ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದೆ ವಿರುದ್ಧ ಕೋಟೆನಾಡು ಭಾಗಶಃ ಬಂದ್

ಬೀದಿಗೆ ಇಳಿದ ರೈತರು, ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
Last Updated 28 ಸೆಪ್ಟೆಂಬರ್ 2020, 13:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿದ ಮಸೂದೆಗಳನ್ನು ವಿರೋಧಿಸಿ ರೈತರು ಮತ್ತು ಕಾರ್ಮಿಕರು ಸೋಮವಾರ ಕರೆ ನೀಡಿದ್ದ ಬಂದ್‌ ಕೋಟೆನಾಡಲ್ಲಿ ಭಾಗಶಃ ಯಶಸ್ವಿಯಾಯಿತು. ತಾಲ್ಲೂಕು ಕೇಂದ್ರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಯಿತು. ಚಳ್ಳಕೆರೆ ತಾಲ್ಲೂಕಿನಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಾಯಿತು. ಮೊಳಕಾಲ್ಮುರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಸಾರಿಗೆ ಸಂಚಾರಕ್ಕೆ ಅವಕಾಶ ಸಿಕ್ಕಿದ್ದರಿಂದ ಗ್ರಾಮೀಣ ಪ್ರದೇಶದ ಜನಜೀವನ ಸಹಜವಾಗಿತ್ತು.

ಮಾರುಕಟ್ಟೆ ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಮಧ್ಯಾಹ್ನದವರೆಗೆ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಆಟೊ, ಟ್ಯಾಕ್ಸಿಗಳು ಅಲ್ಲಲ್ಲಿ ಸಂಚಾರಿಸಿದವು. ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಎಂದಿನಂತೆ ಸೇವೆ ಒದಗಿಸಿದವು. ಪ್ರಯಾಣಿಕರಿಲ್ಲದೇ ಖಾಸಗಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹಣ್ಣು ಹಾಗೂ ತರಕಾರಿ ಅಂಗಡಿಗಳು ಬಾಗಿಲು ತೆರೆದಿದ್ದವು. ಪ್ರಮುಖ ರಸ್ತೆಗಳಲ್ಲಿ ವಾಹನ ಹಾಗೂ ಜನಸಂಚಾರ ವಿರಳವಾಗಿತ್ತು.

ಸಂತೆಪೇಟೆ, ಬಿ.ಡಿ.ರಸ್ತೆ, ಹೊಳಲ್ಕೆರೆ ಮಾರ್ಗ, ಮೆದೇಹಳ್ಳಿ ರಸ್ತೆ, ಜೆಸಿಆರ್‌ ಬಡಾವಣೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಣಿಜ್ಯ ವಹಿವಾಟು ಸ್ತಬ್ಧವಾಗಿತ್ತು. ತರಕಾರಿ, ಹೂ ಹಾಗೂ ಹಣ್ಣು ಮಾರುಕಟ್ಟೆಯಲ್ಲಿ ಮಳಿಗೆ ಬಾಗಿಲು ತೆರೆದಿದ್ದರೂ ಗ್ರಾಹಕರು ಕಾಣಿಸಿಕೊಳ್ಳಲಿಲ್ಲ. ಕೋವಿಡ್‌ ಕಾರಣಕ್ಕೆ ಮುರುಘರಾಜೇಂದ್ರ ಕ್ರೀಡಾಂಗಣ ಹಾಗೂ ಹಳೆ ಮಾಧ್ಯಮಿಕ ಶಾಲಾ ಅವರಣದಲ್ಲಿ ತೆರೆದ ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಗ್ರಾಹಕರಿದ್ದರು.

ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳನ್ನು ಹೊರತುಪಡಿಸಿ ಉಳಿದ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಕಾಂಗ್ರೆಸ್, ಜೆಡಿಎಸ್‌ ಹಾಗೂ ಎಡಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು. ರೈತ, ಕಾರ್ಮಿಕ ಸಂಘಟನೆಗಳೊಂದಿಗೆ ಕನ್ನಡಪರ ಹಾಗೂ ದಲಿತ ಸಂಘಟನೆಗಳು ಕೈಜೋಡಿಸಿದ್ದರಿಂದ ಪ್ರತಿಭಟನೆ ಜೋರಾಗಿ ನಡೆಯಿತು. ಭಿನ್ನಾಭಿಪ್ರಾಯಗಳನ್ನು ಮರೆತು ಸಂಘ–ಸಂಸ್ಥೆಗಳು ಒಗ್ಗೂಡಿ ಹೋರಾಟ ನಡೆಸಿದವು.

ಬೆಳಿಗ್ಗೆ 6 ಗಂಟೆಯಿಂದಲೇ ಹೋರಾಟಗಾರರು ಬೀದಿಗೆ ಇಳಿದರು. ಅಂಗಡಿ ಬಾಗಿಲು ತೆರೆಯಲು ಮುಂದಾಗಿದ್ದವರ ಮನವೊಲಿಸಿದರು. ಕೆಲವು ಅಂಗಡಿಗಳನ್ನು ಒತ್ತಾಯ ಪೂರ್ವಕವಾಗಿ ಬಾಗಿಲು ಹಾಕಿಸಿದರು. ದ್ವಿಚಕ್ರ ವಾಹನದಲ್ಲಿ ಮೆರವಣಿಗೆ ನಡೆಸಿ ಬಂದ್‌ ಬಿಸಿ ಹೆಚ್ಚುವಂತೆ ನೋಡಿಕೊಂಡರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ತಡೆಯಲು ಪ್ರಯತ್ನಿಸಿದರು. ಈ ವೇಳೆ ಸಂಸ್ಥೆಯ ಅಧಿಕಾರಿಗಳು, ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.

9 ಗಂಟೆಯ ಬಳಿಕ ಗಾಂಧಿ ವೃತ್ತಕ್ಕೆ ಪ್ರತಿಭಟನಾಕಾರರು ಜಮಾಯಿಸಿದರು. ನೀಲಕಂಠೇಶ್ವರ ದೇಗುಲದಿಂದ ಕಾಂಗ್ರೆಸ್‌ ಮುಖಂಡರು ಎತ್ತಿನ ಗಾಡಿಯ ಮೆರವಣಿಗೆಯಲ್ಲಿ ಬಂದರು. ಕನ್ನಡ ಪರ ಸಂಘಟನೆ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಆನೆಬಾಗಿಲು ಬಳಿಯಿಂದ ಗಾಂಧಿ ವೃತ್ತಕ್ಕೆ ಮೆರವಣಿಗೆ ನಡೆಸಿದರು. ಸಾವಿರ ಜನರು ಗಾಂಧಿ ವೃತ್ತದಲ್ಲಿ ಸೇರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಭರಾಟೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತರು.

‘ಜೈ ರೈತ, ಜೈ ಜೈ ರೈತ’, ‘ಅನ್ನದಾತನಿಗೆ ಜೈ’, ‘ರೈತ – ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಘೋಷಣೆಗಳು ಮೊಳಗಿದವು. ರೈತ ಸಂಘದ ಹಸಿರು ಭಾವುಟ, ಎಡಪಕ್ಷಗಳ ಕೆಂಬಾವುಟ ಹಾಗೂ ಕನ್ನಡಾಂಭೆಯ ಧ್ವಜಗಳು ಹಾರಾಡುತ್ತಿದ್ದವು. ಧ್ವನಿವರ್ಧಕ ಬಳಸಲು ಆರಂಭದಲ್ಲಿ ಪೊಲೀಸರು ಅವಕಾಶ ನೀಡಲಿಲ್ಲ. ಈ ವಿಚಾರಕ್ಕೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಬೆಂಕಿ ಹಾಕಲಾಯಿತು. ಟೈರಿಗೆ ಬೆಂಕಿ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಗಾಂಧಿ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಂದ್ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT