ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌.ಡಿ.ಸುಂದರೇಶ್‌ ಅಧ್ಯಯನ ಪೀಠ ಸ್ಥಾಪಿಸಿ: ಬಡಗಲಪುರ ನಾಗೇಂದ್ರ ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ
Last Updated 21 ಡಿಸೆಂಬರ್ 2021, 12:44 IST
ಅಕ್ಷರ ಗಾತ್ರ

ಚಿತ್ರದುರ್ಗ: ರೈತ ಹೋರಾಟಗಾರ ಎನ್‌.ಡಿ.ಸುಂದರೇಶ್‌ ಹೆಸರಿನಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಇದನ್ನು ಪಕ್ಷಾತೀತವಾಗಿ ಪ್ರತಿಯೊಬ್ಬರು ಬೆಂಬಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ಇಲ್ಲಿನ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಏರ್ಪಡಿಸಿದ್ದ ‘ಎನ್‌.ಡಿ.ಸುಂದರೇಶ್‌ ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತ ಸಂಘದ ಸಂಸ್ಥಾಪಕರಲ್ಲಿ ಎನ್‌.ಡಿ.ಸುಂದರೇಶ್‌ ಪ್ರಮುಖರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರೊಂದಿಗೆ ರೈತರ ಪರವಾಗಿ ಅಪೂರ್ವ ಕೆಲಸ ಮಾಡಿದ್ದಾರೆ. ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠವಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಸುಂದರೇಶ್‌ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಆಗಬೇಕು’ ಎಂದು ಆಗ್ರಹಿಸಿದರು.

‘ರೈತ ಚಳವಳಿಯಲ್ಲಿ ಸುಂದರೇಶ್‌ ಅವರ ಪಾತ್ರ ಹಿರಿದು. ಉನ್ನತ ವ್ಯಾಸಂಗ ಮಾಡಿದರೂ ಹಳ್ಳಿಗಾಡಿನ ರೈತರ ಧ್ವನಿಯಾಗಿ ಗುರುತಿಸಿಕೊಂಡವರು. ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಸೇರಿ ಕರ್ನಾಟಕದಲ್ಲಿ ರೈತರ ಅಲೆಯನ್ನು ಸೃಷ್ಟಿಸಿದರು. ಸಮಾಜವಾದಿ ಚಳವಳಿಯ ಹಲವು ನಾಯಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು’ ಎಂದರು.

‘ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ಸುಂದರೇಶ್‌, ಸಾಹಿತಿ ಕುವೆಂಪು ಅವರ ಹತ್ತಿರದ ಸಂಬಂಧಿ. ವಿದ್ಯಾರ್ಥಿ ದಿಸೆಯಿಂದಲೇ ಹೋರಾಟದಲ್ಲಿ ತೊಡಗಿಕೊಂಡರು. ಸಮಾಜದಲ್ಲಿ ಬೇರೂರಿದ ಮೌಢ್ಯದ ಬಗ್ಗೆ ಅವರು ಧ್ವನಿ ಎತ್ತಿದರು. ಅಧಿಕಾರ, ಹುದ್ದೆಯ ಬೆನ್ನುಹತ್ತಿ ಹೋಗದೇ ಕೃಷಿ ಬದುಕಿಗೆ ಮರಳಿದರು. ಶಿವಮೊಗ್ಗದಲ್ಲಿ ಶುರುವಾದ ಕಬ್ಬು ಬೆಳೆಗಾರರ ಸಂಘ ಕ್ರಮೇಣ ರೈತ ಸಂಘವಾಗಿ ಪರಿವರ್ತನೆ ಆಯಿತು. ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಿತು’ ಎಂದು ನೆನಪಿಸಿಕೊಂಡರು.

‘ಸಮಾಜವಾದಿ ಚಳವಳಿಯ ತವರೂರಾಗಿದ್ದ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳು ಕೋಮುವಾದಿಗಳಿಗೆ ನೆಲೆಯಾಗಿವೆ. ಅಂಬೇಡ್ಕರ್‌ ಸ್ಮಾರಕಕ್ಕೆ ಸ್ಥಳ ನೀಡಿ, ಅವರ ಲಂಡನ್‌ ನಿವಾಸವನ್ನು ಜೀರ್ಣೋದ್ಧಾರ ಮಾಡಿ ದಲಿತರ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಅಂಬೇಡ್ಕರ್‌ ಪರ ಇರುವುದಾಗಿ ಹೇಳಿಕೊಳ್ಳುತ್ತ ಸಂವಿಧಾನದ ಅಂಗವನ್ನು ಊನ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಹಸಿರು ಟವೆಲ್‌ನಿಂದ ಡಕಾಯತಿ’

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಎನ್‌.ಡಿ.ಸುಂದರೇಶ್‌ ಅವರು ಚಳವಳಿಯ ಭಾಗವಾಗಿ ಮುನ್ನೆಲೆಗೆ ತಂದಿರುವ ಪವಿತ್ರವಾದ ಹಸಿರು ಟವೆಲ್‌ನ್ನು ಬಳಸಿ ಕೆಲವರು ಡಕಾಯತಿ ಮಾಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

‘ರಾಜಕೀಯ ಪುಡಾರಿಗಳು, ದಂಧೆಕೋರರು ಹಸಿರು ಟವೆಲ್‌ ಬಳಸುತ್ತಿದ್ದಾರೆ. ಸ್ಥಳೀಯ ಮಟ್ಟದಿಂದ ಅಂತರರಾಷ್ಟ್ರೀಯ ಹಂತದವರೆಗೆ ಹಸಿರು ಟವೆಲ್‌ ಗೌರವ ಹಾಳು ಮಾಡುವ ಹುನ್ನಾರಗಳು ನಡೆಯುತ್ತಿವೆ. ಇಂತಹ ಹೇಸಿಗೆ ಕೆಲಸವನ್ನು ಯಾರೂ ಮಾಡಬಾರದು. ಇದರ ಗೌರವ ಕಾಪಾಡಲು ರೈತರು ಮುಂದಾಗಬೇಕು’ ಎಂದು ಕರೆ ನೀಡಿದರು.

‘ರೈತ ಚಳವಳಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕಟ್ಟುವ ಅಗತ್ಯವಿದೆ. ಚಳವಳಿ ನೇತೃತ್ವ ವಹಿಸಿದ ಎಲ್ಲರೂ ಪ್ರತಿ ವರ್ಷ ಆಸ್ತಿ ಘೋಷಣೆ ಮಾಡಿಕೊಳ್ಳುತ್ತಿದ್ದೇವೆ. ಕೆರೆ ಒತ್ತುವರಿ ಮಾಡಿಕೊಂಡವರನ್ನು ಸಂಘದಿಂದ ದೂರ ಇಡುತ್ತಿದ್ದೇವೆ. ರೈತರ ಹೆಸರು ಬಳಸಿಕೊಂಡು ಮೂರನೇ ದರ್ಜೆಯ ಪ್ರಜೆಗಳಾಗುವುದು ಬೇಡ’ ಎಂದರು.

ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ‘ಸ್ವಾಮಿನಾಥನ್‌ ಆಯೋಗವನ್ನು ಕೇಂದ್ರ ಸರ್ಕಾರವೇ 13 ವರ್ಷಗಳ ಹಿಂದೆ ನೇಮಕ ಮಾಡಿತ್ತು. ಬೀಜ, ಗೊಬ್ಬರ, ಉಳಿಮೆ, ರೈತರ ಶ್ರಮ, ಭೂಮಿ ಬಾಡಿಗೆ ಲೆಕ್ಕ ಹಾಕಿ ಇದಕ್ಕೆ ಶೇ 50ರಷ್ಟು ಸೇರಿಸಿ ಬೆಳೆಗೆ ದರ ನಿಗದಿ ಮಾಡಬೇಕು. ಬಿಜೆಪಿ ಸರ್ಕಾರ ಈವರೆಗೆ ಸ್ವಾಮಿನಾಥ್‌ ಆಯೋಗದ ವರದಿ ಜಾರಿಗೆ ತರಲು ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತಪರ ರಾಜಕಾರಣಿಗಳು ಒಗ್ಗೂಡಲಿ’

ಸರಳ ಜೀವನ ನಡೆಸುವ ಹಾಗೂ ಕೃಷಿ ಬದುಕಿಗೆ ಹತ್ತಿರದಲ್ಲಿರುವ ರಾಜಕಾರಣಿಗಳು ಒಗ್ಗೂಡುವ ಅಗತ್ಯವಿದೆ. ರೈತ ಸಂಘವೇ ಈ ಕಾರ್ಯವನ್ನು ಮಾಡಿದರೆ ಅನುಕೂಲ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ಸಲಹೆ ನೀಡಿದರು.

‘ಜೆಡಿಯು ‘ಯುನೈಟೆಡ್‌’ ಅಲ್ಲ; ಅದು ‘ಯುನೈಟಿಂಗ್‌’ ಎಂದು ನಾನು ಭಾವಿಸಿದ್ದೇನೆ. ಸಮಾನ ಮನಸ್ಕರನ್ನು ಒಗ್ಗೂಡಿಸುವ ಕಾರ್ಯ ಮಾಡುವ ಪ್ರಯತ್ನಕ್ಕೆ ಕೈಹಾಕುತ್ತಿದ್ದೇನೆ. ಹಲವು ಬಣಗಳಾಗಿರುವ ರೈತ ಸಂಘ ಕೂಡ ಒಗ್ಗೂಡಬೇಕಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬರ ಬದುಕಿನಲ್ಲಿ ಹಣ ಮುಖ್ಯವಾಗುತ್ತಿದೆ. ರೈತರು ಹಣದ ಹಿಂದೆ ಓಡುತ್ತಿದ್ದಾರೆ. ಕೃಷಿ ಕ್ಷೇತ್ರವೂ ಈ ನಿಟ್ಟಿನಲ್ಲಿ ಬದಲಾವಣೆ ಹೊಂದುತ್ತಿರುವುದು ದುರದೃಷ್ಟಕರ. ಸುಸ್ಥಿರ ಜೀವನಕ್ಕೆ ಕೃಷಿ ಮಾಡಬೇಕೆ ಹೊರತು ಲಾಭಕ್ಕಾಗಿ ಅಲ್ಲ’ ಎಂದು ಅಭಿಪ್ರಾಯಪಟ್ಟರು.

ಚಿಂತಕ ಶಿವಸುಂದರ್‌, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ ಬಾಬು, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ್‌, ಹೋರಾಟಗಾರ ಶಿವಾನಂದ ಕುಗ್ವೆ, ಹೊರಕೇರಪ್ಪ, ಎಸ್‌.ಸಿ.ಮಧುಚಂದನ್‌, ತಿಮ್ಮಣ್ಣ, ಎಐಟಿಯುಸಿ ಮುಖಂಡ ಸುರೇಶಬಾಬು, ಚಿನ್ನೂರು ಮುನಿರಾಜು, ಕೊಟ್ರಬಸಪ್ಪ, ಬಸವರೆಡ್ಡಿ, ಕಲ್ಪನಾ, ಸಿದ್ದಮ್ಮ ಇದ್ದರು.

***

ಕೃಷಿ ಅಭಿವೃದ್ಧಿ, ರೈತರ ಏಳಿಗೆಯ ಹೆಸರಿನಲ್ಲಿ ನರೇಂದ್ರ ಮೋದಿ ಮತ ಪಡೆದರು. ಅಧಿಕಾರಕ್ಕೆ ಏರಿದ ಬಳಿಕ ದೇವರು, ಧರ್ಮದ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ.

ಜೆ.ಎಂ.ವೀರಸಂಗಯ್ಯ,ರೈತ ಸಂಘದ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT