ಚಿತ್ರದುರ್ಗ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಹಾಗೂ ಕಲ್ಯಾಣ ನಿಧಿಯನ್ನು ಕಾರ್ಮಿಕರ ಹಿತಕ್ಕಾಗಿ ಮಾತ್ರ ಬಳಸಬೇಕು ಎಂದು ಆಗ್ರಹಿಸಿ ಸಮೃದ್ಧಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ತೀರ್ಮಾನಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟರಿಂದ ಕಲ್ಯಾಣ ಮಂಡಳಿ ಉಳಿಸುವಂತೆ ಕೋರಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಸ್ಥಾಪಿಸಿದ ಕಲ್ಯಾಣ ಮಂಡಳಿ ಭ್ರಷ್ಟಾಚಾರದ ಕೂಪವಾಗಿದೆ. ಅನ್ಯ ಉದ್ದೇಶಕ್ಕೆ ₹ 730 ಕೋಟಿಯನ್ನು ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಅಸ್ತಿತ್ವಕ್ಕೆ ಬಂದ ಮಂಡಳಿ ಅಧಿಕಾರಿಗಳ ಕಪಿಮುಷ್ಠಿಗೆ ಸಿಲುಕಿ ನಲುಗಿ ಹೋಗಿದೆ. ಕಾರ್ಮಿಕರ ಸೌಲಭ್ಯ ಕಲ್ಪಿಸಲು ಕಠಿಣ ನೀತಿ ರೂಪಿಸಿ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಪರಿಹಾರವಾಗಿ ₹ 3 ಸಾವಿರ ಘೋಷಣೆ ಮಾಡಲಾಗಿದೆ. ಆರು ತಿಂಗಳು ಕಳೆದರೂ ಅರ್ಹ ಕಾರ್ಮಿಕರನ್ನು ಪರಿಹಾರ ಧನ ತಲುಪಿಲ್ಲ. ನೇರ ನಗದು ವರ್ಗಾವಣೆಗೆ ಎಳ್ಳುನೀರು ಬಿಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಗಾಳಿಗೆ ತೂರಲಾಗಿದೆ. ಮದುವೆ ಸಹಾಯಧನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.
ಸರ್ಕಾರ ಘೋಷಣೆ ಮಾಡಿದ ಸವಲುತ್ತುಗಳ ಪಟ್ಟಿಯಲ್ಲಿ 19 ಸೌಲಭ್ಯಗಳನ್ನು ತೋರಿಸಲಾಗಿದೆ. ವಾಸ್ತವವಾಗಿ ಹತ್ತು ಸೌಲಭ್ಯಗಳು ಮಾತ್ರ ಕಾರ್ಮಿಕರನ್ನು ತಲುಪುತ್ತಿವೆ. ಅಡುಗೆ ಅನಿಲ, ಕನ್ನಡಕ, ಅಂಗವಿಕಲರ ಪರಿಕರ ಖರೀದಿಯ ಸೌಲಭ್ಯ ಇನ್ನೂ ಸಿಗುತ್ತಿಲ್ಲ. ಮನೆ ನಿರ್ಮಾಣಕ್ಕೆ ನಿಗದಿಪಡಿಸಿದ ಸಹಾಯಧನ ಈವರೆಗೆ ಯಾರೊಬ್ಬರಿಗೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಭೈರೇಶ್, ಖಜಾಂಚಿ ಎಂ.ಆರ್.ಮಂಜುನಾಥ್, ಗೌರವ ಅಧ್ಯಕ್ಷ ಈರಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.