ಮಂಗಳವಾರ, ಜನವರಿ 26, 2021
18 °C
ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯ

ಕೋವಿಡ್‌: ಶಿಕ್ಷಕರು ಮೃತಪಟ್ಟಲ್ಲಿ ಪರಿಹಾರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿ ಕೋವಿಡ್‌ನಿಂದ ಮೃತಪಟ್ಟಲ್ಲಿ ಇತರೆ ವಾರಿಯರ್‌ಗಳಿಗೆ ನೀಡುವಷ್ಟೇ ಪರಿಹಾರವನ್ನು ನೀಡಬೇಕು ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶನಿವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಅಷ್ಟೇ ಅಲ್ಲ; ಶಿಕ್ಷಕರೂ ಕೊರೊನಾ ವಾರಿಯರ್‌ಗಳೇ. ಹೀಗಾಗಿ ಅವರನ್ನು ವಾರಿಯರ್‌ ಎಂದು ಸರ್ಕಾರ ಪರಿಗಣಿಸಬೇಕು. ಮೃತಪಟ್ಟಲ್ಲಿ ಸೂಕ್ತ ಪರಿಹಾರ ನೀಡಬೇಕು. ಈ ಕುರಿತು ಮುಖ್ಯಮಂತ್ರಿ, ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಕೋವಿಡ್-19 ಶೈಕ್ಷಣಿಕ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿದೆ. ಎಂಟತ್ತು ತಿಂಗಳು ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮದೊಂದಿಗೆ ಜನವರಿಯಿಂದ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಿದೆ. ಇದು ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಸಂತಸ, ಉತ್ಸಾಹ ಉಂಟು ಮಾಡಿದ್ದು, ಶ್ರದ್ಧೆಯಿಂದ ಅನೇಕರು ತರಗತಿಗಳಿಗೆ ಹಾಜರಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

‘ಮುಂಬರುವ ಪರೀಕ್ಷೆ ಸಮರ್ಥವಾಗಿ ಎದುರಿಸಲು ತರಗತಿಗಳಿಗೆ ಹಾಜರಾದರೆ ಉತ್ತಮ. ಸರ್ಕಾರ ಆನ್‌ಲೈನ್‌, ಆಫ್‌ಲೈನ್‌ ಎರಡಕ್ಕೂ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಒತ್ತಾಯವಿಲ್ಲ’ ಎಂದು ತಿಳಿಸಿದರು.

‘ಅಶುದ್ಧ ಕುಡಿಯುವ ನೀರು ಸೇವನೆಯಿಂದ ಅನೇಕ ಕಾಯಿಲೆಗಳನ್ನು ಆಹ್ವಾನಿಸಿದಂತಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಗ್ರಾಮಾಂತರ ಪ್ರದೇಶದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಶುದ್ಧ ಕುಡಿಯುವ ನೀರನ್ನು ನೀಡಬೇಕಿದೆ. ಬಿಸಿಯೂಟಕ್ಕೂ ಇದನ್ನೇ ಬಳಕೆ ಮಾಡಬೇಕಿದೆ. ಅದಕ್ಕಾಗಿ ಕ್ಷೇತ್ರ ವ್ಯಾಪ್ತಿಯ ಒಂದು ಸಾವಿರ ಶಾಲೆಗಳಲ್ಲಿ ಆರ್‌ಒ ಘಟಕ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ಭರವಸೆ ನೀಡಿದರು.

‘ಆರ್‌ಒ ಘಟಕಗಳ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ, ಸರ್ಕಾರದಿಂದ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಈಗಾಗಲೇ 100 ಶಾಲೆಗಳಿಗೆ ಈ ಸೌಲಭ್ಯ ನೀಡಲಾಗಿದೆ. ಅದರಲ್ಲಿ ಜಿಲ್ಲೆಯ 33 ಶಾಲೆಗಳು ಇವೆ’ ಎಂದರು.

‘ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ದುರ್ಘಟನೆ ಶೋಭೆ ತರುವಂತಹದ್ದಲ್ಲ. ಈ ಬಗ್ಗೆ ನನಗೂ ವಿಷಾದವಿದೆ. ಪವಿತ್ರ ಸ್ಥಳ ಎಂಬುದಾಗಿ ಕರೆಯುವ ಸದನದಲ್ಲಿ ಇದು ನಡೆಯಬಾರದಿತ್ತು. ಇದು ಮುಂದೆ ಮರುಕಳಿಸಬಾರದು. ಈ ಕುರಿತು ನಾನೂ ಸೇರಿ ಎಲ್ಲ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಯ್ಯ, ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಉಪಪ್ರಾಂಶುಪಾಲ ಜಯಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.