ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯ ಸಾರುವ ಕ್ಷೇತ್ರ ನಾಯಕನಹಟ್ಟಿ

ಐತಿಹಾಸಿಕ ಪ್ರವಾಸಿ ತಾಣವಾದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ
Last Updated 5 ಜನವರಿ 2019, 20:15 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಭಾವೈಕ್ಯ ಸಾರುವ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದು.

ವರ್ಷಕ್ಕೆ 13ರಿಂದ 15 ಲಕ್ಷ ಭಕ್ತರು ಭೇಟಿ ನೀಡಿ ದರ್ಶನ ಪಡೆಯುವ ನಾಯಕನಹಟ್ಟಿ ಧಾರ್ಮಿಕ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿದೆ.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ಕೋಲಾರ, ಪಾವಗಡ, ಕೊಟ್ಟೂರು, ಬಳ್ಳಾರಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಹೊರರಾಜ್ಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮಹಾರಾಷ್ಟ್ರದಿಂದ ಭಕ್ತರು, ಪ್ರವಾಸಿಗರು, ಇತರ ಜಿಲ್ಲೆಯ ಶಾಲಾಮಕ್ಕಳು, ಸ್ವಾಮೀಜಿ, ಅವಧೂತರು, ಸಾಧುಸಂತರು ಪಟ್ಟಣದಲ್ಲಿರುವ ಒಳಮಠ ಹಾಗೂ ಹೊರಮಠಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷ ದೇವಾಲಯಕ್ಕೆ ಸುಮಾರು 13ರಿಂದ 15 ಲಕ್ಷ ಜನರು ಭೇಟಿ ನೀಡಿದ್ದಾರೆ. ದಿನ ಕಳೆದಂತೆ ಕ್ಷೇತ್ರದ ಮಹಿಮೆ, ದೇವರ ಮೇಲಿನ ಭಕ್ತಿಯಿಂದ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ದೇವಾಲಯ ಸಿಬ್ಬಂದಿ ಎಸ್. ಸತೀಶ್ ಹೇಳುತ್ತಾರೆ.

ಹಿಂದೂ–ಮುಸ್ಲಿಂ ಭಾವೈಕ್ಯ:ಗುರು ತಿಪ್ಪೇರುದ್ರಸ್ವಾಮಿ ಅವರು ಐಕ್ಯವಾದ ಸ್ಥಳದಲ್ಲಿ ಹೊರಮಠವನ್ನು ನಿರ್ಮಿಸಲಾಗಿದೆ. ಈ ದೇವಾಲಯ ಜಿಲ್ಲೆಯಲ್ಲೇ ವಿಶೇಷತೆಯನ್ನು ಪಡೆದಿದೆ. ದೇವಾಲಯ ಇಂಡೋ- ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಈ ದೇವಾಲಯವನ್ನು ಹೈದರಾಲಿ ನಿರ್ಮಿಸಿದ ಎನ್ನುವ ಪ್ರತೀತಿ ಇದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಜಾತಿ, ಧರ್ಮಗಳ ಭೇದಗಳನ್ನು ದೂರ ಸರಿಸಿ ಎಲ್ಲರೂ ಒಂದೇ ಎನ್ನುವ ಭಾವೈಕ್ಯ ಸಂದೇಶವನ್ನು ಹೊರಮಠ ನೀಡುತ್ತದೆ ಎಂದು ಗ್ರಾಮಸ್ಥ ದಳವಾಯಿ ರುದ್ರಮುನಿ, ಪಿ.ರುದ್ರೇಶ ಹೇಳುತ್ತಾರೆ.

ದೇವಾಲಯದ ಇತಿಹಾಸ: ತಿಪ್ಪೇರುದ್ರಸ್ವಾಮಿಯು ಸಂತ. ಯೋಗಿಯಾಗಿ, ಅವಧೂತನಾಗಿ ಜ್ಞಾನಯೋಗ, ಕರ್ಮಯೋಗ, ಭಕ್ತಯೋಗದ ಮೂಲಕ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಲು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇವರು ಕ್ರಿ.ಶ. 1570ರಿಂದ 1650ರ ಮಧ್ಯೆ ಜೀವಿಸಿದ್ದು, ಎಲ್ಲಿಯೂ ನೆಲೆ ನಿಲ್ಲದೇ ಸಮಾಜ ಸುಧಾರಣೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಪ್ರಯಾಣ ಸಂಸ್ಕೃತಿಯ ಮೂಲಕ ನಾಯಕನಹಟ್ಟಿಗೆ ಬಂದರು. ನಂತರ ನಡೆದಿದ್ದೆಲ್ಲ ಪವಾಡ. ಅದಕ್ಕಾಗಿಯೇ ತಿಪ್ಪೇರುದ್ರಸ್ವಾಮಿ ಜನಮಾನಸದಲ್ಲಿ ಪವಾಡ ಪುರುಷನಾಗಿ ನೆಲೆಯೂರಿದರು. ನಾಯಕನಹಟ್ಟಿ ಭಾಗದಲ್ಲಿ 700 ವರ್ಷಗಳ ಹಿಂದೆಯೇ ಇಲ್ಲಿನ ಬರಗಾಲವನ್ನು ಊಹಿಸಿದ್ದ ಅವರು ಸುಸಜ್ಜಿತವಾದ ಕೆರೆಗಳನ್ನು ಕಟ್ಟಿಸಿದರು. ಕೃಷಿ, ನೀರಾವರಿ ಬೇಸಾಯವನ್ನು ಹೇಳಿಕೊಟ್ಟರು. ಶ್ರೇಣಿಕೃತ ಸಮಾಜದಲ್ಲಿದ್ದ ಜಾತಿ ತಾರತಮ್ಯವನ್ನು ಧಿಕ್ಕರಿಸಿದರು. ಸ್ತ್ರೀ ಸಮಾನತೆಯನ್ನು ಎತ್ತಿಹಿಡಿದು ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದು ಜಾತ್ಯತೀತ ಮನೋಭಾವವನ್ನು ಕ್ಷೇತ್ರದಲ್ಲಿ ಬಿತ್ತಿದರು.

ಕ್ರಿ.ಶ.1650ರ ನಂತರ ಚಿಕ್ಕಕೆರೆಯ ಬಳಿ ಪಾಲ್ಗುಣ ಮಾಸದ ಬಹುಳ ಚಿತ್ತಾ ನಕ್ಷತ್ರದ ದಿನ ಐಕ್ಯವಾದರು. ಅಂದಿನ ದಿನದ ನೆನಪಿಗಾಗಿ ಪ್ರತಿವರ್ಷವೂ ಜಾತ್ರೆ ನಡೆಸಲಾಗುತ್ತಿದೆ ಎಂದು ಹೊರಮಠ ದೇವಾಲಯದ ಅರ್ಚಕ ಕೆ.ಟಿ. ರುದ್ರೇಶ ಹೇಳಿದರು.

ವಾರ್ಷಿಕ ಜಾತ್ರೆಗೆ ವರ್ಷ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಾತ್ರೆ ಮಾತ್ರವಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ರೀತಿಯ ಪರವುಗಳನ್ನು, ಹರಕೆಗಳನ್ನು ಸಲ್ಲಿಸುತ್ತಾರೆ.

‘ಮೂಲ ಸೌಕರ್ಯಕ್ಕೆ ಒತ್ತು’
ರಾಜ್ಯದ ಮುಜುರಾಯಿ ದೇವಾಲಯಗಳಲ್ಲಿ ತಿಪ್ಪೇರುದ್ರಸ್ವಾಮಿ ದೇವಾಲಯ ಎ.ಶ್ರೇಣಿಯನ್ನು ಪಡೆದಿದೆ. ನಿತ್ಯವೂ ವಿವಿಧ ಪೂಜೆ, ಅಭಿಷೇಕ ಕೈಂಕರ್ಯಗಳು ಜರುಗುತ್ತವೆ. ಭಕ್ತರಿಗೆ ದಾಸೋಹ ವ್ಯವಸ್ಥೆ, ವಸತಿ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎನ್ನುತ್ತಾರೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT