ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಮಾರುಕಟ್ಟೆಯಲ್ಲಿ ಹೂವಿನ ದರ್ಬಾರ್

* ದೇವರು, ಯಂತ್ರೋಪಕರಣ, ವಾಹನಗಳ ಪೂಜೆಗಾಗಿಯೇ ಹೆಚ್ಚಿದ ಬೇಡಿಕೆ * ಹೂವಿನ ನೂರಾರು ರೈತರ ಲಗ್ಗೆ  
Last Updated 13 ಅಕ್ಟೋಬರ್ 2021, 12:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳಿಂದ ಭರ್ತಿಯಾಗಿತ್ತು. ಹೂವುಗಳನ್ನು ಖರೀದಿಸಲು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೂ ನೂಕುನುಗ್ಗಲು ಉಂಟಾಯಿತು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಹೂವಿನದ್ದೇ ದರ್ಬಾರ್ ನಿರ್ಮಾಣವಾಗಿತ್ತು.

ಇದು ಗುರುವಾರ ನಡೆಯಲಿರುವ ಮಹಾನವಮಿ, ಆಯುಧಪೂಜೆ ಹಾಗೂ ಶುಕ್ರವಾರ ನಡೆಯುವ ವಿಜಯದಶಮಿ ಹಬ್ಬದ ಅಂಗವಾಗಿ ದೇವರ ಮೂರ್ತಿ, ಬಾಗಿಲು, ಯಂತ್ರೋಪಕರಣ, ಎಲೆಕ್ಟ್ರಿಕಲ್ ವಸ್ತು, ವಾಹನಗಳನ್ನು ಅಲಂಕರಿಸಲಿಕ್ಕಾಗಿ ಬುಧವಾರ ಹೂವುಗಳನ್ನು ಜನ ಮುಗಿಬಿದ್ದು ಖರೀದಿಸಲು ಮುಂದಾದಾಗ ಕಂಡಬಂದ ದೃಶ್ಯವಿದು. ಅಲ್ಲದೆ, ಹಬ್ಬಕ್ಕಾಗಿ ದೇಗುಲಗಳಲ್ಲಿ, ಮನೆ-ಮನೆಗಳಲ್ಲೂ ಸಿದ್ಧತೆಗಳು ಭರದಿಂದ ಸಾಗಿದೆ.

ನೂರಾರು ಹೂ ಬೆಳೆಗಾರರು ಹೂವಿನ ಮೂಟೆಗಳನ್ನು ತಲೆಯ ಮೇಲೆ ಹೊತ್ತು ಒಬ್ಬರ ನಂತರ ಮತ್ತೊಬ್ಬರು ಬರುತ್ತಿದ್ದರು. ಮಾರುಕಟ್ಟೆಗೆ ತಂದಾಗ ವ್ಯಾಪಾರದ ಭರಾಟೆ ಜೋರಾಗಿತ್ತು.ಗುಣಮಟ್ಟದ ಹಳದಿ, ಬಿಳಿ ಹಾಗೂ ವಿವಿಧ ವರ್ಣದ ಸೇವಂತಿಯ 10 ಮಾರು ಪುಷ್ಪಕ್ಕೆ ತಲಾ ₹ 1 ಸಾವಿರ. ಇದೇ ದರಕ್ಕೆ ಕನಕಾಂಬರ 10 ಮಾರು, ಮಲ್ಲಿಗೆ 8 ಮಾರು ಹೂ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್‌) ಹೂಗಳು ಕೆ.ಜಿಗೆ ₹ 300 ರಂತೆ ಮಾರಾಟವಾದವು.

ಮನೆಗಳಲ್ಲಿ ಪ್ರತಿಷ್ಠಾಪಿಸುವ ದೇವಿ, ಲಕ್ಷ್ಮಿ ಮೂರ್ತಿ, ಕಳಶದ ಹಾರ ₹ 200ರಿಂದ ₹ 500 ಹಾಗೂ ದ್ವಿಚಕ್ರ, ಕಾರು, ಬಸ್ಸು, ಲಾರಿ ಸೇರಿ ವಿವಿಧ ವಾಹನಗಳಿಗಾಗಿ ₹ 500ರಿಂದ ₹ 5 ಸಾವಿರದವರೆಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಮಾರಾಟವಾದವು.

ಕಳೆದ ವಾರಕ್ಕಿಂತಲೂ ಹಣ್ಣುಗಳ ದರವೂ ಹೆಚ್ಚಾಗಿತ್ತು. 1 ಕೆ.ಜಿ ಲೆಕ್ಕದಲ್ಲಿ ಸೇಬು ₹ 110, ಬಾಳೆ ಹಣ್ಣು ₹ 60, ದಾಳಿಂಬೆ ₹ 160, ಮೂಸಂಬಿ ₹ 60, ಕರಿದ್ರಾಕ್ಷಿ, ಬಿಳಿ ದ್ರಾಕ್ಷಿ ತಲಾ ₹ 120 ಹಾಗೂ ವೀಳ್ಯದ ಎಲೆ ₹ 80 ಕಟ್ಟು, ಮಾವಿನ ಸೊಪ್ಪು ₹ 30 ಕಟ್ಟು, ಬನ್ನಿ ಪತ್ರೆ, ಬಿಲ್ವ ಪತ್ರೆ ₹ 20 ಕಟ್ಟು, ಬಾಳೆ ದಿಂಡು ಜೋಡಿ ₹ 40, ತೆಂಗಿನಕಾಯಿ ₹ 20ರಿಂದ 30ರವರೆಗೂ ಮಾರಾಟವಾದವು.

ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆ, ಗಾಂಧಿ ವೃತ್ತ, ಆನೆಬಾಗಿಲು ರಸ್ತೆ, ಮೆದೇಹಳ್ಳಿ ಮಾರ್ಗದಲ್ಲೂ ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅಲ್ಲಿಯೂ ವ್ಯಾಪಾರದ ಭರಾಟೆ ಜೋರಾಗಿತ್ತು. ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಾಹನ ದಟ್ಟಣೆ ಎಂದಿಗಿಂತಲೂ ಹೆಚ್ಚಾಗಿ ಕಂಡು ಬಂತು. ಸಂಚರಿಸಲು ಹರಸಾಹಸ ಪಡಬೇಕಾಯಿತು. ಖರೀದಿಗೆ ಬಂದಿದ್ದ ಶೇ 90ರಷ್ಟು ಜನರು ಮಾಸ್ಕ್‌ ಧರಿಸಿರಲಿಲ್ಲ. ಯಾರಲ್ಲೂ ಕೋವಿಡ್‌ ಆತಂಕವೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT