ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಇ–ಸ್ವತ್ತು ಪತ್ರ ವಿತರಣೆ ‌

ಸಂತಸ ವ್ಯಕ್ತಪಡಿಸಿದ ಗುತ್ತಿನಾಡು ಗ್ರಾಮಸ್ಥರು
Last Updated 29 ಡಿಸೆಂಬರ್ 2022, 5:04 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ-ಸ್ವತ್ತು ಪತ್ರ ವಿತರಣೆ ಕಾರ್ಯಕ್ರಮ ತಾಲ್ಲೂಕಿನ ಗುತ್ತಿನಾಡು ಗ್ರಾಮದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌. ದಿವಾಕರ್‌, ಮನೆ ಮಾಲೀಕರ ಮನೆ ಬಾಗಿಲಿಗೆ ತೆರಳಿ ಆಸ್ತಿಗೆ ಸಂಬಂಧಿಸಿದ ಇ –ಸ್ವತ್ತು ಪ್ರಮಾಣ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಇ –ಸ್ವತ್ತು ವಿತರಣೆ ಮಾಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಹ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಇತ್ತೀಚೆಗೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆಗೆ ಅನಾವಶ್ಯಕ ವಿಳಂಬ ಮತ್ತು ಮದ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದು ಗಮನಕ್ಕೆ ಬಂದಿತು. ಆದ್ದರಿಂದ ಮನೆ ಬಾಗಿಲಿಗೆ ವಿತರಣೆ ಮಾಡುವ ಯೋಜನೆ ರೂಪಿಸಲಾಯಿತು. ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನ ಮೊದಲೇ ಪಡೆದು, ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಮಾಲೀಕರು ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರ, ಅವರ ಮನೆ ಮನೆಗೆ ಖುದ್ದು ಭೇಟಿ ನೀಡಿ, ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಇ-ಸ್ವತ್ತು ಪಡೆಯಲು ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಪಂಚಾಯಿತಿಗಳಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ವಿಳಂಬ ನೀತಿಯಿಂದ ಜಿಲ್ಲಾ ಪಂಚಾಯಿತಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು. ಇದೀಗ ಇಂತಹ ಸೇವಾ ಕಾರ್ಯದಿಂದ ಜನರ ಅಭಿಪ್ರಾಯ ಬದಲಾಗಿದ್ದು, ಸಂತಸ ವ್ಯಕ್ತಪಡಿಸುತ್ತಿದ್ದಾರೆ.15 ದಿನಗಳಲ್ಲಿ ಸುಮಾರು 4 ಲಕ್ಷ ರೂ. ತೆರಿಗೆ ಸಂಗ್ರಹವಾಗಿದ್ದು, ತೆರಿಗೆಯನ್ನು ಜನರು ತಾವೇ ಸ್ವತ: ಬಂದು ಪಾವತಿಸಿರುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.

ಗುತ್ತಿನಾಡು ಹಾಗೂ ಎಂ.ಆರ್‌.ಕಾಲೋನಿಯಲ್ಲಿ 80ಕ್ಕೂ ಹೆಚ್ಚು ಇ-ಸ್ವತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT