ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೆರೆಯಂಗಳದ 30 ಅಕ್ರಮ ಗುಡಿಸಲು ಜಲಾವೃತ

ನಾಲ್ಕೈದು ದಿನಗಳಿಂದ ಸುರಿದ ಬಿರುಮಳೆಯಿಂದ ನುಗ್ಗಿದ ಕೆರೆನೀರು, ಕೊಳಚೆ ನೀರು
Last Updated 16 ಅಕ್ಟೋಬರ್ 2021, 4:47 IST
ಅಕ್ಷರ ಗಾತ್ರ

ನಗರಂಗೆರೆ (ಚಳ್ಳಕೆರೆ): ಈಚೆಗೆ ಸುರಿದ ಸತತ ಮಳೆಗೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಕೆರೆಯಂಗಳದಲ್ಲಿ ಇದ್ದ ಗುಡಿಸಲುಗಳು ಜಲಾವೃತಗೊಂಡಿದ್ದು, ಅಲ್ಲಿದ್ದ 30 ಅಲೆಮಾರಿ ಸಮುದಾಯದ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ನಾಲ್ಕೈದು ದಿನಗಳಿಂದ ಸತತವಾಗಿ ಸುರಿದ ಬಿರುಮಳೆಯ ಪರಿಣಾಮವಾಗಿ ನಗರದ ಮೇಲ್ಭಾಗದಿಂದ ರಭಸವಾಗಿ ಹರಿದು ಬಂದ ಮಳೆನೀರು ಹಾಗೂ ವಿವಿಧ ಬಡಾವಣೆಗಳ ಕೊಳಚೆನೀರು ರಾಜಕಾಲುವೆ ಮತ್ತು ಹಳ್ಳದ ಮೂಲಕ ಹರಿದು ಹೋಗಿ ತಾಲ್ಲೂಕಿನ ನಗರಂಗೆರೆ ಗ್ರಾಮದ ಕೆರೆಯಲ್ಲಿ ತುಂಬಿಕೊಂಡಿವೆ. ಕೆರೆಯಲ್ಲಿ ಸಂಗ್ರಹವಾಗಿರುವ ಕೊಳಚೆ ನೀರಿನಿಂದಾಗಿ ಇಡೀ ಕೆರೆಯ ನೀರು ಹಸಿರು ಬಣ್ಣ ಪಡೆದಿದೆ. ಕೆರೆಯಂಗಳದ ಜಾಗದಲ್ಲಿ ಕೊರಚ–ಕೊರಮ ಅಲೆಮಾರಿ ಸಮುದಾಯದವರು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಸಿಮೆಂಟ್‍ಶೀಟ್, ತೆಂಗಿನಗರಿಯ 30 ಗುಡಿಸಲುಗಳು, 4–5 ಆರ್‌ಸಿಸಿ ಮನೆಗಳು ಜಲಾವೃತಗೊಂಡಿವೆ.

ರಾತ್ರೋ ರಾತ್ರಿ ಗುಡಿಸಲೊಳಗೆ ನುಗ್ಗಿದ ಮಳೆನೀರಿಗೆ ಹೆದರಿದ ಜನರು, ಜೀವ ಉಳಿದರೆ ಸಾಕು ಎಂದು ಕತ್ತಲಲ್ಲೇ ಮಹಿಳೆ ಮತ್ತು ಮಕ್ಕಳನ್ನು ಗುಡಿಸಲಿಂದ ಕರೆತಂದು ಕೆರೆಯ ದಡಕ್ಕೆ ಸೇರಿಸಿದ್ದಾರೆ. ಗುಡಿಸಲಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ದವಸ–ಧಾನ್ಯ, ಬಟ್ಟೆ, ಪಾತ್ರೆ ಪರಿಕರಗಳು ಮತ್ತು ಕೂದಲು ಮುಂತಾದ ವಸ್ತುಗಳು ಕೊಳಚೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದ ಅಲೆಮಾರಿ ಬಡ ಕುಟುಂಬಗಳಿಗೆ ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ.

ಶಾಲಾ ಕಟ್ಟಡಕ್ಕೆ ಸ್ಥಳಾಂತರ: ಅಲೆಮಾರಿ ಬಡ ಕುಟುಂಬಗಳ ಜನರ ಸ್ಥಿತಿ ಕಣ್ಣಾರೆ ಕಂಡ ಗ್ರಾಮ ಪಂಚಾಯಿತಿ, ಸಂತ್ರಸ್ತ ಕುಟುಂಬಗಳನ್ನು ಮಂಗಳವಾರ ಗ್ರಾಮದ ಸರ್ಕಾರಿ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಿದೆ. ಆ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಹಾಸಿಗೆ, ಹೊದಿಕೆಗಳ ವ್ಯವಸ್ಥೆ ಕಲ್ಪಿಸಿದೆ.

‘ಅ. 21ರಂದು 1ರಿಂದ 5ನೇ ತರಗತಿ ಆರಂಭವಾಗಲಿರುವ ಕಾರಣ ಮಕ್ಕಳ ಪಾಠಕ್ಕೆ ಮತ್ತು ಶಾಲಾ ಕಟ್ಟದಲ್ಲಿ ಉಳಿದಿರುವ ಸಂತ್ರಸ್ತ ಕುಟುಂಬಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಜಿ.ಟಿ. ರಾಜಣ್ಣ.

ಕೂದಲು ವ್ಯಾಪಾರಕ್ಕೆ ಊರೂರು ಅಲೆದು ಬದುಕು ಕಟ್ಟಿಕೊಂಡಿದ್ದ ಅಲೆಮಾರಿ ಸಮುದಾಯದ 10 ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ಮತ್ತು 15 ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.

‘ಹಿರಿಯರು ಹಂದಿ ಸಾಕಣೆಯಿಂದ ಜೀವನ ನಡೆಸುತ್ತಿದ್ದರು. ಹಂದಿಗಳಿಂದ ಕೊಳಚೆಪ್ರದೇಶ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಹಂದಿ ಸಾಕಣೆ ಬದಲಿಗೆ ಬರೀ ಕೂದಲು ವ್ಯಾಪಾರ ಮಾಡುತ್ತಿದ್ದೇವೆ. ಇಡೀ ದಿನ ಊರೂರು ತಿರುಗಿದರೂ ಕೂದಲಿನಿಂದ
₹ 200ರಿಂದ ₹ 300 ಸಿಗುವುದು ಕಷ್ಟ. ಈ ವ್ಯಾಪಾರ ಬಿಟ್ಟರೆ ಇನ್ಯಾವುದೇ ವೃತ್ತಿ ಗೊತ್ತಿಲ್ಲ. ಅಲ್ಪಸ್ವಲ್ಪ ಹಣ ಸಂಗ್ರಹಿಸಿ ಕಟ್ಟಿಕೊಂಡಿದ್ದ ಗುಡಿಸಲು ಈಗ ನೀರುಪಾಲಾಗಿದೆ. ಮುಂದೆ ಜೀವನ ಹೇಗೆ ಎನ್ನುವುದು ಚಿಂತೆಯಾಗಿದೆ’ ಎಂದು ಕೊರಚ ಸಮುದಾಯದ ಮುಖಂಡ ಗಂಗಾಧರ ಆತಂಕ ವ್ಯಕ್ತಪಡಿಸಿದರು.

‘ಕೆರೆಯಂಗಳದಲ್ಲಿ ಗುಡಿಸಲು ಇರುವ ಕಾರಣ ಮಳೆನೀರು ಹರಿದುಬರುತ್ತವೆ. ಇದರಿಂದ ಪ್ರತಿ ಸಲ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಪಾವಗಡ ಮಾರ್ಗದ ರಸ್ತೆ ಬಳಿ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಣ್ಣನಗರದಲ್ಲಿ ನಿವೇಶನ ಕಲ್ಪಿಸಿ ವಸತಿ ನಿರ್ಮಿಸಿಕೊಡಬೇಕು’ ಎಂದು ರಾಜೇಶ್ ಶಾಸಕರಲ್ಲಿ ಮನವಿ ಮಾಡಿದರು.

‘ಹಸಿರು ಬಣ್ಣದ ಕೊಳಚೆನೀರು ಇಡೀ ಕೆರೆಯನ್ನು ಆವರಿಸಿದೆ. ಈ ಮಲಿನಗೊಂಡ ನೀರು ಯಾವುದೇ ಬಳಕೆಗೆ ಬರುವುದಿಲ್ಲ. ಹೀಗಾಗಿ ಕೊಚ್ಚೆ ನೀರಿನಿಂದ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ರೋಗಗಳನ್ನು ಎದುರಿಸಬೇಕಾಗುತ್ತದೆ’ ಎಂದು ಗ್ರಾಮದ ಜನರು
ಆತಂಕಗೊಂಡಿದ್ದಾರೆ.

ಶಾಶ್ವತ ವಸತಿಗೆ ವ್ಯವಸ್ಥೆ: ಭರವಸೆ

ಗುಡಿಸಲುಗಳು ಜಲಾವೃತಗೊಂಡ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಟಿ. ರಘುಮೂರ್ತಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ನಂತರ ಸ್ಥಳ ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಆಹಾರ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯಿತಿ ವತಿಯಿಂದ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಬೇಕು ಎಂದು ಸೂಚಿಸಿದರು. ಜಯಣ್ಣ ನಗರದಲ್ಲಿ ಶಾಶ್ವತ ನಿವೇಶನ ನೀಡಿ ಆಶ್ರಯ ಯೋಜನೆಯ ಅಡಿ ವಸತಿ ನಿರ್ಮಾಣ ಮಾಡಿಸಿಕೊಂಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT