ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಾಡಿಗರಹಟ್ಟಿ ಕಲುಷಿತ ನೀರು: ರಕ್ತ ಪರಿಚಲನೆಯಲ್ಲಿನ ಸಮಸ್ಯೆಯಿಂದ ಮಂಜುಳಾ ಸಾವು

Published 12 ಆಗಸ್ಟ್ 2023, 15:08 IST
Last Updated 12 ಆಗಸ್ಟ್ 2023, 15:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಮಂಜುಳಾ ಅವರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಶನಿವಾರ ಲಭ್ಯವಾಗಿದ್ದು, ರಕ್ತ ಪರಿಚಲನೆಯಲ್ಲಿ ಉಂಟಾದ ತೊಂದರೆಯಿಂದ ಕೊನೆಯುಸಿರೆಳೆದಿರುವುದಾಗಿ ದೃಢಪಟ್ಟಿದೆ.

‘ಅತಿಯಾದ ವಾಂತಿ–ಭೇದಿಯಿಂದ ಗಾಬರಿಗೊಂಡಿದ್ದ ಅವರನ್ನು ನಿರ್ಜಲೀಕರಣ ಬಾಧಿಸಿತ್ತು. ರಕ್ತದೊತ್ತಡ ಕಡಿಮೆಯಾಗಿ ಹೃದಯಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗದೇ ಮೃತಪಟ್ಟಿದ್ದಾರೆ’ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾಹಿತಿ ನೀಡಿದ್ದಾರೆ.

ಮೃತಪಟ್ಟವರ ದೇಹದಲ್ಲಿ ವಿಷಕಾರಿ ಅಂಶಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮೃತದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಮೃತಪಟ್ಟ ಐವರ ಪೈಕಿ ನಾಲ್ವರ ವರದಿ ಲಭ್ಯವಾಗಿದ್ದು, ಯಾರೊಬ್ಬರ ದೇಹದಲ್ಲಿಯೂ ವಿಷಕಾರಿ ಅಂಶಗಳಿಲ್ಲ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯ ಖಚಿತಪಡಿಸಿದೆ.

ನೀರಿನಲ್ಲಿ ವಿಷ ಬೆರೆಸಲಾಗಿದೆ ಎಂಬ ಬಲವಾದ ಆರೋಪ ಕೇಳಿಬಂದಿದ್ದರಿಂದ ಮೃತದೇಹದ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಮಂಜುಳಾ ಅವರ ಮೃತದೇಹದಲ್ಲಿ ವಿಷಕಾರಿ ಅಂಶಗಳಿಲ್ಲ ಎಂಬುದು ದೃಢಪಟ್ಟಿತ್ತು. ಕಲುಷಿತ ನೀರಿಗೆ ಬಲಿಯಾದ ರುದ್ರಪ್ಪ, ಪ್ರವೀಣ್‌ ಹಾಗೂ ಪಾರ್ವತಮ್ಮ ಅವರ ದೇಹದಲ್ಲಿಯೂ ವಿಷಕಾರಿ ಅಂಶಗಳಿಲ್ಲ ಎಂಬುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಮೃತಪಟ್ಟ ರಘು ಎಂಬುವರ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬರುವುದು ಬಾಕಿ ಇದೆ.

ಮತ್ತೆ ಇಬ್ಬರು ಅಸ್ವಸ್ಥ

ಕವಾಡಿಗರಹಟ್ಟಿಯಲ್ಲಿ ಶನಿವಾರ ಮತ್ತೆ ಇಬ್ಬರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.

ವಾಂತಿ–ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡವರಲ್ಲಿ 213 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇನ್ನೂ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಾಡಿಗರಹಟ್ಟಿ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT