ಚಿತ್ರದುರ್ಗ: ‘ಈಡಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು ಹಾಗೂ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆರ್ಯ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
‘ಮಾಲೀಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್‌ನಿಂದ ಕರೆತಂದು ಬಿಜೆಪಿಗೆ ಸೇರಿಸಿಕೊಂಡ ಬಳಿಕ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆ ಮಾತಿಗೆ ತಪ್ಪಿ ನಡೆಯದೇ ಸಚಿವರನ್ನಾಗಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ರಾಜ್ಯದಲ್ಲಿನ ಈಡಿಗ ಸಮುದಾಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕಡೆಗಣಿಸಿದೆ. ಬಿಜೆಪಿಯಲ್ಲಿ ಸಮುದಾಯದ ಏಳು ಶಾಸಕರಿದ್ದಾರೆ. ಅದರಲ್ಲಿ ಒಬ್ಬರನ್ನು ಮಾತ್ರ ಸಚಿವರನ್ನಾಗಿ ಮಾಡಲಾಗಿದೆ. ಪ್ರತಿಯೊಬ್ಬರು ಅವರವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ, ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ನೊಬ್ಬರಿಗೆ ಸಚಿವ ಸ್ಥಾನ ನೀಡಿ, ಜವಾಬ್ದಾರಿಯುತ ಡಿಸಿಎಂ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.
‘ಇವು ಸಮುದಾಯದ ನ್ಯಾಯಯುತ ಬೇಡಿಕೆ. ಇವೆಲ್ಲವನ್ನು ಹದಿನೈದು ದಿನದೊಳಗೆ ಈಡೇರಿಸಲೇಬೇಕು. ಇಲ್ಲದಿದ್ದರೆ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೇಮಗುಡ್ಡದಲ್ಲಿ ಜುಲೈ 25ರಂದು ಚಿಂತನ–ಮಂಥನ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಾಗುವುದು’ ಎಂದು ಸ್ವಾಮೀಜಿ ಎಚ್ಚರಿಸಿದರು.
ಆರ್ಯ ಈಡಿಗ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೀವನ್, ಹಿರಿಯೂರು ತಾಲ್ಲೂಕು ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎ.ಉಮೇಶ್, ಮುಖಂಡರಾದ ಲಕ್ಷ್ಮೀಕಾಂತ್, ರವಿಕುಮಾರ್, ಮಹಂತೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.