ಚಳ್ಳಕೆರೆ: ‘ಪರಿಸರ, ಪಕ್ಷಿ, ಕೀಟಗಳ ಬಗ್ಗೆ ಸೂಕ್ಷ್ಮ ದೃಷ್ಟಿ ಇರಿಸಿಕೊಂಡಿದ್ದವರು ಕನ್ನಡದ ಹೆಸರಾಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ ಎಂದು ಸಹ ಶಿಕ್ಷಕಿ ಸಾಕ್ಷಿ ಅಭಿಪ್ರಾಯಪಟ್ಟರು.
ನಗರದ ಪಾವಗಡ ರಸ್ತೆಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಸಿರಿಯಜ್ಜಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಡು, ನಾಡು ಹಾಗೂ ಮಾನವನ ಬದುಕಿನ ವೈರುಧ್ಯಗಳನ್ನೇ ಕಥೆಗಳನ್ನಾಗಿಸಿದವರು ತೇಜಸ್ವಿ. ಚರಿತ್ರೆಯ ಅಪಹಾಸ್ಯ, ತಿಳಿಹಾಸ್ಯ ಮತ್ತು ವಿನೋದದ ಜತೆಗೆ ಪ್ರತಿರೋಧವನ್ನು ತಮ್ಮ ಸೃಜನಶೀಲ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
‘ತೇಜಸ್ವಿ ಅವರು ತಮ್ಮ ಬರಹದ ಮೂಲಕ ಸಾಮಾಜಿಕತೆಯಿಂದ ತಾತ್ವಿಕತೆ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲೇ ಮಕ್ಕಳಿಗೆ ತೇಜಸ್ವಿ ಅವರ ಸಾಹಿತ್ಯವನ್ನು ಪರಿಚಯ ಮಾಡಿಸಬೇಕು’ ಎಂದು ಶಿಕ್ಷಕಿ ವಿ. ದಿವಿಜಾ ಮನವಿ ಮಾಡಿದರು.
ಮುಖ್ಯಶಿಕ್ಷಕಿ ಶಿವಗಂಗಾ, ಶಿಕ್ಷಕಿಯರಾದ ಕೆ. ಸೀಮಾ, ವಿಮಲಾ, ರೇಖಾ, ಅನಿತಾ, ಸುಷ್ಮಾ, ಶ್ರೀದೇವಿ ಇದ್ದರು.