ಮಣ್ಣಿನ ಪೈಪುಗಳಿಗೆ ಹೆಚ್ಚಿದ ಬೇಡಿಕೆ

7
ಬದುಕಿಗೆ ಆಸರೆಯಾದ ಕುಂಬಾರಿಕೆ

ಮಣ್ಣಿನ ಪೈಪುಗಳಿಗೆ ಹೆಚ್ಚಿದ ಬೇಡಿಕೆ

Published:
Updated:
Deccan Herald

ಸಿರಿಗೆರೆ: ಅನಾದಿ ಕಾಲದಿಂದಲೂ ಉದ್ಯಮವಾಗಿ ಬೆಳೆದು ನಿಂತ ಕುಂಬಾರಿಕೆ ಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈಗ ಅಲ್ಲೊಂದು, ಕುಟುಂಬಗಳು ಇದನ್ನು ನಂಬಿ ಜೀವನ ಸಾಗಿಸುತ್ತಿವೆ.

ಸದ್ಯ ಮಡಕೆ, ಹೆಂಚುಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ಇರುವುದರಿಂದ ಗದ್ದೆಗೆ ಬೇಕಾದ ಪೈಪುಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ ಸಮೀಪದ ಬಾವಿಹಾಳ್‌ ಗ್ರಾಮದ ಬಿ.ಎಂ ತಿಪ್ಪೇಸ್ವಾಮಿ ಕುಟುಂಬ.

30ಕ್ಕೂ ಹೆಚ್ಚು ವರ್ಷಗಳಿಂದ ಇದೇ ವೃತ್ತಿಯಲ್ಲಿ ತೊಡಗಿಕೊಂಡಿರುವ ಅವರು, ಇಂದಿನ ದಿನಗಳಿಗೆ ತಕ್ಕಂತೆ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ.

‘ಹಿಂದೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ಒಂದು ಕುಂಬಾರಿಕೆಯ ತರಬೇತಿ ನೀಡುತ್ತಿದ್ದರು. ಆಗ ತರಬೇತಿ ಪಡೆದು ಕುಂಬಾರಿಕೆ ಕಲಿತೆ. ಇದು ನನ್ನ ಕೈ ಹಿಡಿದಿದೆ’ ಎನ್ನುತ್ತಾರೆ ಅವರು.

‘ಒಂದೂವರೆ ಅಡಿಯಿಂದ 2 ಅಡಿ ಎತ್ತರ, ಒಂದೂವರೆ ಇಂಚು ಅಗಲದ ಪೈಪುಗಳಿಗೆ ಬೇಡಿಕೆ ಇದೆ. ಒಂದು ಪೈಪ್‌ಗೆ ನನಗೆ ₹8 ಖರ್ಚು ತಗುಲುತ್ತದೆ. ₹ 13ವರೆಗೂ ಮಾರಾಟ ಮಾಡುತ್ತೇನೆ. ಒಂದು ಟ್ರ್ಯಾಕ್ಟರ್‌ ಲೋಡ್‌ ಮಣ್ಣಿಗೆ, ಒಂದು ಸಾವಿರ ಪೈಪುಗಳನ್ನು ತಯಾರು ಮಾಡುತ್ತಿದ್ದೇನೆ. ಇವುಗಳನ್ನು ಆವುಗೆಯಲ್ಲಿ (ಬಟ್ಟಿ) ಸುಡುವುದಕ್ಕೆ ಕಟ್ಟಿಗೆಗೂ ಬರ. ಅಲ್ಲಿ–ಇಲ್ಲಿ ತಿರುಗಾಡಿ ಉರುವಲು ತರುತ್ತೇವೆ. ಅದು ಅರೆ ಬೆಂದರೂ ಕಷ್ಟ, ಅತಿ ಬೆಂದರೂ ಕಷ್ಟ’ ಎಂದು ಹೇಳಿದರು.

ಪೈಪುಗಳಿಗೆ ಬೇಡಿಕೆ ಹೆಚ್ಚಿದ್ದರೆ ಕೆಲಸ ಹೆಚ್ಚು. ಬೇಡಿಕೆ ಇಲ್ಲದಾಗ ಖಾಲಿ ಖಾಲಿ. ಆಗ ಮಕ್ಕಳೊಂದಿಗೆ ಕೂಲಿಗೆ ಹೋಗುತ್ತೇನೆ. ಕುಟುಂಬದವರು ಸಹಕಾರ ನೀಡುತ್ತಾರೆ ಎನ್ನುತ್ತಾರೆ ಅವರು.

‘ಮಡಕೆ, ಹೆಂಚು, ಪಾಟ್‌, ಹೂಜಿ, ಗುಡಾಣದಂತ ತಯಾರಿಕೆಗಳ ಮಾರಾಟ ಹೊಟ್ಟೆ ತುಂಬಿಸುತ್ತಿಲ್ಲ. ಹಾಗಾಗಿ ಪೈಪುಗಳನ್ನು ತಯಾರಿಸುತ್ತೇವೆ. ಬೇಸಿಗೆ ಇದ್ದರೆ ಪೈಪ್‌ಗಳಿಗೆ ಬೇಡಿಕೆ ಇರುವುದಿಲ್ಲ. ಮಳೆಗಾಲದಲ್ಲಿ ಬೇಡಿಕೆ ಹೆಚ್ಚು. ಹಾಗಾಗಿ ವ್ಯಾಪಾರಕ್ಕೆ ಮಳೆಗಾಲದವರೆಗೂ ಕಾಯಬೇಕು. ನಮ್ಮಲ್ಲಿ ತಯಾರಿಸುವ ಪೈಪ್‌ಗಳನ್ನು ದಾವಣಗೆರೆ, ಮಂಡ್ಯ, ಮೈಸೂರು, ಸಿಂಧನೂರು, ಶಿರಗುಪ್ಪ, ಮಾನ್ವಿ ಮತ್ತಿತರ ಕಡೆಯ ಗುತ್ತಿಗೆದಾರರಿಗೆ ಮಾರಾಟ ಮಾಡಿದ್ದೇವೆ’ ಎಂದು ಹೇಳಿದರು.

ನಮ್ಮ ಗ್ರಾಮದಲ್ಲಿ 8 ರಿಂದ 9 ಕುಂಬಾರಿಕೆ ಮಾಡುವ ಕುಟುಂಬಗಳಿದ್ದವು. ಆರ್ಥಿಕ ಮುಗ್ಗಟ್ಟಿನಿಂದ ತೊಂದರೆ ಅನುಭವಿಸಿ ನಾಲ್ಕು ಕುಟುಂಬಗಳು ದೂರದ ಊರಿಗೆ ಹೋಗಿವೆ. ಸರ್ಕಾರ, ಜಿಲ್ಲಾಡಳಿತಗಳಿಂದ ಯಾವುದೇ ರೀತಿಯ ಆಸರೆ ಇಲ್ಲದ್ದಕ್ಕೆ ಜೀವನ ಅರಸಿ ಪಟ್ಟಣಕ್ಕೆ ಗುಳೆ ಹೋಗಿವೆ ಎನ್ನುವ ಅವರು, ಸರ್ಕಾರಗಳು ಕುಂಬಾರರ ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !