ಸೋಮವಾರ, ಸೆಪ್ಟೆಂಬರ್ 27, 2021
22 °C
ಈರುಳ್ಳಿ ಬೆಳೆಗಾರರ ನೆರವಿಗೆ ಬರಲು ಸಿಎಂಗೆ ರೈತರ ಮನವಿ

ಹೊಲದಲ್ಲೇ ಬಿಟ್ಟರೆ ಕಷ್ಟ, ಮಾರುಕಟ್ಟೆಗೆ ಒಯ್ದರೂ ನಷ್ಟ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಈರುಳ್ಳಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ದಶಕಗಳಿಂದ ಐಮಂಗಲ ಹೋಬಳಿಯಲ್ಲಿ ಮಾತ್ರ ಹೆಚ್ಚಾಗಿ ಬೆಳೆಯುತ್ತಿದ್ದ ಈರುಳ್ಳಿಯನ್ನು ಈಚೆಗೆ ಜವನಗೊಂಡನಹಳ್ಳಿ ಹೋಬಳಿಯ ಹಳ್ಳಿಗಳಲ್ಲೂ ಮಳೆ ಹಾಗೂ ಪಂಪ್‌ಸೆಟ್ ನೀರಾವರಿ ಆಶ್ರಯದಲ್ಲಿ ಬೆಳೆಯ ತೊಡಗಿದ್ದಾರೆ. ಈರುಳ್ಳಿ ಬೆಳೆ ಜೂಜು ಇದ್ದಂತೆ. ಉತ್ತಮ ಇಳುವರಿ ಬಂದು ಒಳ್ಳೆಯ ದರ ಸಿಕ್ಕರೆ ಲಾಟರಿ ಹೊಡೆದಂತೆ. ಇಲ್ಲವಾದರೆ ಬದುಕು ಬೀದಿಗೆ ಬಿದ್ದಂತೆ. ಸೂರಪ್ಪನಹಟ್ಟಿಯ ಕೃಷ್ಣ ಎಂಬುವರು ಲಾಭದ ಆಸೆ ಇಟ್ಟುಕೊಂಡು ಎರಡು ಎಕರೆಯಲ್ಲಿ ಈರುಳ್ಳಿ ಹಾಕಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

‘ಸುಮಾರು ₹ 1 ಲಕ್ಷ ಖರ್ಚು ಮಾಡಿ ಎರಡು ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೆ. ಅದರಲ್ಲಿ ಒಂದು ಎಕರೆ ಈರುಳ್ಳಿಯು ರೋಗದಿಂದ ಕೊಳೆತುಹೋಯಿತು. ಇನ್ನೊಂದು ಎಕರೆಯಲ್ಲಿಯ ಬೆಳೆಯನ್ನು ಶುಕ್ರವಾರ ಕಿತ್ತುಹಾಕಿದ್ದೇನೆ. ನನ್ನ ಸ್ನೇಹಿತ ಶಿವಕುಮಾರ್ ಎಂಬುವರು ಸೋಮವಾರ 150 ಪ್ಯಾಕೆಟ್ ಈರುಳ್ಳಿಯನ್ನು ಬೆಂಗಳೂರಿಗೆ ಒಯ್ದಿದ್ದು, 60 ಕೆ.ಜಿ ಪ್ಯಾಕೆಟ್ ₹ 300ರಿಂದ
₹ 700ಕ್ಕೆ ಮಾರಾಟವಾಗಿದೆ. ಈರುಳ್ಳಿ ಕೀಳಲು ಚೀಲಕ್ಕೆ ₹ 20, ಗೆಡ್ಡೆ ಕೊಯ್ಯಲು ಚೀಲಕ್ಕೆ ₹ 40, ಈರುಳ್ಳಿ ತುಂಬುವ ಚೀಲಕ್ಕೆ ₹ 40, ಬೆಂಗಳೂರು ಮಾರುಕಟ್ಟೆಗೆ ಒಯ್ಯಲು ಚೀಲವೊಂದಕ್ಕೆ ₹ 50 ಖರ್ಚು ಬರುತ್ತದೆ’ ಎಂದು ಅವರು ಹೇಳಿದರು.

‘ಬಿತ್ತನೆ ಬೀಜ, ಗೊಬ್ಬರ, ಕಳೆಗೆ ಒಂದು ಎಕರೆಗೆ ₹ 50 ಸಾವಿರ ಖರ್ಚು ಬಂದಿದೆ. ಇಳುವರಿ ಚೆನ್ನಾಗಿದ್ದರೆ 150ರಿಂದ 180 ಪ್ಯಾಕೆಟ್ ಬರುತ್ತಿತ್ತು. ಈ ಬಾರಿ 100ರಿಂದ 120 ಪ್ಯಾಕೆಟ್ ಬಂದಿದ್ದು, ಅದರಲ್ಲಿ ಶೇ 30ರಷ್ಟು ಗೆಡ್ಡೆಗಳು ಕೊಳೆತಿವೆ. ಈರುಳ್ಳಿ ಬೆಳೆಯಲು ಹೋಗಿದ್ದರಿಂದ ನನಗೆ ಕನಿಷ್ಠ ₹ 60 ಸಾವಿರದಿಂದ ₹ 70 ಸಾವಿರದಷ್ಟು ನಷ್ಟವಾಗಿದೆ. ಬೆಂಗಳೂರಿನಲ್ಲಿಯ ದರ ಕೇಳಿ ಈರುಳ್ಳಿಯನ್ನು ಐದಾರು ದಿನಗಳಿಂದ ಹೊಲದಲ್ಲಿಯೇ ಬಿಟ್ಟಿದ್ದೇನೆ. ನನ್ನಂತಹ ಸಣ್ಣ ರೈತರಿಗೇ ಹೀಗಾದರೆ ನೂರಿನ್ನೂರು ಎಕರೆಯಲ್ಲಿ ಬೆಳೆದವರ ಗತಿಯೇನು’ ಎಂದು ಅವರು ಪ್ರಶ್ನಿಸಿದರು.

ಕೆ.ಜಿ.ಗೆ ₹ 20– ₹ 25 ಅಗತ್ಯ

‘ಮಳೆಯ ಅಭಾವ, ಕೊಳವೆಬಾವಿಗಳಲ್ಲಿ ಅಲ್ಪಸ್ವಲ್ಪ ಜಿನುಗುವ ನೀರು, ದುಬಾರಿ ಬೀಜ, ಗೊಬ್ಬರ, ಕೂಲಿ, ಇದು ಸಾಲದು ಎಂಬಂತೆ ಬೆಳೆಗೆ ಬೀಳುವ ರೋಗ. ಇಂತಹ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆ ತೆಗೆದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಬೆಂಗಳೂರಲ್ಲಿ ಕೆ.ಜಿ.ಗೆ ಆರೇಳು ರೂಪಾಯಿ ದರ ಸಿಕ್ಕರೆ ರೈತರು ಉಳಿಯಲು ಸಾಧ್ಯವೇ? ಈರುಳ್ಳಿಗೆ ಕನಿಷ್ಠ ಕೆ.ಜಿಗೆ ₹ 20–25 ಸಿಕ್ಕರೆ ಹಾಕಿದ್ದ ಬಂಡವಾಳ ಕೈಗೆ ಬರುತ್ತದೆ. ಹಿಂದಿನ ವರ್ಷ ಈರುಳ್ಳಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಕಾಟನಾಯಕನಹಳ್ಳಿಯ ರೈತ ಮಹಿಳೆಯ ನೆರವಿಗೆ ಯಡಿಯೂರಪ್ಪ ಬಂದಿದ್ದರು. ಬೊಮ್ಮಾಯಿಯವರು ಈರುಳ್ಳಿ ಬೆಳೆಗಾರರ ನೆರವಿಗೆ ಬಂದು, ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಅಥವಾ ಸೂಕ್ತ ಪರಿಹಾರ ಘೋಷಿಸಬೇಕು’ ಎಂದು ರೈತ ಕೃಷ್ಣ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.