ಸೋಮವಾರ, ಸೆಪ್ಟೆಂಬರ್ 20, 2021
23 °C

ಹೊಳಲ್ಕೆರೆ: ‘ಶಿಕ್ಷಣಕ್ಕೆ ಮಲ್ಲಿಕಾರ್ಜುನ ಸ್ವಾಮೀಜಿ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಶಿಕ್ಷಣ ಕ್ಷೇತ್ರಕ್ಕೆ ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಯ ಕೊಡುಗೆ ಅಪಾರ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪಟ್ಟಣದ ಒಂಟಿಕಂಬದ ಮಠದಲ್ಲಿ ಭಾನುವಾರ ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಶ್ರೀಗಳು ಬಡತನದಿಂದ ಬಂದರೂ ಸಾಂಸ್ಕೃತಿಕ ಶ್ರೀಮಂತಿಕೆ ಅವರಲ್ಲಿತ್ತು. ಅಥಣಿಯ ಮುರುಘೇಂದ್ರ ಶಿವಯೋಗಿಗಳು, ಜಯದೇವ ಮುರುಘ ರಾಜೇಂದ್ರ ಶ್ರೀಗಳು ಮತ್ತು ಜಯವಿಭವ ಶ್ರೀಗಳ ಆಶೀರ್ವಾದ ಅವರಿಗಿತ್ತು. ಅವರು ನೇರನುಡಿಗೆ ಹೆಸರಾಗಿದ್ದರು. ಅವರಿಗೆ ಅಧ್ಯಾತ್ಮ ಮತ್ತು ಅಭಿವೃದ್ಧಿಯ ದೂರದೃಷ್ಟಿ ಇತ್ತು. ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಮುರುಘಾ ಮಠಕ್ಕೆ ಆರ್ಥಿಕ ಭದ್ರತೆಯನ್ನು ತಂದುಕೊಟ್ಟರು. ಸಮಾಜದ ಒಳತಿಗಾಗಿ ಮಠಾಧೀಶರು ಇರುತ್ತಾರೆ ಎಂಬುದಕ್ಕೆ ಅವರು ಉತ್ತಮ ಉದಾಹರಣೆ ಎಂದು ಸ್ಮರಿಸಿದರು.

ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ‘ನಾವು ಬಸವಣ್ಣನವರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು. ಬಸವಾದಿ ಶರಣರ ತತ್ವಗಳು ಈಗಿನ ಕಾಲಕ್ಕೆ ಅತಿಮುಖ್ಯ. ಅವು ದೂರವಾದರೆ ನಾವು ದಾರಿ ತಪ್ಪಬಹುದು. ಆದರೆ, ಇಂದು ಜನ ಅವರ ತತ್ವಗಳನ್ನು ಆಚರಿಸದೆ ಇರುವುದು ದುರಂತ. ಮಲ್ಲಿಕಾರ್ಜುನ ಜಗದ್ಗುರುಗಳು ದಲಿತರನ್ನು, ಶೋಷಿತರನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು’ ಎಂದು ಸ್ಮರಿಸಿದರು.

ಗಿಲಿಕೇನಹಳ್ಳಿಯ ಎನ್.ಟಿ.ನಾಗಪ್ಪ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮೀಜಿ, ಮಠದಕುರುಬರಹಟ್ಟಿ ಆನಂದಪ್ಪ, ಎಸ್ ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸದಸ್ಯರಾದ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ಮುರುಗೇಶ್, ಮೋಹನ್ ಇದ್ದರು.

ಶಿವಬಸವ ಸ್ವಾಮೀಜಿ ಸ್ವಾಗತಿಸಿದರು. ಬಸವಕುಮಾರ ಸ್ವಾಮೀಜಿ ನಿರೂಪಿಸಿದರು. ಎಲ್.ಬಿ. ರಾಜಶೇಖರ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.