ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಹಾನಿ ಪರಿಶೀಲಿಸಿದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ರೈತರ ಜಮೀನಿಗೆ ಭೇಟಿ, ಅಧಿವೇಶನದಲ್ಲಿ ಚರ್ಚಿಸುವ ಆಶ್ವಾಸನೆ
Last Updated 18 ಸೆಪ್ಟೆಂಬರ್ 2020, 12:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಧಿಕ ಮಳೆಗೆ ಹಾನಿಯಾಗಿರುವ ಈರುಳ್ಳಿ ಬೆಳೆಯನ್ನು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶುಕ್ರವಾರ ಪರಿಶೀಲಿಸಿದರು. ಸಂಕಷ್ಟಕ್ಕೆ ಸಿಲುಕಿದ ರೈತರ ಅಳಲು ಆಲಿಸಿದರು. ಪರಿಹಾರದ ವಿಚಾರಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು.

ಉಪವಿಭಾಗಾಧಿಕಾರಿ ವಿ.ಪ್ರಸನ್ನ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ.ಸವಿತಾ ಅವರೊಂದಿಗೆ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿದರು. ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಗೆ ಒಳಗಾಗಿರುವ ಈರುಳ್ಳಿಯನ್ನು ಗಮನಿಸಿ ಮರುಕಪಟ್ಟರು.

ತಾಲ್ಲೂಕಿನ ದಂಡಿನಕುರುಬರಹಟ್ಟಿಯ ಭೀಮಾರೆಡ್ಡಿ ಅವರ ಜಮೀನಿಗೆ ಭೇಟಿ ನೀಡಿ ಈರುಳ್ಳಿ ಕಿತ್ತು ನೋಡಿದರು. 1988ರಿಂದ ಈರುಳ್ಳಿ ಬೆಳೆಯುತ್ತಿರುವ ಭೀಮಾರೆಡ್ಡಿ ಮೂರು ಎಕರೆಗೆ ಅಂದಾಜು ₹ 1 ಲಕ್ಷ ವೆಚ್ಚ ಮಾಡಿದ್ದಾರೆ. ಕೊಳೆ ರೋಗ ಬಂದು ಶೇ 90ರಷ್ಟು ಬೆಳೆ ಹಾನಿಯಾಗಿದೆ. ತೋಪರಮಾಳಿಗೆ, ಕಲ್ಲಹಳ್ಳಿ, ಕಾಸವರಹಟ್ಟಿ ಸೇರಿ ಹಲವು ಗ್ರಾಮದಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದೆ.

ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ‘ಈರುಳ್ಳಿ ಬೆಳೆದು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಉತ್ತಮ ಮಳೆ ಬಿದ್ದಿದ್ದರಿಂದ ಹೆಚ್ಚು ಬಿತ್ತನೆ ಮಾಡಿದ್ದರು. ಬೆಳೆ ಕೈಸೇರುವ ಮೊದಲೇ ಈರುಳ್ಳಿ ನೀರುಪಾಲಾಗಿದೆ. ನೂರಾರು ಕ್ವಿಂಟಲ್‌ ಈರುಳ್ಳಿ ಬೆಳೆಯುತ್ತಿದ್ದವರು ಕಂಗಾಲಾಗಿದ್ದಾರೆ. ಹಲವು ವರ್ಷಗಳಿಂದ ಇಂತಹ ವಿಪತ್ತು ಕಂಡಿರಲಿಲ್ಲ’ ಎಂದರು.

‘ಈರುಳ್ಳಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಜಿಲ್ಲೆಯ ಈರುಳ್ಳಿ ಹೊರ ರಾಜ್ಯ ಹಾಗೂ ವಿದೇಶಕ್ಕೆ ರವಾನೆ ಆಗುತ್ತಿತ್ತು. ಕಳೆದ ಹಿಂಗಾರು ಸಂದರ್ಭದಲ್ಲಿ ಕೊರೊನಾ ಕಾರಣಕ್ಕೆ ಬೆಲೆ ಸಿಗಲಿಲ್ಲ. ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಈರುಳ್ಳಿ ಹಾಕಿದ್ದರು. ಸುಮಾರು ಏಳು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ನಾಶವಾಗಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ತೋಟಗಾರಿಕೆ ಸಚಿವ ನಾರಾಯಣಗೌಡ ಅವರ ಗಮನ ಸೆಳೆಯುತ್ತೇನೆ. ಮುಖ್ಯಮಂತ್ರಿ ಭೇಟಿ ಮಾಡಿ ರೈತರಿಗೆ ನಷ್ಟ ಸರಿದೂಗಿಸಿಕೊಡುವಂತೆ ಮನವಿ ಮಾಡುತ್ತೇನೆ. ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ’ ಎಂದು ಆಶ್ವಾಸನೆ ನೀಡಿದರು.

ತಹಶೀಲ್ದಾರ್‌ ವೆಂಕಟೇಶಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT