ಭಾನುವಾರ, ಆಗಸ್ಟ್ 14, 2022
25 °C

ಕಾಡು ಹಂದಿಗಳ ಹಾವಳಿ: ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯಲ್ಲಿ ಒಂದು ವಾರದಿಂದ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಹಾಗೂ ತೊಗರಿ ಬೀಜಗಳಿಗೆ ಕಾಡು ಹಂದಿಗಳು ಹಾನಿ ಮಾಡಿದ್ದು, ರೈತರಲ್ಲಿ ಆತಂಕ ಮೂಡಿಸಿವೆ.

ಚಿಕ್ಕಜಾಜೂರು ಹಾಗೂ ಸಮೀಪದ ಕೊಡಗವಳ್ಳಿ, ಕೊಡಗವಳ್ಳಿ ಹಟ್ಟಿ, ಕಡೂರು, ಐಯ್ಯನಹಳ್ಳಿ, ಅಂತಾಪುರ, ಹಿರೇಎಮ್ಮಿಗನೂರು, ಚಿಕ್ಕ ಎಮ್ಮಿಗನೂರು, ನಂದಿಹಳ್ಳಿ ಗ್ರಾಮಗಳಲ್ಲಿ ಕಳೆದ ವಾರದಿಂದ ಬಿತ್ತನೆ ಮಾಡಿರುವ ಮೆಕ್ಕೆಜೋಳ, ತೊಗರಿಗಳಿಗೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ.

‘ಕೊಡಗವಳ್ಳಿ ಗ್ರಾಮವೊಂದರಲ್ಲೇ 20ರಿಂದ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳದ ಜಮೀನಿಗೆ ಶನಿವಾರ ಕಾಡು ಹಂದಿಗಳು ಹಿಂಡು ಹಿಂಡಾಗಿ ದಾಳಿ ಮಾಡಿ, ಹೊಲವನ್ನು ಅಗೆದು ತಿನ್ನುತ್ತಿವೆ’ ಎಂದು ರೈತರಾದ ಮಧು ಪಾಲೇಗೌಡ, ಗಿಡ್ಡೋಬಜ್ಜರ ಬಸಣ್ಣ, ಬೋರಣ್ಣ, ಸಣ್ಣ ತಿಮ್ಮಣ್ಣ, ಗಿರಿಯಪ್ಪ, ರಾಜಣ್ಣ ಅಳಲು ತೋಡಿಕೊಂಡರು.

‘ಹೊಲವನ್ನು ಹಸನು ಮಾಡಲು, ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿಗಾಗಿ ಎಕರೆಗೆ ₹ 10 ಸಾವಿರದಿಂದ ₹12 ಸಾವಿರ ಖರ್ಚು ಮಾಡಿದ್ದೇವೆ. ಬಿತ್ತನೆ ಮಾಡಿದ ದಿನದಿಂದ ಅಕ್ಕ ಪಕ್ಕದ ರೈತರೊಂದಿಗೆ ಹೊಲಕ್ಕೆ ಹೋಗಿ, ಹಗಲು ರಾತ್ರಿಯಲ್ಲಿ ಪಾಳಿಯಾಗಿ ಹಂದಿಗಳನ್ನು ಕಾಯುತ್ತೇವೆ. ಆದರೂ, ಯಾವುದೋ ಸಮಯದಲ್ಲಿ ಹಂದಿಗಳು ಬಂದು ಹೊಲವನ್ನು ಕೆದಕಿ, ಒಂದು ಕಾಳನ್ನೂ ಬಿಡದೆ ತಿಂದು ಹಾಕುತ್ತಿವೆ. ಮತ್ತೆ ಸಾಲ ಮಾಡಿ ಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ನೆರವು ನೀಡಿ, ಹಂದಿಗಳ ಹಾವಳಿಯನ್ನು ತಪ್ಪಿಸಬೇಕು’ ಎಂದು ಗ್ರಾಮದ ರೈತರಾದ ಪ್ರಭುದೇವ, ರಂಗಸ್ವಾಮಿ, ಜಯಪ್ಪ, ಚಿಕ್ಕಜಾಜೂರಿನ ಕಲ್ಲೇಶಪ್ಪ, ಬಸವರಾಜ್‌, ನಾಗರಾಜ್‌ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.