ಅತಂತ್ರಗೊಂಡ ವಿದ್ಯಾರ್ಥಿಗಳಿಂದ ಪ್ರತಿಭಟನೆ

7
ಆಲಘಟ್ಟಕ್ಕೆ ಶಾಲೆ ಮರುಸ್ಥಳಾಂತರಕ್ಕೆ ವಿರೋಧ, ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ನಿರ್ಧಾರ

ಅತಂತ್ರಗೊಂಡ ವಿದ್ಯಾರ್ಥಿಗಳಿಂದ ಪ್ರತಿಭಟನೆ

Published:
Updated:
ಭರಮಸಾಗರದಲ್ಲೇ ಸರ್ಕಾರಿ ಪ್ರೌಢಶಾಲೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಭರಮಸಾಗರ: ವಾರದ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಸರ್ಕಾರಿ ಪ್ರೌಢಶಾಲೆಯನ್ನು ಆಲಘಟ್ಟಕ್ಕೆ ಮರುಸ್ಥಳಾಂತರಗೊಳಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದ ಮಕ್ಕಳು ಬಸ್‌ ನಿಲ್ದಾಣ, ಪೊಲೀಸ್‌ ಠಾಣೆ ರಸ್ತೆ ಮೂಲಕ ಸಾಗಿ ನಾಡಕಚೇರಿ ತಲುಪಿದರು. ಉಪ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. ಬಡ ಕುಟುಂಬದ ಮಕ್ಕಳಾದ ನಮ್ಮ ಉಜ್ವಲ ಭವಿಷ್ಯಕ್ಕಾಗಿ ಹಾಗೂ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಯನ್ನೇ ಆಶ್ರಯಿಸಿದ್ದೇವೆ. ನಮಗೆ ಸರ್ಕಾರಿ ಶಾಲೆ ನೀಡಿ ಎಂದು ಉರಿ ಬಿಸಿಲಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

‘ಜೂನ್ 18ರಿಂದ ಶಾಲೆ ಆರಂಭವಾಗಿದ್ದು, ಪ್ರವೇಶ ಪಡೆದ್ದೇವೆ. ಶಾಸಕ ಎಂ.ಚಂದ್ರಪ್ಪ 25ರಂದು ಶಾಲೆ ಉದ್ಘಾಟಿಸಿದ್ದರು. ತರಗತಿಗಳು ಶುರುವಾಗಿದ್ದು, ಶಿಕ್ಷಕರು ಪಾಠ ಆರಂಭಿಸಿದ್ದರು. ಸೋಮವಾರ ಶಾಲೆಗೆ ಬೀಗ ಹಾಕಿದ್ದು, 11 ಗಂಟೆಯಾದರೂ ಯಾವೊಬ್ಬ ಶಿಕ್ಷಕರೂ ಬರಲಿಲ್ಲ. ‘ಶಾಲೆ ರದ್ದಾಗಿದೆ’ ಎಂಬ ಪ್ರಕಟಣೆಯನ್ನು ಗೋಡೆಗೆ ಅಂಟಿಸಿ ಹೋಗಿದ್ದಾರೆ. ಇದರಿಂದ ನಮಗೆ ಆತಂಕವಾಯಿತು’ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಶಾಲೆ ಮಕ್ಕಳು ಅತಂತ್ರ:  ಬೇವಿನಹಳ್ಳಿ, ನಂದಿಹಳ್ಳಿ, ದ್ಯಾಪನಹಳ್ಳಿ, ಹೆಗಡೆಹಾಳ್, ಗೊಲ್ಲರಹಟ್ಟಿ, ಹೆಗ್ಗೆರೆ, ಹಂಪನೂರು, ಎಮ್ಮೇಹಟ್ಟಿ ಗ್ರಾಮಗಳ ಮಕ್ಕಳು ಈ ಶಾಲೆಗೆ ದಾಖಲಾಗಿದ್ದಾರೆ. ಶಾಲೆ ರದ್ದಾಗಿದ್ದರಿಂದ ಈ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಬಿಸಿಯೂಟದ ವ್ಯವಸ್ಥೆಯೂ ಇಲ್ಲದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

‘ನಮ್ಮ ಪೋಷಕರು ಬಡವರು, ಕೂಲಿ ಮಾಡಿ ನಮ್ಮನ್ನು ಓದಿಸುತ್ತಿದ್ದಾರೆ. ಈಗ ಒಮ್ಮೆಲೆ ನಮ್ಮನ್ನು ಬೀದಿ ಪಾಲು ಮಾಡಿದರೆ ನಾವು ಏನು ಮಾಡುವುದು? ಈಗಾಗಲೇ ಎಲ್ಲಾ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದೆ. ಜತೆಗೆ ಹೆಚ್ಚು ಶುಲ್ಕ ತೆರಬೇಕು. ನಾವು ಎಲ್ಲಿಂದ ತರುವುದು? ಇನ್ನು ನಾವು ಶಾಲೆಯನ್ನು ಮರೆತುಬಿಡುವುದೇ ಮೇಲು’ ಎಂದು ವಿಧ್ಯಾರ್ಥಿನಿ ಸುಮಾ ಅಳಲು ತೋಡಿಕೊಂಡಳು.

‘ದೊಡ್ಡಾಲಘಟ್ಟದಲ್ಲಿ ಶಾಲೆ ಆರಂಭವಾಗಲಿ. ಆದರೆ, ಇಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಅಧಿಕಾರಿಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇದರಿಂದ ನಾವು ಶಿಕ್ಷಣದಿಂದ ವಂಚಿತರಾಗಿದ್ದೇವೆ. ಶಿಕ್ಷಣ ಇಲಾಖೆ ನಮ್ಮ ಹಕ್ಕನ್ನು ಕಸಿದುಕೊಂಡಿದೆ’ಎಂದು ಆರೋಪಿಸಿದರು.  ಮನವಿ ಸ್ವೀಕರಿಸಿದ ರಾಜಸ್ವ ನಿರೀಕ್ಷಕ ಮೂಡಲಗಿರಿಯಪ್ಪ ‘ಈ ಸಮಸ್ಯೆ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಆಲಘಟ್ಟದ ಶಾಲೆ ಆರಂಭ

ಚಿತ್ರದುರ್ಗ ತಾಲ್ಲೂಕಿನ ಆಲಘಟ್ಟಕ್ಕೆ ಮರುಸ್ಥಳಾಂತರಗೊಂಡ ಸರ್ಕಾರಿ ಪ್ರೌಢಶಾಲೆ ಸೋಮವಾರ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.  ಭರಮಸಾಗರದ ಶಾಲೆಗೆ ನಿಯೋಜನೆಗೊಂಡಿದ್ದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಮತ್ತೆ ಆಲಘಟ್ಟಕ್ಕೆ ಮರಳಿದ್ದಾರೆ. ಮೊದಲ ದಿನ ಬಹುತೇಕ ಎಲ್ಲ ಮಕ್ಕಳು ಶಾಲೆಗೆ ಹಾಜರಾಗಿದ್ದರು ಎಂದು ಬಿಇಒ ನಾಗಭೂಷಣ್‌ ತಿಳಿಸಿದ್ದಾರೆ.

ಮನೆಗೆ ಹೋದರೆ ಪೋಷಕರು ಶಾಲೆಯಲ್ಲಿ ಏನು ಅಭ್ಯಾಸ ಮಾಡಿದೆ ಎಂದು ಕೇಳುತ್ತಾರೆ. ಇಲ್ಲಿ ನೋಡಿದರೆ ಪಾಠವೂ ಇಲ್ಲ ಪ್ರವಚನವೂ ಇಲ್ಲ, ಬಿಸಿಯೂಟವೂ ಇಲ್ಲ.
-ದರ್ಶನ, ಅಮೃತಾ, ವಿದ್ಯಾರ್ಥಿಗಳು

ತೀವ್ರ ಬರಗಾಲ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಾಲೆ ಉಳಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ.
-ಸೂರಪ್ಪ, ರೈತಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !