ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕಾಲುಬಾಯಿ ಲಸಿಕಾಕರಣಕ್ಕೆ ಸಿದ್ಧತೆ ಪೂರ್ಣ

ಸೆ.26ರಿಂದ ಅಭಿಯಾನ ಆರಂಭ, 3,39,000 ಡೋಸ್‌ ಲಸಿಕೆ ಸರಬರಾಜು
Published 22 ಸೆಪ್ಟೆಂಬರ್ 2023, 6:05 IST
Last Updated 22 ಸೆಪ್ಟೆಂಬರ್ 2023, 6:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗದಂತೆ ಮುಂಜಾಗ್ರತಾ ಕ್ರಮವಾಗಿ ಸೆ.26ರಿಂದ ಅ.25ರವರೆಗೆ 4ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಲಸಿಕೆ ಸರಬರಾಜಾಗಿದ್ದು, ತಾಲ್ಲೂಕಿನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮರು ಹಂಚಿಕೆ ಮಾಡಲಾಗಿದೆ.

ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಕಾಲುಬಾಯಿ ರೋಗದಿಂದ ಜಾನುವಾರು ರಕ್ಷಿಸಲು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಮೂರು ಸುತ್ತಿನ ಲಸಿಕಾಕರಣ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. 2022ರ ನವೆಂಬರ್‌ನಲ್ಲಿ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆ ಶೇ 98ರಷ್ಟು ಸಾಧನೆ ಮಾಡಿದೆ. ಎತ್ತು, ಹೋರಿ, ಹಸು, ಎಮ್ಮೆಗಳಿಗೆ ಲಸಿಕೆ ಹಾಕಲಾಗುತ್ತದೆ. ಲಸಿಕಾ ಅಭಿಯಾನದ ಬಗ್ಗೆ ಈಗಾಗಲೇ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.

ಜಿಲ್ಲೆಗೆ 3,39,000 ಡೋಸ್‌ ಲಸಿಕೆ ಸರಬರಾಜಾಗಿದೆ. 2,25,603 ದನ, 1,13,304 ಎಮ್ಮೆ ಸೇರಿ 3,38,907 ಜಾನುವಾರುಗಳಿವೆ. ಆರು ತಾಲ್ಲೂಕುಗಳ 1,063 ಗ್ರಾಮಗಳಲ್ಲಿ ಏಕಕಾಲಕ್ಕೆ ಲಸಿಕಾಕರಣ ನಡೆಯಲಿದೆ. 237 ಲಸಿಕಾದಾರರಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.

ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು 100ರಿಂದ 120 ಜಾನುವಾರುಗಳಿಗೆ ಒಂದು ಬ್ಲಾಕ್‌ ಎಂದು ವರ್ಗೀಕರಿಸಿ ಒಟ್ಟು 3,390 ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆ ಹಾಕಲಿದ್ದಾರೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್‌ ಉಪಯೋಗಿಸಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಲಿಸಿಕೆ ನೀಡಿದ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕುಗಳಿಗೆ ಸರಬರಾಜುಗೊಂಡಿರುವ ಲಸಿಕೆಯನ್ನು ಶೀಥಿಲ ಘಟಕಗಳಲ್ಲಿ (ಕೋಲ್ಡ್‌ ಸ್ಟೋರೇಜ್‌) ಸಂಗ್ರಹಿಸಲಾಗಿದೆ. ಗ್ರಾಮಗಳಿಗೆ ಲಸಿಕೆ ತೆಗೆದುಕೊಂಡು ಹೋಗಲು ಹಾಲು ಒಕ್ಕೂಟದ ನೆರವಿನಿಂದ ಶೀಥಿಲ ಘಟಕದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕಿಟ್‌ಗಳನ್ನು ಸಹ ನೀಡಲಾಗುತ್ತಿದೆ. ಲಸಿಕಾ ಕಾರ್ಯಕ್ರಮಕ್ಕೆ ಪಶು ಇಲಾಖೆಗೆ ಜತೆಗೆ ಹಾಲು ಒಕ್ಕೂಟ ವ್ಯಾಪ್ತಿಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಸಮನ್ವಯದಿಂದ ಕೈಜೋಡಿಸಿದ್ದಾರೆ.

ಪ್ರತಿ ತಾಲ್ಲೂಕಿನಲ್ಲಿ ಲಸಿಕಾ ವೇಳಾಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ಸಿದ್ಧಗೊಳಿಸಲಾಗಿದೆ. ಜತೆಗೆ ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿ ಓಲೆ ಸಂಖ್ಯೆ ವಿವರಗಳನ್ನು ಸಂಗ್ರಹಿಸಲಾಗಿದೆ.

ಹಸು ಎಮ್ಮೆಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಿಸುವ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಮಾಲೀಕರು ಹೊರಬರಬೇಕು. ಲಸಿಕೆ ಹಾಕಿಸಿ ಜಾನುವಾರು ಆರೋಗ್ಯ ರಕ್ಷಣೆಗೆ ಮುಂದಾಗಬೇಕು.
–ಎ.ಬಾಬು ರತ್ನ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಗ್ರಾಮಗಳಲ್ಲಿ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವ್ಯತಿರಿಕ್ತ ಪರಿಣಾಮಗಳ ನಿರ್ವಹಣೆಗೆ ಅವಶ್ಯವಿರುವ ತುರ್ತು ಔಷಧಿ ಮತ್ತು ರಾಸಾಯನಿಕಗಳನ್ನು ಹಂಚಿಕೆ ಮಾಡಿ ಲಸಿಕಾ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಯೋಜಿಸಲಾಗಿದೆ.

ಲಸಿಕಾ ಅಭಿಯಾನದ ಪ್ರತಿ ತಂಡದಲ್ಲಿ ವೈದ್ಯರನ್ನೊಳಗೊಂಡ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜತೆಗೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ರೈತರ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲಿದ್ದಾರೆ. ಈ ಮೂಲಕ ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ರಕ್ಷಿಸಲು ಇಲಾಖೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT