ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇತೇಶ್ವರ ಸ್ಮರಣೋತ್ಸವದಲ್ಲಿ ಮಂಜುನಾಥ್‌ ಅವರಿಗೆ ದೀಕ್ಷೆ

ಪತ್ರಿಕಾಗೋಷ್ಠಿಯಲ್ಲಿ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಪಾಟೀಲ್
Last Updated 9 ಡಿಸೆಂಬರ್ 2018, 16:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೇದಾರ ಕೇತೇಶ್ವರ ಗುರುಪೀಠಕ್ಕೆ 21 ವರ್ಷದ ಯುವಕ ಬಿ. ಮಂಜುನಾಥ ಎಂಬುವವರನ್ನು ಡಿ. 10ರಂದು ನಡೆಯುವ ಸ್ಮರಣೋತ್ಸವದಂದು ಗುರುವಾಗಿ ಘೋಷಿಸಿ, ಮುಂದಿನ ದಿನಗಳಲ್ಲಿ ಸನ್ಯಾಸ ದೀಕ್ಷೆ ನೀಡಲು ತೀರ್ಮಾನಿಸಲಾಗಿದೆ ಎಂದುಅಖಿಲ ಕರ್ನಾಟಕ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಪಾಟೀಲ್ ತಿಳಿಸಿದರು.

ಅವರನ್ನೇ ಸಮುದಾಯದ ಗುರುವಾಗಿ ಸ್ವೀಕರಿಸಿ ನೇಮಕ ಮಾಡಿಕೊಳ್ಳಲು ಸಮುದಾಯದವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬಸವಪ್ರಭು ಕೇತೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ರಾಜ್ಯದಾದ್ಯಂತ ಅಲೆದಾಡಿ ಮೈಸೂರಿನ ಒಬ್ಬ ಯುವಕನನ್ನು ವಟುವನ್ನಾಗಿ ಮಾಡಿ, ದೀಕ್ಷೆ ನೀಡಲಾಗಿತ್ತು. ಪೋಷಕರ ಬಾಂಧವ್ಯಕ್ಕೆ ಸೋತ ಆ ಯುವಕ ವಾಪಾಸ್ ಹೋಗಿದ್ದಾರೆ. ಈ ಕಾರಣದಿಂದಾಗಿ ಪೀಠಕ್ಕೆ ಗುರುಗಳೇ ಇಲ್ಲದಂತಾಗಿತ್ತು ಎಂದರು.

‘ಮಂಜುನಾಥ ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಬಸವಪ್ರಭು ಕೇತೇಶ್ವರ ಸ್ವಾಮೀಜಿ ಅವರ ಶಿಷ್ಯರಾಗಿ 15 ವರ್ಷಗಳ ಒಡನಾಟವಿಟ್ಟುಕೊಂಡಿದ್ದರು. ಶ್ರೀಗಳ ಅನಾರೋಗ್ಯದ ವೇಳೆ ಅವರ ಪಾಲನೆ, ಶುಶ್ರೂಶೆ ಮಾಡಿದ್ದಾರೆ. ಬಸವಪ್ರಭು ಸ್ವಾಮೀಜಿ ಅವರು ಲಿಂಗೈಕ್ಯರಾಗುವ ಮುನ್ನ ಮಂಜುನಾಥ ಅವರನ್ನೇ ತಮ್ಮ ಬಳಿಕ ಮಠಕ್ಕೆ ಸ್ವಾಮೀಜಿಯಾಗಿ ಆಯ್ಕೆ ಮಾಡಬೇಕು ಎಂಬುದಾಗಿ ಪತ್ರವೊಂದರಲ್ಲಿ ಉಲ್ಲೇಖಿಸಿದ್ದಾರೆ. ಅದು ಈಚೆಗಷ್ಟೆ ನಮಗೆ ಸಿಕ್ಕಿದೆ’ ಎಂದು ತಿಳಿಸಿದರು.

‘ಬಸವಪ್ರಭು ಸ್ವಾಮೀಜಿ ಇಚ್ಛಾನುಸಾರ ಮಂಜುನಾಥ ಅವರನ್ನೇ ಸ್ವಾಮೀಜಿಯನ್ನಾಗಿ ಮಾಡುವ ಕುರಿತು ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿ ಟ್ರಸ್ಟ್‌ನವರು ಪ್ರಸ್ತಾಪಿಸಿದ್ದಾರೆ. ಆದರೆ, ಶ್ರೀಗಳು ಮಂಜುನಾಥ ಅವರನ್ನು ಸ್ವಾಮೀಜಿಯನ್ನಾಗಿ ಮಾಡುವ ಪ್ರಸ್ತಾಪವನ್ನು ನಿರಾಕರಿಸಿದ್ದು, ಈವರೆಗೂ ಒಪ್ಪಿಗೆ ನೀಡಿಲ್ಲ’ ಎಂದರು.

‘ರಾಜ್ಯದಲ್ಲಿ ನಮ್ಮ ಸಮುದಾಯದ 5 ಲಕ್ಷ ಜನಸಂಖ್ಯೆಯಿದೆ. ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರೆಲ್ಲರೂ ಬಿ. ಮಂಜುನಾಥ ಅವರನ್ನೇ ಗುರುವಾಗಿ ಸ್ವೀಕರಿಸಲು ಸಿದ್ಧರಿದ್ದಾರೆ. ಹೀಗಾಗಿ, ಪೀಠಾಧಿಕಾರಿಯಾಗಿ ನೇಮಕ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಸಿ. ಕುಬೇರಪ್ಪ, ಸದಸ್ಯರಾದ ಕೆ. ಬಸವರಾಜ್, ಪ್ರಕಾಶ್, ಜಗದೀಶ್, ರಾಮಣ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT