ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಬೆಳಗಿದ ಫ.ಗು.ಹಳಕಟ್ಟಿ

ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್‌.ವಿಶ್ವನಾಥ್‌ ಹೇಳಿಕೆ
Last Updated 3 ಜುಲೈ 2022, 2:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಲ್ಯಾಣ ಕ್ರಾಂತಿ ವೇಳೆ ಸಾಕಷ್ಟು ವಚನ ಸಾಹಿತ್ಯ ನಾಶವಾದವು. ಹೀಗೆ ಜನರಿಂದ ದೂರವಾಗಿದ್ದ ವಚನಗಳ ಸಂಗ್ರಹವನ್ನು ಮತ್ತೆ 20ನೇ ಶತಮಾನದಲ್ಲಿ ಬೆಳಕಿಗೆ ತಂದವರು ಡಾ.ಫ.ಗು. ಹಳಕಟ್ಟಿ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್‌.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಚ್‌. ವಿಶ್ವನಾಥ್‌ ತಿಳಿಸಿದರು.

ನಗರದ ತರಾಸು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಡಾ.ಫ.ಗು. ಹಳಕಟ್ಟಿ ಯವರ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜದ ಅಜ್ಞಾನವನ್ನು ಹೊಡೆದೋಡಿಸುವ ಬೃಹತ್‌ ವಚನ ಸಾಹಿತ್ಯದ ಭಂಡಾರ ರಚನೆಯಾಯಿತು. ಆದರೆ, ಕಲ್ಯಾಣ ಕ್ರಾಂತಿಯ ವೇಳೆ ಸಾಕಷ್ಟು ವಚನಗಳು ಜನರಿಂದ ದೂರವಾದವು. ಹೊರ ಜಗತ್ತಿಗೆ ಮರೆಯಾಗಿದ್ದ ವಚನ ದೀವಟಿಕೆಗಳನ್ನು ಸಂಶೋಧಿಸಿ, ಅಧ್ಯಯನ ಮಾಡಿದ ಹಳಕಟ್ಟಿ ನಾಡಿಗೆ ಪರಿಚಯಸಿದರು’ ಎಂದರು.

‘ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ ಇವರು ಸ್ವತಃ ಮಗ ಸಾವನ್ನಪ್ಪಿದ ಸಂದರ್ಭದಲ್ಲಿ ಕೂಡ ವಚನಗಳನ್ನು ಶೇಖರಣೆ ಮಾಡುವುದನ್ನು ನಿಲ್ಲಿಸಲಿಲ್ಲ’ ಎಂದರು.

ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಮಾತನಾಡಿ, ‘ಹಳಕಟ್ಟಿಯವರು ಫಕೀರನಂತೆ ಊರೂರು ಅಲೆದು ವಚನಗಳನ್ನು ಸಂಗ್ರಹಿಸಿದರು. ವಿಜಯಪುರ, ಬಾಗಲಕೋಟೆ, ಬೆಳಗಾವಿ ಗಡಿ ಭಾಗದ ಗ್ರಾಮಗಳನ್ನು ಸುತ್ತಿ, ತಾಳೆಗರಿಗೆ ಹಾಗೂ ಹಸ್ತಪತ್ರಿಕೆಗಳನ್ನು ಶೇಖರಿಸಿದರು’ ಎಂದರು.

ನೇಕಾರ ಒಕ್ಕೂಟದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಮಲ್ಲಿಕಾರ್ಜುನ ‘ಗ್ರಂಥ ಸಂಪಾದನೆ ಮತ್ತು ಪ್ರತಿಕಾ ಕ್ಷೇತ್ರಕ್ಕೆ ಡಾ.ಫ.ಗು.ಹಳಕಟ್ಟಿಯವರ ಕೊಡುಗೆ’, ಡಾ.ಎಚ್‌.ಜಿ.ವಿಜಿ ಕುಮಾರ್‌ ಅವರು ‘ವಚನ ಸಾಹಿತ್ಯ ಮತ್ತು ಮಹಿಳಾ ಅಭಿವ್ಯಕ್ತಿ’ ಹಾಗೂ ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಮೋಹನ್‌ ‘ವಚನ ಸಾಹಿತ್ಯ - ಲೋಕದೃಷ್ಠಿ’ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ಎಸ್‌.ಸುರೇಶ್‌, ಸಮಾಜದ ಮುಖಂಡ ನಾಗರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT