ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ: ‘ನಮ್ಮ ಶಾಲೆ ನಮ್ಮ ಕೊಡುಗೆ’ ಕಾರ್ಯಕ್ರಮ, ಒಂದೇ ದಿನ ₹1 ಕೋಟಿ ದೇಣಿಗೆ!

Last Updated 18 ಡಿಸೆಂಬರ್ 2021, 4:32 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಶುಕ್ರವಾರ ಒಂದೇ ದಿನ ಸುಮಾರು ₹ 1 ಕೋಟಿ ದೇಣಿಗೆ ಸಂಗ್ರಹವಾಗಿದೆ!

ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ‘ನಮ್ಮ ಶಾಲೆ, ನಮ್ಮ ಕೊಡುಗೆ’ ಕಾರ್ಯಕ್ರಮ ನಡೆಸಲಾಯಿತು. ಪ್ರತಿ ಗ್ರಾಮದ ಶಾಲೆಗಳಲ್ಲೂ ದಾನಿಗಳು, ಶಿಕ್ಷಣಾಸಕ್ತರನ್ನು ಕರೆಸಿ ಕಾರ್ಯಕ್ರಮ ನಡೆಸಲಾಯಿತು. ಪೋಷಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪರಿಕರಗಳನ್ನು ದಾನವಾಗಿ ನೀಡಿದರು.

ಬಿಸಿಯೂಟಕ್ಕೆ ಬೇಕಾದ ತಟ್ಟೆ, ಲೋಟ, ಕಲಿಕೆಗೆ ಅಗತ್ಯ ನೋಟ್‌ಬುಕ್, ಪೆನ್, ಬ್ಯಾಗ್, ಪ್ರೊಜೆಕ್ಟರ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್, ಡೆಸ್ಕ್, ಕುರ್ಚಿ, ಟೇಬಲ್, ಪಾಠೋಪಕರಣ, ಪೀಠೋಪಕರಣವನ್ನು ದಾನವಾಗಿ ನೀಡಿದರು. ಹೆಚ್ಚಿನ ಶಾಲೆಗಳಿಗೆ ನಗದು ರೂಪದಲ್ಲಿ ದೇಣಿಗೆ ನೀಡಿದ್ದು, ಶಾಲೆಗೆ ಅಗತ್ಯ ಸಾಮಗ್ರಿ ಖರೀದಿಸುವಂತೆ ಸಲಹೆ ನೀಡಿದರು.

ತಾಲ್ಲೂಕಿನ ಎಚ್.ಡಿ. ಪುರ ಸರ್ಕಾರಿ ಶಾಲೆಗೆ ಗ್ರಾಮಸ್ಥರು ₹ 4.2 ಲಕ್ಷ ದೇಣಿಗೆ ನೀಡಿ ಗಮನ ಸೆಳೆದರು. ಚೀರನಹಳ್ಳಿ ಸರ್ಕಾರಿ ಶಾಲೆಗೆ ಅರೇನಹಳ್ಳಿ ತಿಪ್ಪೇಸ್ವಾಮಿ 40 ಇಂಚಿನ ಸ್ಮಾರ್ಟ್ ಟಿ.ವಿ., ಮಲ್ಲಿಕಾರ್ಜುನ್ ಎಂಬುವರು ಮ್ಯೂಸಿಕ್ ಸಿಸ್ಟಂ ನೀಡಿದರು. ಟಿ. ನುಲೇನೂರು ಶಾಲೆಗೆ ₹ 1 ಲಕ್ಷ ಮೌಲ್ಯದ ಸ್ಮಾರ್ಟ್ ಪ್ರೊಜೆಕ್ಟರ್, ಪಟ್ಟಣದ ಬಸ್ ನಿಲ್ದಾಣ ಶಾಲೆಗೆ ₹ 50 ಸಾವಿರ ಮೌಲ್ಯದ ಪರಿಕರ ನೀಡಲಾಯಿತು. ಕೋಟೆಹಾಳ್ ಶಾಲೆಗೆ ಗ್ರಾಮಸ್ಥರು ಸುಮಾರು ₹ 70 ಸಾವಿರ ಮೌಲ್ಯದ ಸ್ಮಾರ್ಟ್ ಟಿ.ವಿ., ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡಿದರು.

ಶಾಲೆಗಳಿಗೆ ದಾನಿಗಳ ನೆರವು ಪಡೆಯಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ವಿದ್ಯಾಂಜಲಿ 2.0 ಪೋರ್ಟಲ್‌ಗೆ ಪೂರಕವಾಗಿ ತಾಲ್ಲೂಕಿನ227 ಪ್ರಾಥಮಿಕ ಹಾಗೂ 46 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

*
ಗ್ರಾಮಸ್ಥರು ದೇವಾಲಯಗಳಿಗೆ ಉದಾರವಾಗಿ ದಾನ ನೀಡುತ್ತಾರೆ. ಶಾಲೆಯೂ ದೇವಾಲಯದಷ್ಟೇ ಪವಿತ್ರವಾಗಿದ್ದು, ಹೆಚ್ಚು ಕೊಡುಗೆ ನೀಡಬೇಕು.
-ಸಿ.ಎಂ. ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ

*
ಶಾಲೆ ಹಾಗೂ ಸಮುದಾಯ ಜತೆಯಲ್ಲೇ ಸಾಗಬೇಕು. ಶಾಲೆ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಅಗತ್ಯ.
-ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT