ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬಿಡಿ, ಪರೀಕ್ಷೆಗೆ ಸಿದ್ಧರಾಗಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ಕಿವಿಮಾತು
Last Updated 31 ಮೇ 2020, 15:14 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪ್ರತಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಕಾಳಜಿ ಇದೆ. ಕೊರೊನಾ ಸೋಂಕು ನಿವಾರಣೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ವದಂತಿಗಳಿಗೆ ಕಿವಿಗೊಡದೇ, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ...’

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್‌ ರೆಡ್ಡಿ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತು ಇದು.

‘ಪ್ರಜಾವಾಣಿ’ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರ ಆತಂಕವನ್ನು ದೂರ ಮಾಡಿದರು. ಎಡಬಿಡದೇ ಬರುತ್ತಿದ್ದ ದೂರವಾಣಿ ಕರೆಗೆ ತಾಳ್ಮೆಯಿಂದ ಉತ್ತರಿಸಿದರು. ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಧೈರ್ಯ ತುಂಬಿದರು.

ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮಾರ್ಚ್‌ 13ರಿಂದ ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಾರ್ಚ್‌ 27ರಿಂದ ಏ.9ರವರೆಗೆ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಲಾಕ್‌ಡೌನ್‌ ಕಾರಣಕ್ಕೆ ಮುಂದೂಡಲಾಗಿತ್ತು. ಜೂನ್‌ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಿಗದಿಯಾಗಿದೆ. ಪರೀಕ್ಷೆಯ ಬಗ್ಗೆ ಇದ್ದ ಅನುಮಾನಗಳಿಗೆ ತೆರೆ ಬಿದ್ದಿದೆ. ಆದರೆ, ಪರೀಕ್ಷೆ ಹೇಗೆ, ಎಲ್ಲಿ ನಡೆಯುತ್ತದೆ? ಸುರಕ್ಷತೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಹಲವು ರೀತಿಯ ಪ್ರಶ್ನೆಗಳು ಅನೇಕರಲ್ಲಿವೆ. ಇಂತಹ ಪ್ರಶ್ನೆಗಳಿಗೆ ‘ಫೋನ್‌–ಇನ್‌’ನಲ್ಲಿ ಉತ್ತರ ಸಿಕ್ಕಿದೆ. ಗೊಂದಲ, ಅನುಮಾನಗಳು ನಿವಾರಣೆಯಾಗಿವೆ.

‘ಶೈಕ್ಷಣಿಕ ವರ್ಷದ ಆರಂಭದಿಂದಲೂ ಪಠ್ಯ ಬೋಧನೆಗೆ ಒತ್ತು ನೀಡಲಾಗಿತ್ತು. ಡಿಸೆಂಬರ್‌ ವೇಳೆಗೆ ಪಠ್ಯ ಬೋಧನೆ ಪೂರ್ಣಗೊಂಡಿತ್ತು. ಪೂರ್ವ ಸಿದ್ಧತಾ ಪರೀಕ್ಷೆ, ಪುನರ್‌ಮನನ ತರಗತಿಗಳು ನಡೆಯುತ್ತಿದ್ದವು. ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆಗಳು ಬಾಕಿ ಇದ್ದಾಗ ಲಾಕ್‌ಡೌನ್‌ ಘೋಷಣೆಯಾಯಿತು. ಹೀಗಾಗಿ, ಪಠ್ಯ ಬೋಧನೆ ಬಾಕಿ ಉಳಿದಿಲ್ಲ’ ಎಂದು ಕೆ.ರವಿಶಂಕರ್‌ ರೆಡ್ಡಿ ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಶಿಕ್ಷಕರು ಒತ್ತು ನೀಡಿದ್ದಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಅಗತ್ಯ ಸಲಹೆ ನೀಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪರೀಕ್ಷಾ ತಯಾರಿಯ ಮೇಲೆ ನಿಗಾ ಇಟ್ಟಿದ್ದಾರೆ. ವಿಷಯವಾರು ಪರಿವೀಕ್ಷಕರು ಶಿಕ್ಷಕರಿಗೆ ಉತ್ತೇಜನ ನೀಡುತ್ತಿದ್ದಾರೆ. ಡಿಎಸ್ಇಆರ್‌ಟಿಯ ಯೂಟ್ಯೂಬ್‌ ಚಾನಲ್‌ ‘ಮಕ್ಕಳ ಸಹಾಯವಾಣಿ’ ಹಾಗೂ ಚಂದನ ಟಿವಿಯ ‘ಪರೀಕ್ಷಾ ವಾಹಿನಿ’ ವಿದ್ಯಾರ್ಥಿಗಳಿಗೆ ನೆರವಾಗಿವೆ’ ಎಂದರು.

‘ಪರೀಕ್ಷೆಗೆ ಇನ್ನೂ 25ದಿನಗಳ ಕಾಲಾವಕಾಶವಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗೆ ಕಿವಿಯಾಗದೇ ಪರೀಕ್ಷಾ ಪೂರ್ವತಯಾರಿಯಲ್ಲಿ ತೊಡಗಿಕೊಳ್ಳಿ. ಯೋಗ, ಧ್ಯಾನ ಮಾಡಿದರೆ ಭಯ ನಿವಾರಣೆಯಾಗುತ್ತದೆ. ಧೈರ್ಯವಾಗಿ ಪರೀಕ್ಷೆ ಎದುರಿಸಿ. ಉತ್ತಮ ಫಲಿತಾಂಶದತ್ತ ಗಮನ ಕೇಂದ್ರೀಕರಿಸಿ’ ಎಂದು ಸಲಹೆ ನೀಡಿದರು.

‘ಅಂತರ ಕಾಪಾಡುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ವಿನ್ಯಾಸ ಬದಲಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ಪರೀಕ್ಷಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿ ಡೆಸ್ಕ್‌ಗೆ ಇಬ್ಬರು ಆಸೀನರಾಗಬಹುದು. ವಿದ್ಯಾರ್ಥಿಗಳ ನಡುವೆ ಮೂರು ಮೀಟರ್‌ ಅಂತರವಿರುತ್ತದೆ’ ಎಂದು ವಿವರಿಸಿದರು.

ಡಿವೈಪಿಸಿ ಸಿ.ಎಂ.ತಿಪ್ಪೇಸ್ವಾಮಿ ಮತ್ತು ನಾಗಭೂಷಣ್‌ ಇದ್ದರು.

ಮಾಸ್ಕ್‌, ಸ್ಯಾನಿಟೈಸರ್‌ ಉಚಿತ

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಉಚಿತವಾಗಿ ನೀಡಲಾಗುತ್ತದೆ. ಅಗತ್ಯಕ್ಕೆ ತಕ್ಕಷ್ಟು ಸ್ಯಾನಿಟೈಸರ್‌ ದಾಸ್ತಾನು ಇಟ್ಟುಕೊಳ್ಳಲಾಗಿದ್ದು, ಮಾಸ್ಕ್‌ ಒದಗಿಸುವ ಪ್ರಕ್ರಿಯೆ ನಡೆಯುತ್ತಿದೆ.

‘ಪ್ರತಿ ವಿದ್ಯಾರ್ಥಿಗೆ ಗುಣಮಟ್ಟದ ಎರಡು ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. 22,567 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. 50 ಸಾವಿರ ಮಾಸ್ಕ್‌ ದಾಸ್ತಾನು ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಾಸ್ಕ್‌ ನೀಡಲು ಕೆಲವರು ಮುಂದೆ ಬಂದಿದ್ದಾರೆ. ರೆಡ್‌ಕ್ರಾಸ್‌, ರೋಟರಿ, ಜೈನ ಸಂಸ್ಥೆ ಕೂಡ ಮಾಸ್ಕ್‌ ಒದಗಿಸಲಿವೆ’ ಎಂದು ರವಿಶಂಕರ ರೆಡ್ಡಿ ತಿಳಿಸಿದರು.

‘ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅರ್ಧ ಲೀಟರಿನ ಆರು ಸ್ಯಾನಿಟೈಸರ್‌ ಬಾಟಲಿ ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಕೈ ಶುಚಿಗೊಳಿಸಿಕೊಳ್ಳಲು ಸ್ಯಾನಿಟೈಸರ್‌ ನೀಡಲಾಗುತ್ತದೆ. ಸ್ಯಾನಿಟೈಸರ್‌ ಅಲರ್ಜಿ ಎಂಬುವವರಿಗೆ ಹ್ಯಾಂಡ್‌ ವಾಷ್‌ ಅಥವಾ ಸೋಪ್‌ ಮತ್ತು ನೀರು ಇಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಬಸ್‌ ವ್ಯವಸ್ಥೆಗೆ ಸಿದ್ಧತೆ

ಕೊರೊನಾ ಸೋಂಕಿನ ಭೀತಿಯ ಕಾರಣಕ್ಕೆ ಸಾರ್ವಜನಿಕ ಸಾರಿಗೆ ಪೂರ್ಣಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. ಪರೀಕ್ಷೆಗೆ ಹಾಜರಾಗುವುದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಪ್ರಯತ್ನವೂ ಶಿಕ್ಷಣ ಇಲಾಖೆಯಿಂದ ನಡೆಯುತ್ತಿದೆ. ಖಾಸಗಿ ಶಾಲೆಗಳ ಬಸ್‌ಗಳನ್ನು ಬಳಕೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ.

‘ಸಾರಿಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಯತ್ನ ನಡೆಸುತ್ತಿದೆ. ಪರೀಕ್ಷೆಗೆ ಇನ್ನೂ 25 ದಿನ ಕಾಲಾವಕಾಶವಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ತೊಂದರೆ ಆಗದು. ಇಲ್ಲವಾದರೆ ಕೆಎಸ್‌ಆರ್‌ಟಿಸಿ ನೆರವು ಪಡೆಯಲಾಗುವುದು’ ಎಂದು ವಿವರಿಸಿದರು.

ಜ್ವರ ಇದ್ದರೆ ಪ್ರತ್ಯೇಕ ಕೊಠಡಿ

ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಯನ್ನು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಆರೋಗ್ಯ ಇಲಾಖೆಯ ವೈದ್ಯಕೀಯ ಸಿಬ್ಬಂದಿಯನ್ನು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗುತ್ತಿದೆ. ನಿತ್ಯ ಬೆಳಿಗ್ಗೆ 10.30ಕ್ಕೆ ಪರೀಕ್ಷೆ ಪ್ರಾರಂಭವಾಗಲಿದ್ದು, ಒಂದು ಗಂಟೆ ಮುನ್ನ ಅಂದರೆ 9.30ಕ್ಕೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

‘ಜ್ವರ, ಶೀತ, ಕೆಮ್ಮು ಹಾಗೂ ನೆಗಡಿಯಂತಹ ಲಕ್ಷಣಗಳು ಕಂಡುಬಂದ ವಿದ್ಯಾರ್ಥಿಯನ್ನು ಪ್ರತ್ಯೇಕಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಎರಡು ಕೊಠಡಿಗಳನ್ನು ಇದಕ್ಕೆ ಮೀಸಲಿಡಲಾಗಿದೆ. ಅನಾರೋಗ್ಯ ಪೀಡಿತರು ಪರೀಕ್ಷೆ ಬರೆಯಲು ಈ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್‌–19 ಪೀಡಿತ ವಿದ್ಯಾರ್ಥಿ ಹಾಗೂ ಕ್ವಾರಂಟೈನ್‌ನಲ್ಲಿ ಇರುವವರು ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ರವಿಶಂಕರ್‌ ರೆಡ್ಡಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT