ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವ ಭಯ ಹುಟ್ಟಿಸುವ ಕೆರೆ ಏರಿಗಳು

ನಿರಂತರ ಮಳೆಯಿಂದ ಮೈದುಂಬಿದ ಕೆರೆಗಳು; ಏರಿಗಳಿಗಿಲ್ಲ ತಡೆಗೋಡೆ
Last Updated 13 ಅಕ್ಟೋಬರ್ 2022, 5:13 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಉತ್ತಮ ಮಳೆ ಸುರಿದು ಬಿ. ದುರ್ಗ ಹೋಬಳಿಯ ಬಹುತೇಕ ಕೆರೆ–ಕಟ್ಟೆಗಳು ಭರ್ತಿಯಾಗಿರುವುದು ಸಾರ್ವಜನಿಕರಲ್ಲಿ ಸಂತಸ ಉಂಟುಮಾಡಿದೆ. ಆದರೆ, ಕೆರೆಯ ಅಕ್ಕಪಕ್ಕದಲ್ಲಿ ಹಾಗೂ ಏರಿಗಳಲ್ಲಿ ಸಮರ್ಪಕ ತಡೆಗೋಡೆಗಳು ಇಲ್ಲದಿರುವುದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಇದರಿಂದಾಗಿ ವಾಹನ ಸವಾರರ ಆತಂಕ ಹೆಚ್ಚಿದೆ.

ಕೆರೆಗಳು ತುಂಬಿದ್ದರಿಂದ ಸಾವಿರಾರು ರೈತರ ಕೊಳವೆ ಬಾವಿಗಳಿಗೆ ಮರುಜೀವ ಬಂದಂತಾಗಿದೆ. ಆದರೆ, ಕೆರೆ ಏರಿಗಳ ಮೇಲೆ ಸಂಚರಿಸುವ ವಾಹನ ಚಾಲಕರು ಸ್ವಲ್ಪ ಮೈಮರೆತರೂ ಜೀವ ಕಳೆದುಕೊಂಡ ನಿದರ್ಶನಗಳು ಎದುರಾಗಿವೆ.

ಸಮೀಪದ ಅಂದನೂರು ಕೆರೆ ಏರಿಗೆ ಹೊಂದಿಕೊಂಡಂತೆ ರಸ್ತೆ ನಿರ್ಮಿಸಲಾಗಿದೆ. ಈ ಕೆರೆ ಏರಿಗೆ ಯಾವುದೇ ರಕ್ಷಣಾ ತಡೆಗೋಡೆಗಳಿಲ್ಲ. ಕಳೆದ ತಿಂಗಳು ಪಿಯುಸಿ ವಿದ್ಯಾರ್ಥಿಯೊಬ್ಬ ಕೆರೆ ಏರಿ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಆಯ ತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.

ಅಂದನೂರು ಗೇಟ್‌ನಿಂದ ಇಂಗಳದಹಳ್ಳಿ ಗ್ರಾಮದ ಬಳಿ ಇರುವ ಕೆರೆ ಕೋಡಿವರೆಗೆ ಸುಮಾರು ಒಂದೂವರೆ ಕಿ.ಮೀ. ಉದ್ದದವರೆಗೆ ಕೆರೆ ಏರಿಯ ಮೇಲೆ ದಾವಣಗೆರೆಗೆ ಹೋಗುವ ರಸ್ತೆ ಇದೆ. ರಸ್ತೆ ಸಮನಾಗಿರದೆ, ಅಲ್ಲಲ್ಲಿ ತಗ್ಗು ಬಿದ್ದಿದೆ. ರಸ್ತೆಯ ಒಂದು ಬದಿ ಕೆರೆ ಇದ್ದರೆ, ಮತ್ತೊಂದು ಬದಿಯಲ್ಲಿ ಏರಿಯುದ್ದಕ್ಕೂ ಆಳವಾದ ಕಂದಕವಿದೆ.

ಅದೇರೀತಿ, ಚಿಕ್ಕಜಾಜೂರು ಸಮೀಪದ ಬಾಣಗೆರೆ ಕೆರೆ ಮತ್ತು ಬಿ.ದುರ್ಗದಲ್ಲಿ ರಸ್ತೆ ಬದಿಯಲ್ಲಿರುವ ಕೆರೆಗಳ ಏರಿಯ ಮೇಲೆ ರಾತ್ರಿ ವೇಳೆ ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ತಡೆಗೋಡೆ ಇಲ್ಲದ್ದರಿಂದ ಸ್ವಲ್ಪ ಮೈಮರೆತರೂ ವಾಹನ ಕೆರೆಗೆ ಅಥವಾ ಕಂದಕಕ್ಕೆ ಬೀಳುವ ಅಪಾಯ ಇದೆ.

ಆರಂಭವಾಗದ ಕೆರೆ ಏರಿ ರಸ್ತೆ ನಿರ್ಮಾಣ ಕಾಮಗಾರಿ: ‘ಶಾಸಕ ಎಂ. ಚಂದ್ರಪ್ಪ ಅವರು ₹ 2 ಕೋಟಿ ವೆಚ್ಚದಲ್ಲಿ ಕೆರೆ ಏರಿಯ ರಸ್ತೆ ನಿರ್ಮಾಣ ಹಾಗೂ ಕೆರೆ ಏರಿ ಸ್ವಚ್ಛತೆಗೆ ಜನವರಿಯಲ್ಲೇ ಚಾಲನೆನೀಡಿದ್ದರು. ಆದರೆ, ಇದುವರೆಗೂ ಕೆರೆ ಏರಿ ರಸ್ತೆ ನಿರ್ಮಾಣವಾಗಲೀ, ಸ್ವಚ್ಛತಯಾಗಲಿ ಆಗಿಲ್ಲ’ ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಹೊಳಲ್ಕೆರೆ, ಬಾಣಗೆರೆ, ಬಿ.ದುರ್ಗ ಮತ್ತು ಅಂದನೂರು ಕೆರೆಗಳ ಏರಿಗೆ ಹೊಂದಿಕೊಂಡಿರುವ ರಸ್ತೆಯುದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಬಾಣಗೆರೆ, ಬಿ. ದುರ್ಗ, ಅಂದನೂರು, ಇಂಗಳದಹಳ್ಳಿ, ಬಂಡೆಬೊಮ್ಮೆನಹಳ್ಳಿ, ಗ್ಯಾರೆಹಳ್ಳಿ, ಆಡನೂರು, ಚಿಕ್ಕಜಾಜೂರು ಮೊದಲಾದ ಗ್ರಾಮಸ್ಥರು
ಹಾಗೂ ವಾಹನಗಳ ಚಾಲಕರು ಆಗ್ರಹಿಸಿದ್ದಾರೆ.

***

ಕೆರೆ ಏರಿಗೆ ತಡೆ ಗೋಡೆ ಇಲ್ಲದಿರು ವುದರಿಂದ ಕೆಲವು ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿವೆ. ಶಾಸಕರು ಆದಷ್ಟು ಬೇಗ ಕೆರೆ ಏರಿಗೆ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರೆ, ಕೆಲವು ಜೀವಗಳನ್ನು ಉಳಿಸಿದಂತಾಗುತ್ತದೆ.
-ಜಿ.ಪಿ.ಸತೀಶ್‌, ಗ್ಯಾರೆಹಳ್ಳಿ ನಿವಾಸಿ

***

ಕಾಮಗಾರಿ ಆರಂಭಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಆದ ತಕ್ಷಣವೇ ಕಾಮಗಾರಿಯನ್ನು ಆರಂಭಿಸಲಾಗುವುದು.
-ಕಾಂತರಾಜ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT