ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೈಕೆ ಕೇಂದ್ರ ತೆರೆದ ಮುರುಘಾ ಮಠ

ಬಡವರಿಗೆ ಕೋವಿಡ್‌ ಚಿಕಿತ್ಸೆ ಉಚಿತ; ಶಿವಮೂರ್ತಿ ಮುರುಘಾ ಶರಣರು
Last Updated 20 ಮೇ 2021, 12:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ಬಳಲುವ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಮುರುಘಾ ಮಠದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರೊಂದಿಗೆ ಆಂಗ್ಲ ಮಾಧ್ಯಮ ಶಾಲೆಗೆ ಗುರುವಾರ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು. ಉತ್ತಮ ಚಿಕಿತ್ಸೆ ನೀಡುವಂತೆ, ರೋಗಿಗಳನ್ನು ಆರೈಕೆ ಮಾಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದರು. ಆರೈಕೆ ಕೇಂದ್ರಕ್ಕೆ ಅಗತ್ಯವಿರುವ ನೆರವಿನ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದರು.

‘ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿದೆ. ಕೋವಿಡ್‌ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮಠದ ಅಧೀನದಲ್ಲಿರುವ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 140 ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆಸ್ಪತ್ರೆ ಸಮೀಪದಲ್ಲೇ ಇರುವ ಹೋಟೆಲ್‌ ನವೀನ್‌ ರೆಜೆನ್ಸಿ ಬಾಡಿಗೆ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆ ರೋಗಿಗಳ ಬಂದರೆ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ’ ಎಂದು ಶರಣರು ಮಾಹಿತಿ ನೀಡಿದರು.

‘ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಕೋವಿಡ್‌ ಬಗ್ಗೆ ಚರ್ಚಿಸಿದರು. ಮಠದ ಸೇವೆಯ ನಿರೀಕ್ಷೆಯಲ್ಲಿರುವ ಇಂಗಿತ ವ್ಯಕ್ತಪಡಿಸಿದರು. ಆಮ್ಲಜನಕದ ಕೊರತೆ ನೀಗಿಸುವ ಉದ್ದೇಶದಿಂದ ಉತ್ಪಾದನಾ ಘಟಕ ಸ್ಥಾಪಿಸಿದರೆ ಸಹಕರಿಸುವುದಾಗಿ ಭರವಸೆ ನೀಡಿದರು. ಜೂನ್‌ ತಿಂಗಳಲ್ಲಿ ಘಟಕ ಅಸ್ತಿತ್ವಕ್ಕೆ ಬರಲಿದೆ’ ಎಂದರು.

‘ಕೋವಿಡ್‌ ಸೃಷ್ಟಿಸಿದ ವಿಪತ್ತು ನಿರ್ವಹಣೆಗೆ ಮಠ ಸಜ್ಜಾಗಿದೆ. ಆರೈಕೆ ಕೇಂದ್ರಕ್ಕೆ ಬರುವ ಸೋಂಕಿತರಿಗೆ ಉಚಿತ ಚಿಕಿತ್ಸೆ, ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುವ ಬಡವರು ಇದರ ಪ್ರಯೋಜನ ಪಡೆಯಬಹುದು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT