಜಿಲ್ಲೆಗೆ ಪ್ರವೇಶ, ಮೂರು ದಿನ ತಾಲ್ಲೂಕು ಪ್ರವಾಸ

ಜನತಾ–ಜಲಧಾರೆ ಯಾತ್ರೆಗೆ ಜೆಡಿಎಸ್‌ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಾವೇರಿ, ಕೃಷ್ಣ ಹಾಗೂ ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸೃಷ್ಟಿಯಾಗಿರುವ ವಿವಾದವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಮ್ಮಿಕೊಂಡಿರುವ ಜನತಾ–ಜಲಧಾರೆ ಯಾತ್ರೆಯು ಏ. 28ರಂದು ಕೋಟೆನಾಡು ಪ್ರವೇಶಿಸಲಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಯಶೋಧರ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಏ.12ರಂದು ಚಾಮರಾಜನಗರದಿಂದ ಯಾತ್ರೆ ಆರಂಭವಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದೆ. ಜಿಲ್ಲೆಯಲ್ಲಿ ಸಂಚರಿಸುವ ಯಾತ್ರೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಕಲಾತಂಡಗಳ ಮೂಲಕ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುವುದು. ತಳಿರು ತೋರಣಗಳಿಂದ ಮಾರ್ಗವನ್ನು ಸಿಂಗರಿಸಬೇಕು. ಹಬ್ಬದ ವಾತಾವರಣ ಸೃಷ್ಟಿಸಬೇಕು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಶಕ್ತಿಮೀರಿ ಕೆಲಸ ಮಾಡಬೇಕು. ಯಾತ್ರೆಯು ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ’ ಎಂದು ಹೇಳಿದರು.

‘ತುಂಗಭದ್ರಾ ಜಲಾಶಯದ ನೀರು ಸಂಗ್ರಹಿಸುವ ಯಾತ್ರೆ ಬಳ್ಳಾರಿ ಮೂಲಕ ಕೋಟೆನಾಡು ಪ್ರವೇಶಿಸಲಿದೆ. ಏ.28ರಂದು ಮೊಳಕಾಲ್ಮುರು, ಚಳ್ಳಕೆರೆ ಹಾಗೂ ನಾಯಕನಹಟ್ಟಿಯಲ್ಲಿ ಯಾತ್ರೆ ಸಂಚರಿಸಲಿದೆ. ಏ.29ರಂದು ಹೊಳಲ್ಕೆರೆ ಹಾಗೂ ಹೊಸದುರ್ಗ, ಏ.30ರಂದು ಹಿರಿಯೂರಿನ ವಿ.ವಿ. ಸಾಗರ ಹಾಗೂ ಗಾಯತ್ರಿ ಜಲಾಶಯದ ಜಲ ಸಂಗ್ರಹಿಸಿ ಚಿತ್ರದುರ್ಗ ತಲುಪಲಿದೆ’ ಎಂದು ಹೇಳಿದರು.

‘ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ನೀರು ಒದಗಿಸುವ ಮಹತ್ತರ ಆಶಯವನ್ನು ಇಟ್ಟುಕೊಳ್ಳಲಾಗಿದೆ. ಬರದ ಭೂಮಿಯಾಗಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರು ತರುವ ಅಗತ್ಯವಿದೆ. ಕೋಟೆನಾಡು ನೀರಾವರಿ ಸೌಲಭ್ಯ ಪಡೆಯಲು ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕಿದೆ’ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ‘ಹಿಂದೂ ಮುಸ್ಲಿಮರ ನಡುವೆ ಹುಳಿ ಹಿಂಡುವ ಕೆಲಸವನ್ನು ಆಡಳಿತಾ ರೂಢ ಬಿಜೆಪಿ, ಬಜರಂಗದಳ, ಆರ್‌ಎಸ್‌ಎಸ್‌ ಮಾಡುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಹಿಂದೂಗಳೇ ಬೇಸತ್ತಿದ್ದಾರೆ. ಕೋಮುವಾದಿಗಳ ಕುಹಕಗಳಿಗೆ ಉತ್ತರ ನೀಡುವ ಸಂದರ್ಭ ಸನೀಹದಲ್ಲಿದೆ. ಎಲ್ಲರೂ ಶಾಂತಿಯಿಂದ ಇರಬೇಕಿದೆ’ ಎಂದು ಸಲಹೆ ನೀಡಿದರು.

‘ಜಲಧಾರೆ ಯಾತ್ರೆ ಮುಂಬರುವ ಚುನಾವಣೆಯ ಶುಭ ಸೂಚನೆಯಂತೆ ಕಾಣುತ್ತಿದೆ. ವಿನೂತನ ಪ್ರಯೋಗದ ಯಶಸ್ಸು ನಾಯಕರ ಕೈಯಲ್ಲಿದೆ. ಆಂತರಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಜೆಡಿಎಸ್‌ಗೆ ಉತ್ತಮ ಭವಿಷ್ಯವಿದ್ದು, ಪ್ರತಿಯೊಬ್ಬ ಕಾರ್ಯಕರ್ತನೂ ಶಕ್ತಿಮೀರಿ ಕೆಲಸ ಮಾಡಬೇಕಿದೆ. ಜೆಡಿಎಸ್‌ ಶಕ್ತಿಯನ್ನು ಬಲಪಡಿಸಬೇಕಿದೆ’ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಠದಕುರುಬರಹಟ್ಟಿ ಈರಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮುಖಂಡರಾದ ಸಣ್ಣತಿಮ್ಮಣ್ಣ, ಹನುಮಂತರಾಯಪ್ಪ, ಗಣೇಶ್‍ಮೂರ್ತಿ, ಮಂಜುನಾಥ್, ಪರಮೇಶ್, ಪ್ರತಾಪ್ ಜೋಗಿ, ಲಲಿತಾ ಕೃಷ್ಣಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು