ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13,14ರಂದು ಪಾದಯಾತ್ರೆಗೆ ತೀರ್ಮಾನ

ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರಿಗೆ ಮನವಿ
Last Updated 6 ಮಾರ್ಚ್ 2022, 5:05 IST
ಅಕ್ಷರ ಗಾತ್ರ

ಹಿರಿಯೂರು: ಭದ್ರಾ ಮೇಲ್ದಂಡೆ ಅಥವಾ ಬೇರೆ ಯಾವುದಾದರೂ ನೀರಾವರಿ ಯೋಜನೆ ಮೂಲಕ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರು ಮೀಸಲಿಡುವಂತೆ ಒತ್ತಾಯಿಸಿ ಮಾರ್ಚ್ 13 ಮತ್ತು 14ರಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸಕ್ಕೆ ಕೇವಲ 2 ಟಿಎಂಸಿ ಅಡಿ ನೀರು ನಿಗದಿಪಡಿಸಿದ್ದು, ಅಚ್ಚುಕಟ್ಟು ಹಾಗೂ ಹಿರಿಯೂರು, ಚಳ್ಳಕೆರೆ, ಕುದಾಪುರ, ಚಿತ್ರದುರ್ಗ, ಹೊಳಲ್ಕೆರೆ ನಗರಗಳಿಗೆ ಮತ್ತು ಅಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ವರ್ಷಕ್ಕೆ ಕನಿಷ್ಠ 8 ಟಿಎಂಸಿ ಅಡಿಯಿಂದ 8.50 ಟಿಎಂಸಿ ಅಡಿ ನೀರಿನ ಅಗತ್ಯವಿದೆ. 10 ಟಿಎಂಸಿ ಅಡಿ ನೀರು ಹರಿಸುವ ಆದೇಶ ಮಾಡುವವರೆಗೆ ವಾಣಿವಿಲಾಸದ ನೀರಿಗೆ ಯೋಜನೆಗಳನ್ನು ರೂಪಿಸುವುನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಜವನಗೊಂಡನಹಳ್ಳಿ ಮತ್ತು ಧರ್ಮಪುರ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ಪ್ರಕ್ರಿಯೆ ಶೀಘ್ರ ನಡೆಯಬೇಕು. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಕಾಮಗಾರಿ ನಡೆಸುವ ಮೂಲಕ ಖರ್ಚು ಮಾಡಬೇಕು. ಜಿಲ್ಲೆಯ ಏಕಮಾತ್ರ ಸಹಕಾರಿ ಸಕ್ಕರೆ ಕಾರ್ಖಾನೆ ಆಗಿರುವ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಿಸಬೇಕು ಎಂದು ತಿಪ್ಪೇಸ್ವಾಮಿ ಆಗ್ರಹಿಸಿದರು.

‘ರೈತ ಸಂಘ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 13ರಂದು ಧರ್ಮಪುರ ಮತ್ತು ಜವನಗೊಂಡನಹಳ್ಳಿ ಹೋಬಳಿ ಕೇಂದ್ರಗಳಿಂದ ಅಚ್ಚುಕಟ್ಟು ರೈತರು ಪಾದಯಾತ್ರೆ ಹೊರಟು ಮಾರ್ಚ್ 14ರಂದು ತಾಲ್ಲೂಕು ಕಚೇರಿ ಆವರಣದಲ್ಲಿ ಒಟ್ಟುಗೂಡಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ. ಸರ್ಕಾರದ ಮಂಜೂರಾತಿ ದೊರೆಯುವವರೆಗೆ ಹೋರಾಟ ನಿಲ್ಲದು’ ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಶಿವಣ್ಣ, ವೀರಭದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT