ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ

ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ
Last Updated 30 ಜನವರಿ 2021, 14:01 IST
ಅಕ್ಷರ ಗಾತ್ರ

ಹಿರಿಯೂರು: ‘ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜತೆಗೆ, ನಿಮಗೆ ಸಿಕ್ಕಿರುವ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಪೊಲೀಸ್ ಮಹಾನಿರ್ದೇಶಕ (ತರಬೇತಿ) ಪದಮ್ ಕುಮಾರ್ ಗರ್ಗ್ ಸೂಚಿಸಿದರು.

ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ ಐದನೇ ತಂಡದ ಸಿಪಿಸಿ ಮತ್ತು ಎರಡನೇ ತಂಡದ ಎಪಿಸಿ ಮತ್ತು ಕೆಎಸ್‌ಐಎಸ್‌ಎಫ್ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತರಬೇತಿ ಪಡೆದಾಕ್ಷಣ ಉತ್ತಮ ಪೊಲೀಸ್ ಆಗಲು ಸಾಧ್ಯವಿಲ್ಲ. ಸಾರ್ವಜನಿಕರ ಸುಖ, ದುಃಖಗಳಿಗೆ ಸ್ಪಂದಿಸುವ ಸಂವೇದನೆ ಹಾಗೂ ಸಾಮಾನ್ಯ ಜ್ಞಾನವೂ ಬೇಕಾಗುತ್ತದೆ. ಐಮಂಗಲ ಶಾಲೆಯಲ್ಲಿ ಉತ್ತಮ ತರಬೇತಿ ನೀಡುತ್ತಿದ್ದು, ಅದನ್ನು ತಮ್ಮ ಸೇವಾವಧಿಯಲ್ಲಿ ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಪ್ರಶಿಕ್ಷಣಾರ್ಥಿಗಳು ಪೊಲೀಸ್ ಸೇವೆಗೆ ಸೇರಿದ ನಂತರ ದೇಶದ ಶೇ 3ರಷ್ಟಿರುವ ವಿಶಿಷ್ಟ ವ್ಯಕ್ತಿಗಳಲ್ಲಿ ತಾವೂ ಒಬ್ಬರಾಗಲಿದ್ದಾರೆ. ಇಲಾಖೆಯಿಂದ ಹಲವಾರು ಸೌಲಭ್ಯಗಳು ದೊರೆಯಲಿವೆ. ನಿರ್ಗಮನ ಪಥ ಸಂದರ್ಭದಲ್ಲಿ ನೀವು ತೆಗೆದುಕೊಂಡಿರುವ ಪ್ರತಿಜ್ಞೆ ಕೇವಲ ಸ್ವೀಕಾರ ಶಬ್ದವಲ್ಲ. ಪ್ರತಿಜ್ಞೆಯಲ್ಲಿನ ಪ್ರತಿ ಪದವನ್ನು ಅರ್ಥ ಮಾಡಿಕೊಂಡು ನಿಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಇಲಾಖೆಗೆ ಕೀರ್ತಿ ತನ್ನಿ’ ಎಂದು ಕಿವಿಮಾತು ಹೇಳಿದರು.

ತರಬೇತಿ ಶಾಲೆಯ ಪ್ರಾಂಶುಪಾಲ ಪಿ. ಪಾಪಣ್ಣ, ‘ಪೊಲೀಸ್ ತರಬೇತಿ ಶಾಲೆ ಕಾರ್ಯಾರಂಭಗೊಂಡ ನಂತರ ಒಟ್ಟು 4 ತಂಡಗಳಲ್ಲಿ 1317 ಸಿವಿಲ್‌ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಮತ್ತು ಒಂದನೇ ತಂಡದಲ್ಲಿ 363 ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ನೀಡಲಾಗಿದೆ. ಪ್ರಸ್ತುತ 280 ಪ್ರಶಿಕ್ಷಣಾರ್ಥಿಗಳು 8 ತಿಂಗಳು ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಎಚ್ಚರ ವಹಿಸಿದ್ದರಿಂದ ಪ್ರಶಿಕ್ಷಣಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳಲಿಲ್ಲ. ಒಟ್ಟಾರೆ 1960 ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿ ನೀಡಲಾಗಿದೆ’ ಎಂದರು.

ಯೋಗ, ಧ್ಯಾನ, ಕರಾಟೆ, ವ್ಯಾಯಾಮ, ರೋಡ್ ವಾಕ್ ಅಂಡ್ ರನ್, ಅಡೆತಡೆಗಳ ಜಿಗಿತ, ಆಯುಧಸಹಿತ ಮತ್ತು ರಹಿತ ಕವಾಯಿತು, ಫೈರಿಂಗ್, ಅಶ್ರುವಾಯು ಪ್ರಯೋಗದ ಬಗ್ಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಕಲಿಕೆಯಲ್ಲಿ ಏಕತಾನತೆ ತಪ್ಪಿಸಲು ಬಿಡುವಿನ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಹೇಳಿದರು.

280 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ:ಬೆಂಗಳೂರು ನಗರ ಸಶಸ್ತ್ರ ಪಡೆಗೆ ಹಾಗೂ ಡಿಎಆರ್ ಘಟಕ ರಾಯಚೂರು, ಯಾದಗಿರಿ, ಮಂಗಳೂರು, ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 280 ಪ್ರಶಿಕ್ಷಣಾರ್ಥಿಗಳು ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ನಿರ್ಗಮಿಸಿದರು. ಇವರಲ್ಲಿ 271 ಮಂದಿ ಗ್ರಾಮಾಂತರ ಹಾಗೂ 9 ಮಂದಿ ನಗರ ಪ್ರದೇಶದವರಿದ್ದಾರೆ. 16 ಎಂಜಿನಿಯರಿಂಗ್ ಪದವೀಧರರು, 28 ಸ್ನಾತಕೋತ್ತರ ಪದವೀಧರರು, 21 ಜನ ಮಾಜಿ ಸೈನಿಕರು ಇದ್ದಾರೆ.

ಬಹುಮಾನ ವಿತರಣೆ:ಒಳಾಂಗಣ ವಿಷಯ ಹಾಗೂ ಹೊರಾಂಗಣ ವಿಷಯ ಹಾಗೂ ಫೈರಿಂಗ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಪ್ರಕಾಶ್ ರಂಗಪ್ಪ ಗೌಡ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಪದಮ್ ಕುಮಾರ್ ಗರ್ಗ್ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಪಿ. ಹರಿಶೇಖರನ್ ವಿತರಿಸಿದರು.

ಪಥ ಸಂಚಲನ ವೀಕ್ಷಣೆಗೆ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು, ಸಂಬಂಧಿಕರು ಮಕ್ಕಳನ್ನು ತಬ್ಬಿಕೊಂಡು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT