ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆಗೆ ಅಧಿಕಾರ ಬೇಕೇ ಹೊರತು ಕೋಮುವಾದಿಗಳ ಜತೆ ಕೈಜೋಡಿಸುವುದಕ್ಕಲ್ಲ:ಡಿ.ಸುಧಾಕರ್

Published 9 ಮಾರ್ಚ್ 2024, 14:14 IST
Last Updated 9 ಮಾರ್ಚ್ 2024, 14:14 IST
ಅಕ್ಷರ ಗಾತ್ರ

ಹಿರಿಯೂರು: ‘ಜನರ ಸೇವೆ ಮಾಡಲು ಅಧಿಕಾರ ಇರಬೇಕೇ ಹೊರತು ಕೋಮುವಾದಿಗಳ ಜೊತೆ ಕೈ ಜೋಡಿಸುವುದಕ್ಕಲ್ಲ. ಜಾತ್ಯತೀತ ಜನತಾದಳ ಇದೀಗ ಕೋಮುವಾದಿ ಜನತಾದಳವಾಗಿ ಪರಿವರ್ತನೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಹರಿಶ್ಚಂದ್ರ ಘಾಟ್ ಬಡಾವಣೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭೋವಿ ಸಮುದಾಯ ಭವನ, ಅಂಬೇಡ್ಕರ್ ಭವನ ಹಾಗೂ ಶ್ರೀಕೃಷ್ಣ ಸಮುದಾಯ ಭವನಗಳ ಮುಂದುವರಿದ ಕಾಮಗಾರಿ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

‘ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುವುದಿಲ್ಲ ಎಂದು ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ವಿರೋಧ ಪಕ್ಷಗಳವರು ಟೀಕೆ ಮಾಡಲು ಶುರು ಮಾಡಿದ್ದರು. ಆದರೆ ಗ್ಯಾರಂಟಿ ಯೋಜನೆಗಳನ್ನು ನಾವು ಸಮರ್ಪಕವಾಗಿ ಜಾರಿ ಮಾಡಿದ್ದೇ ತಡ ವಿರೋಧಿಗಳು ಗಪ್ ಚುಪ್ ಆದರು. ಅವರ ಹಾಗೇ ನಮಗೆ ಸುಳ್ಳು ಹೇಳಲು ಬರುವುದಿಲ್ಲ. ರಾಜಕೀಯ ಎಂದರೆ ಜನರ ಸೇವೆ ಎಂದು ನಂಬಿರುವ ಪಕ್ಷ ನಮ್ಮದು. ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂಬಂತಹ ಹಸಿ ಸುಳ್ಳುಗಳನ್ನು ಹೇಳುವುದು ನಮ್ಮ ಪಕ್ಷದ ಸಿದ್ಧಾಂತವಲ್ಲ. ಉಳಿದಿರುವ ನಾಲ್ಕು ವರ್ಷದಲ್ಲಿ ರಾಜ್ಯವನ್ನು ಸಂಪೂರ್ಣ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತೇವೆ. ಎಲ್ಲ ವರ್ಗದ ಜನರ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು ಕಾಂಗ್ರೆಸ್ ಪಕ್ಷ ಮಾತ್ರ ಜನರ ಆಶೋತ್ತರಗಳನ್ನು ಈಡೇರಿಸಬಲ್ಲುದು ಎಂಬುದನ್ನು ಮರೆಯಬಾರದು’ ಎಂದು ಸಚಿವರು ಎಚ್ಚರಿಸಿದರು.

‘ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಗೋಶಾಲೆಗಳನ್ನು ಆರಂಭಿಸುತ್ತಿದ್ದೇವೆ. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಭರದಿಂದ ಸಾಗುತ್ತಿದೆ. ಫ್ಲೋರೈಡ್ ನೀರು ಸೇವಿಸಿ ಪದೇಪದೇ ಕಾಯಿಲೆ ಬೀಳುತ್ತಿದ್ದ ಐಮಂಗಲ ಹೋಬಳಿಯ 36 ಹಳ್ಳಿಗಳಿಗೆ ಕುಡಿಯುವ ನೀರು ತಲುಪಿದ್ದು, ಇನ್ನೊಂದು ವರ್ಷದಲ್ಲಿ ಇಡೀ ತಾಲ್ಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಕೊಡಲಿದ್ದೇವೆ’ ಎಂದರು. 

‘ಅಧಿಕಾರದ ಬೆನ್ನುಹತ್ತಿ ಹೋದವರನ್ನು ದೇವರು ಕೂಡಾ ಕ್ಷಮಿಸಲಾರ. 2013 ರಿಂದ 2018 ರವರೆಗೆ ಸಾವಿರಾರು ದೇವಾಲಯಗಳಿಗೆ ಅನುದಾನ ನೀಡಿದ್ದೆವು. ಆದರೆ ಆನಂತರ ಬಹಳಷ್ಟು ಅಭಿವೃದ್ಧಿ ಕೆಲಸಗಳು 5 ವರ್ಷ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸುವ ಬದ್ಧತೆ ತೋರಿಸುತ್ತಿದ್ದೇವೆ. ಮರುಚಾಲನೆ ನೀಡಿರುವ ಮೂರೂ ಜನಾಂಗದ ಸಮುದಾಯ ಭವನಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುತ್ತೇವೆ’ ಎಂದು ಸುಧಾಕರ್ ಘೋಷಿಸಿದರು.

ಮಾಜಿ ಸಂಸದ ಬಿಎನ್ ಚಂದ್ರಪ್ಪ ಮಾತನಾಡಿ, ‘ಅಭಿವೃದ್ಧಿಯತ್ತ ಕ್ಷೇತ್ರವನ್ನು ಕೊಂಡೊಯ್ಯಬೇಕೆಂಬ ತುಡಿತ ಸಚಿವರಿಗಿದೆ. ಜಾತಿ ಮೀರಿದ ರಾಜಕಾರಣ ಮಾಡಿ ಗೆದ್ದವರು ಸುಧಾಕರ್. ಪ್ರಚಾರಪ್ರಿಯರ ನಡುವೆ ಹೆಚ್ಚು ಮಾತನಾಡದೆ ಎಲ್ಲ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಸುಧಾಕರ್ ಉತ್ತಮ ನಾಯಕರಾಗಿ ರೂಪುಗೊಂಡಿದ್ದಾರೆ. ಅಭಿವೃದ್ಧಿ ಮಾಡಲು ಹೃದಯವಂತಿಕೆ ಬೇಕು. ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವೆಂದು ನಂಬಿಸಿ ಅಧಿಕಾರಕ್ಕೆ ಬರುವ ಪಕ್ಷವನ್ನು ನೀವೆಲ್ಲ ನೋಡಿದ್ದೀರಿ. ಆದರೆ ಸುಳ್ಳು ಹೇಳುವ ಅವಶ್ಯಕತೆ ನಮಗಿಲ್ಲ. ನಮ್ಮ ಪಕ್ಷದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಮೂಲಕ ಅಧಿಕಾರ ಯಾಚಿಸುತ್ತೇವೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಎಂ.ಎಸ್.ಈರಲಿಂಗೇಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಗೀತಾ ನಾಗಕುಮಾರ್, ನಗರಸಭೆ ಸದಸ್ಯ ಬಿ.ಎನ್. ಪ್ರಕಾಶ್, ಸರ್ಕಾರಿ ನೌಕರರ ಸಂಘದ ಆರ್. ಶಿವಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಕಲ್ಲಹಟ್ಟಿ ತಿಪ್ಪೇಸ್ವಾಮಿ, ಪ್ರೇಮ್ ಕುಮಾರ್, ಪಿ. ಆರ್. ದಾಸ್, ಶಿವುಯಾದವ್, ರಂಗಯ್ಯ, ಎಸ್. ಆರ್. ತಿಪ್ಪೇಸ್ವಾಮಿ, ವಿಕೆ ಗುಡ್ಡ ಮಹಲಿಂಗಪ್ಪ, ದಿಂಡಾವರ ಮಹೇಶ್, ಹೇಮಂತಕುಮಾರ್, ಜಿ. ಎಲ್. ಮೂರ್ತಿ, ಭೂತಾಭೋವಿ, ಕಲ್ಲಟ್ಟಿಹರೀಶ್, ಶಿವರಂಜಿನಿ, ಸುಜಾತ, ನಟೇಶ್, ಸಣ್ಣಪ್ಪ, ಜ್ಞಾನೇಶ್, ಶಿವಕುಮಾರ್, ಗುರುಪ್ರಸಾದ್, ಚಳಮಡು ಬಾಲರಾಜು ಹಾಜರಿದ್ದರು.

ಸಿಲಿಂಡರ್ ದರ ₹465 ರಿಂದ ₹1150ಕ್ಕೆ ಏರಿಸಿದವರು ಯಾರು?
‘ಸತತ 9 ವರ್ಷ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸುತ್ತ ಬಂದವರು ಈಗ ನೂರು ರೂಪಾಯಿ ಇಳಿಸಿದ್ದಾರೆ. ಇಷ್ಟು ದಿನ ಬೆಲೆ ಏರಿಕೆಯ ಅರಿವು ನಿಮಗೆ ಬಂದಿರಲಿಲ್ಲವೇ? ಎಂದು ಯುವಕರು ಬಿಜೆಪಿಯವರನ್ನು ಕೇಳಬೇಕಿದೆ’ ಎಂದು ರಾಜ್ಯ ಕಾರ್ಮಿಕ ನಿಗಮ ಮಂಡಳಿಯ ಉಪಾಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು.  ‘ಸಿಲಿಂಡರ್ ಬೆಲೆಯನ್ನು ₹465 ರಿಂದ ₹1150ಕ್ಕೆ ಏರಿಸಿದವರು ಯಾರು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಬಂದಿದೆ ಎಂದು ನೂರು ರೂಪಾಯಿ ಕಡಿಮೆ ಮಾಡಿರುವವರು ಹೇಗೆ ಸಾವಿರಾರು ರೂಪಾಯಿ ದೋಚಿದ್ದಾರೆ ಎಂಬುದನ್ನು ಜನತೆ ಮರೆಯಬಾರದು. 21 ಮಂದಿ ಕಾರ್ಪೋರೇಟ್ ಕುಳಗಳ ₹11.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿಯವರಿಗೆ ರೈತರ ಬಡವರ ಸಾಲ ಮನ್ನಾ ಮಾಡಿ ಎಂದರೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ. ಇವರಿಗೆ ಬಡವರ ಕಲ್ಯಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಆರೋಪಿಸಿದರು. ‘ದೇಶದ ಚಿತ್ರಣವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸುಳ್ಳನ್ನೇ ಆಸ್ತಿಯನ್ನಾಗಿಸಿಕೊಂಡಿರುವ ಬಿಜೆಪಿಯವರು ಬೀದಿಯಲ್ಲಿ ನಿಂತು ಸುಳ್ಳು ಹೇಳಿದಾಕ್ಷಣ ಕಾಂಗ್ರೆಸ್ ಪಕ್ಷದ ಸಾಧನೆಗಳಿಗೆ ಧಕ್ಕೆಯಾಗದು’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT