ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ವರದಿ ಜಾರಿಯಾಗಲಿ: ನಾರಾಯಣಸ್ವಾಮಿ

Last Updated 19 ಸೆಪ್ಟೆಂಬರ್ 2021, 14:58 IST
ಅಕ್ಷರ ಗಾತ್ರ

ಧರ್ಮಪುರ: ‘ಕೆಳ ಸಮುದಾಯ ಮಾದಿಗರ ಮೀಸಲಾತಿಗೆ ಸದಾಶಿವ ವರದಿ ಜಾರಿಯಾಗಬೇಕು. ಸದನದಲ್ಲಿ ವಿಸ್ತೃತ ಚರ್ಚೆಯಾಗಬೇಕು. ಆ ಮೂಲಕ ನಮಗೆ ನ್ಯಾಯ ಸಿಗುವಂತಾಗಬೇಕು’ ಎಂದು ಕೇಂದ್ರ ಸಾಮಾಜಿಕ ನ್ಯಾಯಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಮಾದಿಗ ಸಮುದಾಯ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ನಾನು ಕೇವಲ ಮಾದಿಗರ ಮಗನಲ್ಲ. ಎಲ್ಲಾ ಸಮುದಾಯದ ಮಗನಾಗಿದ್ದು, ಶೋಷಿತ ವರ್ಗದ ಏಳಿಗೆಯೇ ನನ್ನ ಆದ್ಯ ಕರ್ತವ್ಯ. ನಾನು ರಾಜಕಾರಣಿಯಲ್ಲ. ಕೇವಲ ಸಮಾಜ ಸೇವಕ ಮಾತ್ರ. ಯಾವ ವ್ಯಕ್ತಿಗೆ ಮೌಲ್ಯಗಳು,ಸಂಸ್ಕಾರಗಳು ಮೈಗೂಡಿಕೊಂಡಿರುತ್ತವೆಯೋ ಅಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ರಾಜಕಾರಣಿಗಳಲ್ಲಿ ಬದ್ಧತೆ ಬಹಳ ಮುಖ್ಯ.ನನ್ನ ಜವಾಬ್ದಾರಿ ಜಾಸ್ತಿಯಾಗಿದೆ. ಕೇಂದ್ರದಲ್ಲಿ ಸಚಿವನಾಗಿದ್ದು,ಪರಿಶಿಷ್ಟಜಾತಿಯ ಉಸ್ತುವಾರಿ ಆಗಿ ಸೇವೆ ಮಾಡುತ್ತಿದ್ದೇನೆ’ ಎಂದರು.

‘ಧರ್ಮಪುರ ಕೆರೆಗೆ ನೀರು ಸೇರಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಹರಿಸುವುದು ನನ್ನ ಪ್ರಥಮ ಪ್ರಾಶಸ್ತ್ಯ. ನವೆಂಬರ್‌ನಲ್ಲಿ ರೈಲ್ವೆ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ. ಇದಕ್ಕೆ ಪೂರಕವಾಗಿ ₹200 ಕೋಟಿ ಅನುದಾನ ನೀಡುವಂತೆಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಸೇರಿ ಜಿಲ್ಲೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಿದ್ಧ’ ಎಂದು ಹೇಳಿದರು.

ಯುವಕರು ತಾಂತ್ರಿಕ ಶೈಕ್ಷಣಿಕ ವ್ಯವಸ್ಥೆಯನ್ನು ಪಡೆದು ನಿರುದ್ಯೋಗದಿಂದ ಹೊರಬಂದು ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳಿ. ಜಲಶಕ್ತಿಯ ಮೂಲಕ ದೇಶದ ಸಮಗ್ರ ನೀರಾವರಿ ಅಭಿವೃದ್ಧಿಯಾಗಬೇಕು.ನೀರು ಹರಿಯಬೇಕು ಎಂದರು.

ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ‘ಅಂಬೇಡ್ಕರ್ ಯಾವುದೇ ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಅದೇ ರೀತಿ ನಾವು ಜಾತೀಯ ಮೌಢ್ಯದಿಂದ ಹೊರಬಂದು ಉತ್ತಮ ಶಿಕ್ಷಣವನ್ನುಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಧರ್ಮಪುರ ಕೆರೆಗೆ ನೀರು ಹರಿಯುವುದು ಖಚಿತ. ಈಗಾಗಲೇ ₹ 90 ಕೋಟಿ ಅನುದಾನ ಮೀಸಲಿದೆ. ಇನ್ನೂ ಒಂದು ತಿಂಗಳ ನಂತರ ಡೆಂಡರ್ ಪ್ರಕ್ರಿಯೆ ಶುರುವಾಗಲಿದೆ. ಶತಮಾನಗಳ ಕನಸು ನನಸಾಗಲಿದೆ’ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಮಾತನಾಡಿ, ‘ಸಚಿವ ನಾರಾಯಣಸ್ವಾಮಿ ಮತ್ತು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇಬ್ಬರೂ ಧರ್ಮಪುರದ ಶತಮಾನದ ಬೇಡಿಕೆಯಾದ ಧರ್ಮಪುರ ಕೆರೆಗೆ ಪೂರಕ ನಾಲೆ,ನೂತನ ತಾಲ್ಲೂಕು ಕೇಂದ್ರವನ್ನಾಗಿಸುವ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಕೋಡಿಹಳ್ಳಿ ಆದಿಜಾಂಬವ ಮಠದ ಮಾರ್ಕಂಡೇಯಮುನಿ ಸ್ವಾಮಿ ಆಶೀರ್ವಚನ ನೀಡಿದರು.

ಧರ್ಮಪುರ ಹೋಬಳಿಯ ಹತ್ತು ಗ್ರಾಮ ಪಂಚಾಯಿತಿಗಳ ಮಾದಿಗ ಸಮುದಾಯದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸಚಿವರು ಸನ್ಮಾನಿಸಿದರು.

ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ, ಹಿರಿಯೂರು ಆದಿಜಾಂಬವ ಶಾಖಾ ಮಠದ ಷಡಕ್ಷರ ಮುನಿಸ್ವಾಮಿ, ಶಿವಮುನಿಸ್ವಾಮಿ, ಧರ್ಮಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಆರ್. ರಾಘವೇಂದ್ರ, ಎಸ್. ಸಂಗಮೇಶ್ ಕಟಗೂರ, ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾ ನಿರ್ದೇಶಕ ಕೆ.ಜಿ. ಮೂಡಲಗಿರಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದಮೀಸೆ ಮಹಾಲಿಂಗಪ್ಪ, ಗೀತಾ ನಾಗಕುಮಾರ್, ಸಂಘಟಕರಾದ ಕೃಷ್ಣಮೂರ್ತಿ, ಗೌಡಪ್ಪ, ನರಸಿಂಹಮೂರ್ತಿ, ಗ್ರಾ.ಪಂ.ಸದಸ್ಯೆ ಲಕ್ಷ್ಮಿದೇವಿ, ಕೆ.ರಮೇಶ್, ಗಿರೀಶ್, ಸಕ್ಕರ ನಾಗರಾಜ್, ಯಲ್ಲಪ್ಪ, ಶ್ರೀನಿವಾಸ್ ಇದ್ದರು.

ನೂಕು ನುಗ್ಗಲು:

ಕೇಂದ್ರ ಸಚಿವರನ್ನು ಮಾತಾಡಿಸಲು ಮತ್ತು ಕೈಕುಲುಕಲು ಜನರು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಲಾಟಿ ಚಾರ್ಜ್ ಮಾಡಲು ಮುಂದಾದಾಗಸಚಿವರು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT