ಶನಿವಾರ, ಸೆಪ್ಟೆಂಬರ್ 19, 2020
23 °C
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ

ಪ್ರಧಾನಿ ಮೋದಿ ಮೀಸಲಾತಿ ತೆಗೆಯುವುದಿಲ್ಲ: ಛಲವಾದಿ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ಸಂವಿಧಾನ ಬದಲಿಸಿ ಮೀಸಲಾತಿ ಸೌಲಭ್ಯ ತೆಗೆಯುವುದಿಲ್ಲ. ಪರಿಶಿಷ್ಟ ಜಾತಿಯವರು, ಅದರಲ್ಲೂ ದಲಿತರು ಆತಂಕಪಡುವ ಅಗತ್ಯವಿಲ್ಲ’ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಕಚೇರಿ ಬಳಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಸಂವಿಧಾನ ಅನೇಕ ಬಾರಿ ತಿದ್ದುಪಡಿಯಾಗಿದೆ. ಇದು ಕೆಲವೊಮ್ಮೆ ಅನಿವಾರ್ಯವೂ ಹೌದು. ಆದರೆ, ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಮೀಸಲಾತಿ ಸೌಲಭ್ಯ ಪಡೆಯುತ್ತಿರುವವರು ಭೀತಿಗೆ ಒಳಗಾಗುವ ಅಗತ್ಯವಿಲ್ಲ’ ಎಂದು ಪುನರುಚ್ಚರಿಸಿದರು.

‘ಬಿಜೆಪಿ ದಲಿತ ವಿರೋಧಿಯಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯಲು ಶ್ರಮಿಸುತ್ತಿದೆ. ಬಲಿಷ್ಠ ಭಾರತ ನಿರ್ಮಾಣದ ಗುರಿ ಹೊಂದಿದೆ. ಪರಿಶಿಷ್ಟ ಜಾತಿಯಲ್ಲಿ ಕೇವಲ ದಲಿತರು ಮಾತ್ರ ಇಲ್ಲ. ಪಟ್ಟಿಯಲ್ಲಿ 101 ಜಾತಿ ಸೇರಿವೆ. ಅನೇಕ ಸಮಸ್ಯೆಗಳು ದಲಿತರನ್ನು ಕಾಡುತ್ತಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಬಿಜೆಪಿ ಸಂವಿಧಾನ ಹಾಗೂ ದಲಿತ ವಿರೋಧಿ ಎಂಬ ಹುಳುವನ್ನು ದಲಿತರ ಕಿವಿಯೊಳಗೆ ಕೆಲವರು ಬಿಟ್ಟಿದ್ದಾರೆ. ಅದನ್ನು ಹೊರತೆಗೆಯುವ ಹೊಣೆಗಾರಿಕೆ ರಾಜ್ಯದಲ್ಲಿ ನನಗೆ ನೀಡಲಾಗಿದೆ. ನಾವು ಕೋಮುವಾದಿಗಳಲ್ಲ ಎಂಬುದನ್ನು ನನ್ನ ಸಮುದಾಯದವರಿಗೆ ತಿಳಿಸುವ ಮೂಲಕ ಪಕ್ಷದ ಜೊತೆ ಕರೆದುಕೊಂಡು ಹೋಗಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವಿ.ಆರ್. ನಾಗರಾಜ್, ಸಂಪತ್, ಜೆ. ಶಶಿಧರ್, ನಾಗರಾಜ್‌ಬೇದ್ರೆ, ಭಾನುಮೂರ್ತಿ, ದೇವರಾಜ್‌ ನಗರಂಗೆರೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು