ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯ ತೋರಿದರೆ ಬ್ಯಾಂಕ್‌ ಶಾಖೆ ಬಂದ್‌: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಅಧಿಕಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ
Published 20 ಜೂನ್ 2023, 15:40 IST
Last Updated 20 ಜೂನ್ 2023, 15:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರದ ವಿವಿಧ ನಿಗಮಗಳಡಿ ಸಹಾಯಯಧನ, ಸಾಲಸೌಲಭ್ಯ, ಬೆಳೆವಿಮೆ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳು ಮೂರು ವರ್ಷಗಳಿಂದ ಬಾಕಿ ಉಳಿದಿವೆ. ಕೂಡಲೇ ವಿಲೇವಾರಿಗೊಳಿಸಿ ನೆರವು ಕಲ್ಪಿಸಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಲೀಡ್‌ ಬ್ಯಾಂಕ್‍ಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಸಲಹಾ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಕಳೆದ ಬಾರಿ ಸಭೆ ನಡೆಸಿ, ಸೂಚನೆ ನೀಡಿದರೂ ಒಂದು ಅರ್ಜಿಯೂ ವಿಲೇವಾರಿ ಆಗಿಲ್ಲ. ಬಡವರಿಗೆ, ಶೋಷಿತರಿಗೆ ಪರಿಹಾರ ನೀಡಲು ವಿಳಂಬ ಧೋರಣೆ ಬಿಟ್ಟು ಶೀಘ್ರ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ತಾಕೀತು ಮಾಡಿದರು.

‘ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ 457 ಅರ್ಜಿಗಳಲ್ಲಿ 187 ಮಾತ್ರ ವಿಲೇವಾರಿಯಾಗಿದ್ದು, ಉಳಿದವು ಬ್ಯಾಂಕ್‌ ವ್ಯವಸ್ಥಾಪಕರ ಲಾಗಿನ್‌ನಲ್ಲಿ ಉಳಿದಿವೆ. ಇದರಿಂದ ರೈತರಿಗೆ ಬೆಳೆ ವಿಮೆಯ ಪರಿಹಾರದ ಮೊತ್ತ ಪಾವತಿಯಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌.ದಿವಾಕರ, ‘ಬಾಕಿ ಇರುವ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಶೀಘ್ರದಲ್ಲಿ ರೈತರಿಗೆ ಬೆಳೆ ವಿಮೆ ಮೊತ್ತ ಪಾವತಿಯಾಗುವಂತೆ ಅಗತ್ಯ ಕ್ರಮವಹಿಸಬೇಕು’ ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಸರ್ಕಾರದ ಪ್ರಾಯೋಜಿತ ಯೋಜನೆಗಳ ಬಗ್ಗೆ ವಿಳಂಬ ಹಾಗೂ ನಿರ್ಲಕ್ಷ್ಯ ಮಾಡಬಾರದು. ಗ್ರಾಮೀಣ ಪ್ರದೇಶದ ರೈತರು ಹಾಗೂ ಶೋಷಿತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇವುಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ಮಾಡುವ ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಕ್ರಮವಹಿಸಲಾಗುವುದು’ ಎಂದು ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಸಿದರು.

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ನೋಂದಣಿ ಪ್ರಾರಂಭಿಸುವಂತೆ ಸಚಿವರು ಜಂಟಿ ಕೃಷಿ ನಿರ್ದೇಶಕ ರಮೇಶ್‌ ಕುಮಾರ್‌ಗೆ ಸೂಚನೆ ನೀಡಿದರು.

‘ಯೋಜನೆಗೆ ಸಂಬಂಧಪಟ್ಟಂತೆ ಕೇಂದ್ರ ಕಚೇರಿಯಿಂದ ಇದುವರೆಗೂ ಯಾವುದೇ ಅಧಿಸೂಚನೆ ಬಂದಿಲ್ಲ. ಸೂಚನೆ ಬಂದ ನಂತರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್‌ ಕುಮಾರ್‌ ಸಭೆಗೆ ತಿಳಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ತಿಪ್ಪೇಶ್‌, ಆರ್‌ಬಿಐ ಅಧಿಕಾರಿ ಸುಪ್ರಿಯಾ ಬ್ಯಾನರ್ಜಿ, ನಬಾರ್ಡ್‌ನ ಕವಿತಾ ಎಸ್‌.ಶಶಿಧರ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ, ದಾವಣಗೆರೆಯ ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಶ್ರೀನಿವಾಸ್‌, ಎಸ್‍ಬಿಐನ ರಂಜನ್‌ ಕುಮಾರ್‌ ಇದ್ದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವತಿಯಿಂದ ₹ 60 ಕೋಟಿಗಳನ್ನು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ನೀಡಲಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ಆದಾಯಗಳಿಸಿ ಬ್ಯಾಂಕಿಂಗ್‌ ವ್ಯವಸ್ಥೆ ಮಾಡಿಕೊಂಡಿರುವುದು ಆಶಾದಾಯಕ ಸಂಗತಿ ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

ಶಾಖೆ ತೆರೆಯಲು ಸೂಚನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಡಿಗ್ರಾಮಗಳಾದ ಶೇಷಪ್ಪನಹಳ್ಳಿ ಹಾಗೂ ಯಲ್ಲದಕೆರೆ ವ್ಯಾಪ್ತಿಯ ಸುಮಾರು 36 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಬ್ಯಾಂಕ್‌ನ ಒಂದು ಶಾಖೆಯೂ ಇಲ್ಲ. ಆದ್ದರಿಂದ ಬ್ಯಾಂಕ್‌ ಶಾಖೆ ಪ್ರಾರಂಭಿಸುವಂತೆ ಎನ್‌ಆರ್‌ಎಲ್‌ಎಂ ಅಧಿಕಾರಿ ಭೋಜರಾಜ ಸಚಿವರ ಗಮನಕ್ಕೆ ತಂದರು. ಈ ಹಿಂದೆ ಯಲ್ಲದಕೆರೆಯಲ್ಲಿದ್ದ ಬ್ಯಾಂಕ್‌ ಶಾಖೆ ಮುಚ್ಚಲಾಗಿದೆ. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಶಾಖೆ ತೆರೆಯುವ ಅಗತ್ಯವಿದೆ. ಶೇಷಪ್ಪನಹಳ್ಳಿಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲೂ ಗ್ರಾಮಸ್ಥರು ಬ್ಯಾಂಕ್‌ ಶಾಖೆ ತೆರೆಯುವಂತೆ ಮನವಿ ಮಾಡಲಾಗಿತ್ತು. ಶೇಷಪ್ಪನಹಳ್ಳಿ ಅಥವಾ ಯಲ್ಲದಕರೆಯಲ್ಲಿ ಬ್ಯಾಂಕ್‌ ಶಾಖೆ ತೆರೆಯುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಅಥವಾ ಡಿಸಿಸಿ ಬ್ಯಾಂಕ್‌ನವರು ಬ್ಯಾಂಕ್ ಶಾಖೆ ತೆರೆಯುವಂತೆ ಸೂಚನೆ ನೀಡಿದರು.

ಜೀವನ್ ಜ್ಯೋತಿಗೆ ಪ್ರೋತ್ಸಾಹಿಸಿ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಅರ್ಹರು ನೋಂದಾಯಿಸಿಕೊಳ್ಳಲು ಪ್ರೋತ್ಸಾಯಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ ಜಿಲ್ಲೆಯಲ್ಲಿ 64 ಸಾವಿರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ 2.12 ಲಕ್ಷ ಗುರಿ ನಿಗದಿಪಡಿಸಲಾಗಿದ್ದು ಜೂನ್ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು ಎಂದು ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್‌ ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT