ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಡುಗೊಲ್ಲ ಸಮುದಾಯಕ್ಕೆ ಹೆಚ್ಚಿನ ಶೈಕ್ಷಣಿಕ ಅವಕಾಶ ಕಲ್ಪಿಸಲು ಯತ್ನ–ಸಚಿವ ಸುಧಾಕರ್

Published 2 ಜುಲೈ 2024, 13:46 IST
Last Updated 2 ಜುಲೈ 2024, 13:46 IST
ಅಕ್ಷರ ಗಾತ್ರ

ಹಿರಿಯೂರು: ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮಾಜಕ್ಕೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಕಾಡುಗೊಲ್ಲ ಸಂಘದ ರಾಜ್ಯ ಹಾಗೂ ತಾಲ್ಲೂಕು ಘಟಕದ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ  ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣದ ಗೀಳಿಗೆ ಬೀಳದೆ ಅಧ್ಯಯನದಲ್ಲಿ ನಿರತರಾದರೆ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ. ಯಾವ ಅಭ್ಯಾಸಗಳಿಂದ ಬದುಕಿಗೆ ಒಳಿತಾಗುತ್ತದೆ ಎಂಬ ಅರಿವು ಇದ್ದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ, ಸಮುದಾಯಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ದೊರೆಯಬೇಕಿದೆ. ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ದಶಕಗಳಿಂದ ನಡೆಸಿಕೊಂಡು ಬಂದಿರುವ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಮೀಸಲಾತಿ ಆದೇಶ ಹೊರಡಿಸುವ ಸಂಬಂಧ ಕೇಂದ್ರದ ನಾಯಕರನ್ನು ಸಂಪರ್ಕಿಸಿದ್ದು, ಸಕಾರಾತ್ಮಕ ಭರವಸೆ ದೊರೆತಿದೆ’ ಎಂದರು. 

‘ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸುವ ಪ್ರಯತ್ನದಲ್ಲಿ ಇದ್ದೇವೆ. ಸಮಾಜದಲ್ಲಿ ಇನ್ನೂ ಉಳಿದಿರುವಂತಹ ಅನಿಷ್ಟ ಆಚರಣೆಗಳನ್ನು ತೊಡೆದು ಹಾಕಬೇಕು. ಮೂಢನಂಬಿಕೆಗಳ ಬದಲು ಕಾಡುಗೊಲ್ಲ ಸಮಾಜದವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಮಾರಂಭದ ನೇತೃತ್ವ ವಹಿಸಿದ್ದ ವನಕಲ್ಲು ಪೀಠದ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ  ಅಂಕ ಗಳಿಕೆಗಷ್ಟೇ ಅಧ್ಯಯನ ಮಾಡದೇ, ಸಮಾಜಕ್ಕೆ ಆದರ್ಶ ನಾಗರಿಕರಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕೆಎಎಸ್, ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬೇಕು. ಪ್ರಯತ್ನ ಪ್ರಾಮಾಣಿಕವಾಗಿದ್ದಲ್ಲಿ ಗುರಿ ಸಾಧನೆ ಕಷ್ಟವಲ್ಲ’ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಕಾಡುಗೊಲ್ಲ ಸಮುದಾದಯ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್.ದಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಭಾಗಿಯಾಗಿದ್ದರು.

ಮೀಸೆ ಮಹಾಲಿಂಗಪ್ಪ, ಗೀತಾನಂದಿನಿ ಗೌಡ, ಪಾಪಣ್ಣ, ಶಿವರಂಜನಿ, ಬಿ.ಡಿ. ಬಸವರಾಜ್, ಕೆ. ಟಿ. ತಿಪ್ಪೇಸ್ವಾಮಿ, ನಾಗರಾಜ್, ಆಲಮರದಟ್ಟಿ ರಂಗಯ್ಯ, ಚಿತ್ತಪ್ಪ, ಧನಂಜಯ, ಗೋವಿಂದಪ್ಪ, ಹೇಮಂತ್ ಯಾದವ್, ಚಿತ್ರಜಿತ್ ಯಾದವ್, ತಿಪ್ಪೀರಯ್ಯ, ನಾಗೇಂದ್ರಪ್ಪ, ಪಾರ್ಥ ಯಾದವ್, ಅಭಿನಂದನ್, ಮುರಳಿ, ತಿಪ್ಪೇಸ್ವಾಮಿ,ಮೀನಾಕ್ಷಿ ನಂದೀಶ್, ಕೃಷ್ಣ ಪೂಜಾರಿ, ಜನಾರ್ದನ್, ಹರೀಶ್, ಶಿವಾನಂದ್, ನಾಗಣ್ಣ, ಆಲೂರು ತಮ್ಮಣ್ಣ, ಪಿ. ಕರಿಯಪ್ಪ, ಖಾದಿ ರಮೇಶ್, ಶಿವು ಯಾದವ್, ಡಾಬಾ ಚಿಕ್ಕಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT