ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ದುರಸ್ತಿಗೆ ಆಗ್ರಹ: ಕೆರೆ ನೀರಾವರಿ ಅಚ್ಚುಕಟ್ಟುದಾರರ ಪ್ರತಿಭಟನೆ

ರಾಣಿಕೆರೆ ಫೀಡರ್ ಕಾಲುವೆ ದುರಸ್ತಿಗೆ ಆಗ್ರಹ
Published 26 ಮಾರ್ಚ್ 2024, 16:24 IST
Last Updated 26 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಚಳ್ಳಕೆರೆ: ಹಿರಿಯೂರು ತಾಲ್ಲೂಕು ಶಿಡ್ಲಯ್ಯನಕೋಟೆಯಿಂದ ಚಳ್ಳಕೆರೆಯ ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆವರೆಗೆ ನಿರ್ಮಿಸಿರುವ ರಾಣಿಕೆರೆ ಫೀಡರ್ ಕಾಲುವೆ ದುರಸ್ತಿಗೆ ಆಗ್ರಹಿಸಿ ರಾಣಿಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಮಂಗಳವಾರ ಶಿಡ್ಲಯ್ಯನಕೋಟೆ ಬಳಿ ರಾಣಿಕೆರೆ ಬಲನಾಲೆ ಬಳಿ ಪ್ರತಿಭಟನೆ ನಡೆಸಿದರು.

ವಿವಿ ಸಾಗರದಿಂದ ವೇದಾವತಿ ನದಿಗೆ ಹರಿದು ಬಂದ ನೀರನ್ನು ಶಿಡ್ಲಯ್ಯನಕೋಟೆ ಬಲನಾಲೆ ಮೂಲಕ ರಾಣಿಕೆರೆಗೆ ತರುವ ಸಲುವಾಗಿ ಮಾಜಿ ಸಚಿವ ದಿವಂಗತ ಬಿ.ಎಲ್.ಗೌಡರು, 1975-76ರಲ್ಲಿ ನಿರ್ಮಾಣ ಮಾಡಿದ್ದ 3 ಕಿ.ಮೀ. ಉದ್ದದ ಕಿರಿದಾದ ರಾಣಿಕೆರೆ ಫೀಡರ್ ಕಾಲುವೆಯಲ್ಲಿ ಜಾಲಿ ಗಿಡಗಳು ಬೆಳೆದಿವೆ. ಅಲ್ಲದೆ ಕಲ್ಲಿನ ಕಟ್ಟಡ ಅಲ್ಲಲ್ಲಿ ಕಿತ್ತು ಹೋಗಿ ಕಾಲುವೆ ಮುಚ್ಚಿಹೋಗಿದೆ. ಹೀಗಾಗಿ ಫೀಡರ್ ಕಾಲುವೆ ಮತ್ತು ರಾಣಿಕೆರೆ ವ್ಯಾಪ್ತಿಯ ವಿಡಪನಕುಂಟೆ, ಕರಿಕೆರೆ, ಕಾಲುವೆಹಳ್ಳಿ, ವಿಶ್ವೇಶಪುರ, ಮೀರಾಸಾಬಿಹಳ್ಳಿ, ಭರಮಸಾಗರ, ಕಸ್ತೂರಿ ತಿಮ್ಮನಹಳ್ಳಿ, ದ್ಯಾವರನಹಳ್ಳಿ, ಪುರ್ಲೆಹಳ್ಳಿ, ಚಿಕ್ಕೇನಹಳ್ಳಿ ಸೇರಿ 20ಕ್ಕೂ ಹೆಚ್ಚು ಗ್ರಾಮಗಳು  ವಿವಿ ಸಾಗರದ ನೀರಿನಿಂದ ವಂಚಿತವಾಗಿದ್ದು ಕೊಳವೆ ಬಾವಿ ಬತ್ತುವ ಸ್ಥಿತಿಯಲ್ಲಿವೆ ಎಂದು ಮೀರಾಸಾಬಿಹಳ್ಳಿ ಗ್ರಾಮದ ನೀರಾವರಿ ಅಚ್ಚುಕಟ್ಟುದಾರ ನಾಗರಾಜ ಆತಂಕ ವ್ಯಕ್ತಪಡಿಸಿದರು.

‘ರಾಣಿಕೆರೆ ಫೀಡರ್ ಕಾಲವೆ ದುರಸ್ತಿಗೆ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ₹39 ಕೋಟಿ ಅನುದಾನದ ಪೈಕಿ ₹10 ಕೋಟಿ ಮೊತ್ತದ ಕಾಮಗಾರಿ ನಡೆದಿದ್ದು, ಉಳಿದ ಹಣವನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಹಾಗಾಗಿ ವಿವಿ ಸಾಗರದ ನೀರು ಕೆರೆಗೆ ಹರಿದು ಬರುವ ಅವಕಾಶವಿದ್ದರೂ ಕೆರೆಗೆ ಹನಿ ನೀರು ಬರದಾಗಿದೆ’ ಎಂದು ವಿಡಪನಕುಂಟೆ ಗ್ರಾಮದ ನಿವೃತ್ತ ಉಪನ್ಯಾಸಕ ಎಸ್.ಸಿದ್ದೇಶ್ ಆರೋಪಿಸಿದರು. 

‘ಶಿಡ್ಲಯ್ಯನಕೋಟೆಯಿಂದ ಮೀರಾಸಾಬಿಹಳ್ಳಿವರೆಗೆ ₹38 ಕಿ.ಮೀ. ಉದ್ದದ ರಾಣಿಕೆರೆ ಫೀಡರ್ ಕಾಲುವೆ ದುರಸ್ತಿ ಕಾರ್ಯ ನಾಳೆಯಿಂದಲೇ ಪ್ರಾರಂಭಿಸಬೇಕು. ವಿಳಂಬವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ, ಅರಬೆತ್ತಲೆ ಮೆರವಣಿಗೆ ಜತೆಗೆ ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದು’ ಎಂದು ರೈತ ಮುಖಂಡ ಚನ್ನಕೇಶವ ಎಚ್ಚರಿಕೆ ನೀಡಿದರು. 

ಅಚ್ಚುಕಟ್ಟುದಾರ ಮೀರಾಸಾಬಿಹಳ್ಳಿ ರಮೇಶ್, ವಿಡಪನಕುಂಟೆ ನಿಂಗಪ್ಪ, ಸುರೇಶ್ ಮಾತನಾಡಿದರು. ಓಬಣ್ಣ, ವೀರೇಶ್, ಮೀರಾಸಾಬಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ, ಸುರೇಶ್, ಮರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT