ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಅನಾರೋಗ್ಯ ಆಹ್ವಾನಿಸುತ್ತಿರುವ ರಸ್ತೆಬದಿ ಹೋಟೆಲ್‌

ಸ್ವಚ್ಛತೆ ಕೊರತೆ: ಕೆಡಿಪಿ ಸಭೆಯಲ್ಲಿ ಶಾಸಕ ಎನ್.ವೈ.ಜಿ ಬೇಸರ
Published 13 ಜೂನ್ 2024, 14:09 IST
Last Updated 13 ಜೂನ್ 2024, 14:09 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ರಸ್ತೆಬದಿ ಹೋಟೆಲ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಕೂಡಲೇ ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸೂಚಿಸಿದರು.

ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹೋಟೆಲ್‌ನವರು ಒಂದೇ ಬಕೆಟ್‌ ನೀರಿನಲ್ಲಿ ತಟ್ಟೆ ಹಾಗೂ ಲೋಟಗಳನ್ನು ಅದ್ದಿ ತೆಗೆಯುತ್ತಾರೆ. ಹೋಟಲ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ. ಸ್ವಚ್ಛತೆ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಿದೆ. ದಿಢೀರ್‌ ಭೇಟಿ ನೀಡಿ ಪರಿಶೀಲಿಸುವಂತೆ ಹಿಂದಿನ ಸಭೆಗಳಲ್ಲಿ ಸೂಚಿಸಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ತಂಡಗಳನ್ನು ರಚಿಸಿ ಅಗತ್ಯವಿದ್ದಲ್ಲಿ ಪೊಲೀಸ್‌ ನೆರವು ಪಡೆದು ಹೋಟೆಲ್‌ಗಳ ಮೇಲೆ ದಾಳಿ ಮಾಡಿ’ ಎಂದು ಟಿಎಚ್‌ಒ ಡಾ. ಮಧುಕುಮಾರ ಅವರಿಗೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮಾಯವಾಗಿದೆ, ಆವರಣದಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲಕಾಲಕ್ಕೆ ಆರೋಗ್ಯ ರಕ್ಷಕ ಸಮಿತಿ ಸಭೆ ನಡೆಸಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿಗೆ ಬರುವ ಅನುದಾನದಲ್ಲಿ ಕನಿಷ್ಠ ಶೇ 60ರಷ್ಟನ್ನು ಶಾಲಾ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಮೀಸಲಿಸಬೇಕು. ಸಾಕಷ್ಟು ಕೊಠಡಿಗಳು ದುರಸ್ತಿಗೆ ಎದುರು ನೋಡುತ್ತಿರುವ ಬಗ್ಗೆ ದೂರುಗಳು ಬಂದಿದೆ. ಇನ್ನು ಮುಂದೆ ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ.ಆರ್.‌ ಪ್ರಕಾಶ್‌ ಅವರಿಗೆ ಸೂಚಿಸಲಾಯಿತು.

ಅನೇಕ ಶಾಲೆಗಳಲ್ಲಿ ಶುದ್ಧ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಬಿಸಿಯೂಟ ತಯಾರಿಸಲೂ ನೀರು ಇಲ್ಲದಂತಾಗಿದೆ. ಕೆಲ ಶಾಲೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ಬಿಇಒ ನಿರ್ಮಲಾದೇವಿ ಹೇಳಿದರು. ಕೂಡಲೇ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಕಡ್ಡಾಯವಾಗಿ ಎಲ್ಲಾ ಶಾಲೆಗಳಿಗೆ ಸಂಪರ್ಕ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಜಿಲ್ಲಾಪಂಚಾಯಿತಿ ಎಇಇ ನಾಗನಗೌಡ ಅವರಿಗೆ ಎನ್‌ವೈಜಿ ಸೂಚಿಸಿದರು.

ಅಂಗನವಾಡಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ದೂರಿದೆ. ಆಹಾರ ಪದಾರ್ಥಗಳನ್ನು ಪರೀಕ್ಷಿಸಿ ಪಡೆಯಬೇಕು. ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ ಎಲ್ಲರೂ ಉತ್ತರ ನೀಡಬೇಕಾಗುತ್ತದೆ. ಕೆಲವಡೆ ಕಾರ್ಯಕರ್ತೆಯರು ಮನೆಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂಬ ಮಾಹಿತಿ ಇದ್ದು, ಕೇಂದ್ರಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸಿಡಿಪಿಒ ನವೀನ್‌ ಅವರಿಗೆ ಸೂಚಿಸಲಾಯಿತು.

ತಹಶೀಲ್ದಾರ್‌ ಜಗದೀಶ್‌, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ದಾದಾಪೀರ್‌, ರೇಷ್ಮೆ ವೀರೇಶ್‌, ಶೋಭಾ ತಿಪ್ಪೇಸ್ವಾಮಿ, ಅಯ್ಯಣ್ಣ, ಶ್ರೀನಿವಾಸ್‌, ಬಸವರಾಜ್‌, ಸಿಪಿಐ ವಸಂತ್‌ ಆಸೋದೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್.‌ ಖಾದರ್‌, ಜಿ. ಪ್ರಕಾಶ್ ಉಪಸ್ಥಿತರಿದ್ದರು.

ಮೊಳಕಾಲ್ಮುರಿನಲ್ಲಿ ಗುರುವಾರ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಮೊಳಕಾಲ್ಮುರಿನಲ್ಲಿ ಗುರುವಾರ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ಅಗತ್ಯ ದಾಸ್ತಾನಿಗೆ ಸೂಚನೆ

ಮುಂಗಾರು ಆರಂಭವಾಗಿದ್ದು ತಾಲ್ಲೂಕಿನಾದ್ಯಂತ ಉತ್ತಮ ಮಳೆಯಯಾಗುತ್ತಿದೆ. ಅಗತ್ಯ ಬಿತ್ತನೆಬೀಜ ರಸಗೊಬ್ಬರ ದಾಸ್ತಾನು ಮಾಡಬೇಕು. ರೈತರಿಂದ ಯಾವುದೇ ದೂರುಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿ ಪ್ರಕಾಶ್‌ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಶೇಂಗಾ ಸೇರಿದಂತೆ ಎಲ್ಲಾ ಬಿತ್ತನೆ ಬೀಜಗಳ ದಾಸ್ತಾನು ಇಡಲಾಗಿದೆ. ಬೇಡಿಕೆಯಷ್ಟು ತರಿಸಲು ಕ್ರಮ ಕೈಗೊಳ್ಳಲಾಗಿದೆ. ದೂರು ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಗುತ್ತಿಗೆ ನಿಮಗ್ಯಾಕೆ ನೀಡಬೇಕು..?

‘ಮುಂಚಿತವಾಗಿ ಅನುದಾನ ಬಿಡುಗಡೆ ಮಾಡಿದರೂ ಕೆಲಸ ಪೂರ್ಣಗೊಳಿಸದೇ ಸತಾಯಿಸುತ್ತೀರಿ. ನಿಮಗಿಂತ ಕೆಲಸವಾದ ನಂತರ ಹಣ ಪಡೆಯುವ ಗುತ್ತಿಗೆದಾರರು ವಾಸಿ ಇಂತಹ ಸಂಪತ್ತಿಗೆ ನಿಮಗೆ ಯಾಕೆ ಕಾಮಗಾರಿಗಳನ್ನು ನೀಡಬೇಕು? ಶಾಸಕ ಮಾತ್ರ ಕೆಲಸ ಮಾಡಿದರೆ ಸಾಲದು ಅಧಿಕಾರಿಗಳೂ ವ್ಯವಸ್ಥೆಯಲ್ಲಿ ಕೈಜೋಡಿಸಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ನಿರ್ಮಿತಿ ಕೇಂದ್ರದ ಸಿಬ್ಬಂದಿಯನ್ನು ಎನ್‌ವೈ ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT