ರಸ್ತೆ ನಿರ್ಮಾಣಕ್ಕೆ ಮಳೆಗಾಲ ಸೂಕ್ತವೇ ?

7
* ಕೆಸರು ಗದ್ದೆಯಾಗಿರುವ ಪ್ರಶಾಂತನಗರ ನಾಲ್ಕನೇ ತಿರುವು * ಸಿಸಿ ರಸ್ತೆ ನಿರ್ಮಾಣಕ್ಕೆ ನಾಗರಿಕರ ಒತ್ತಾಯ

ರಸ್ತೆ ನಿರ್ಮಾಣಕ್ಕೆ ಮಳೆಗಾಲ ಸೂಕ್ತವೇ ?

Published:
Updated:
Deccan Herald

ಚಿತ್ರದುರ್ಗ: ಮೂಲ ಸೌಕರ್ಯಗಳಲ್ಲೊಂದಾದ ರಸ್ತೆ ಪ್ರತಿಯೊಬ್ಬ ನಾಗರಿಕರಿಗೂ ಅಗತ್ಯವಾಗಿ ಬೇಕಾಗಿರುವ ಸೌಲಭ್ಯ. ಉತ್ತಮ ರಸ್ತೆ ನಿರ್ಮಾಣಕ್ಕೆ ಬೇಸಿಗೆ ಕಾಲ ಸೂಕ್ತ. ಆದರೆ, ಮಳೆಗಾಲದಲ್ಲಿ ಕೆಲವೆಡೆ ನಿರ್ಮಿಸುತ್ತಿರುವ ಕಾರಣ ಅವ್ಯವಸ್ಥೆಯ ಆಗರವಾಗಿ ಅನೇಕರಿಗೆ ತೊಂದರೆ ಉಂಟಾಗುತ್ತಿದೆ...

ಇಲ್ಲಿನ ಪ್ರತಿಷ್ಠಿತ ಬಡಾವಣೆ ಪ್ರಶಾಂತ ನಗರ ನಾಲ್ಕನೇ ತಿರುವಿನಲ್ಲಿ ಮಳೆಗಾಲದಲ್ಲಿ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಉಂಟಾಗಿರುವ ದುಸ್ಥಿತಿ ಇದು.

ಇಲ್ಲಿ ಒಂದು ತಗ್ಗು–ಗುಂಡಿ, ದಾಟಿದರೆ ಮತ್ತೊಂದು, ಅದರಿಂದ ತಪ್ಪಿಸಿಕೊಂಡರೆ ಇನ್ನೊಂದು... ಹೀಗೆ ಸರಣಿ ಗುಂಡಿಗಳನ್ನು ದಾಟಿದ ಕೂಡಲೇ ಕೆಸರು ಗದ್ದೆಯಂತಹ ಅಂಕುಡೊಂಕಾದ ಜಾಗ... ನಿಂತ ನೀರಿನಲ್ಲಿ ಮಕ್ಕಳು ಆಟವಾಡಿದರೆ ಮೈಮೇಲೆ ಓಕುಳಿಯಾಟ.

ಪ್ರಶಾಂತ ನಗರದ ಮುಖ್ಯ ರಸ್ತೆಯೂ ಒಂದು ಕಡೆ ಜಿಲ್ಲಾ ಕ್ರೀಡಾಂಗಣಕ್ಕೆ, ಮತ್ತೊಂದು ಕಡೆ ಜೋಗಿಮಟ್ಟಿ ರಸ್ತೆಗೆ ತಲುಪುತ್ತದೆ. ಹಾಗಾಗಿ ಈ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚು. ಕಳೆದ ಎರಡು ವರ್ಷಗಳ ಮೊದಲೇ ಮಣ್ಣಿನ ರಸ್ತೆ ಹಾಳಾಗಿತ್ತು. ಈಗ ಸಂಪೂರ್ಣ ಗುಂಡಿಗಳಂತಾಗಿದೆ. ಇದರ ಪರಿಣಾಮವಾಗಿ ನಾಲ್ಕೈದು ದಿನಗಳ ಹಿಂದಷ್ಟೇ ಸುರಿದ ಮಳೆಗೆ ಈ ಗುಂಡಿಗಳೆಲ್ಲ ತುಂಬಿಕೊಂಡು ಕೆಸರುಗದ್ದೆಯಂತೆ ಕಾಣುತ್ತದೆ. ಇಲ್ಲಿ ವಾಸಿಸುವ ಹಿರಿಯ ನಾಗರಿಕರು ಹಾಗೂ ಸ್ಥಳೀಯರ ಒತ್ತಾಯ, ಮನವಿ ಮೇರೆಗೆ ನೂತನ ರಸ್ತೆ ಭಾಗ್ಯ ದೊರೆತಿದ್ದು, ಆದಷ್ಟೂ ಬೇಗ ಗುಣಮಟ್ಟದ ರಸ್ತೆ ನಿರ್ಮಾಣ ಆಗಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ.

ರಸ್ತೆ ನಿರ್ಮಿಸುವ ಉದ್ದೇಶದಿಂದ ಅಗೆದಿದ್ದಾರೆ. ಮಳೆ ಬಂದಿದ್ದರಿಂದ ಕೆಸರು ನಿರ್ಮಾಣವಾಗಿ ಗುಂಡಿಗಳಾಗಿವೆ. ಈಗ ರಸ್ತೆ ಮಾರ್ಗವಾಗಿ ಸಂಚರಿಸುವುದಕ್ಕೆ ಕೆಲವರು ಹಿಂಜರಿಯುತ್ತಿದ್ದಾರೆ. ‘ಎಲ್ಲಾದರೂ ಗುಂಡಿಯಲ್ಲಿ ಕಾಲಿಟ್ಟು ಜಾರಿ ಬಿದ್ದು, ಸೊಂಟ ಉಳುಕಿಸಿಕೊಳ್ಳುತ್ತೀರಿ. ನೀವು ಮನೆಯಿಂದ ಹೊರಗೆ ಹೋಗುವುದೇ ಬೇಡ’ ಎಂದು ಹಿರಿಯರನ್ನು ಅವರ ಕುಟುಂಬದವರು ತಡೆಯುತ್ತಿದ್ದಾರೆ. ‘ಎಲ್ಲಾದರೂ ಬಿದ್ದು, ಏನಾದರೂ ಕೈಕಾಲು ಮುರಿದರೆ’ ಎಂಬ ಭಯ ನಾಗರಿಕರನ್ನು ಕಾಡುತ್ತದೆ. ಅಲ್ಲದೆ, ನಾನೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಗಾಲಿಗಳು ಕೆಸರಿನಲ್ಲಿ ಸ್ಕಿಡ್‌ ಆಗಿ ಬಿದ್ದರೆ ಎಂಬ ಆತಂಕವೂ ಕಾಡುತ್ತಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಗುರುಮೂರ್ತಿ.

ಇಲ್ಲಿ ರಸ್ತೆ ನಿರ್ಮಿಸುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಅದು ಇನ್ನಷ್ಟು ತಡವಾಗಬಾರದು. ಈಗಾಗಲೇ ಮಹಿಳೆಯರು, ಮಕ್ಕಳು ಓಡಾಡದಂತ ಸ್ಥಿತಿ ಇದೆ. ಆದಷ್ಟೂ ಬೇಗ ಇತ್ತ ಗಮನಹರಿಸಿ ತ್ವರಿತವಾಗಿ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿ ಸಂಜೀವ್ ಕುಮಾರ್‌ ಜೋಶಿ ಮನವಿ ಮಾಡಿದ್ದಾರೆ.

ಏಳೆಂಟು ತಿಂಗಳ ಹಿಂದಷ್ಟೇ ಪ್ರಶಾಂತ ನಗರದ ಮುಖ್ಯ ರಸ್ತೆ ಮಾರ್ಗವನ್ನು ದುರಸ್ತಿ ಪಡಿಸಲಾಗಿತ್ತು. ಆದರೆ, ಈಗ ಜಿಲ್ಲಾ ಕ್ರೀಡಾಂಗಣ ರಸ್ತೆಗೆ ತಿರುವು ಪಡೆಯುವ ಎಸ್‌ಬಿಐ ಶಾಖೆ ಮುಂಭಾಗದ ರಸ್ತೆಯೂ ಆಗಿಂದಾಗ್ಗೆ ಸುರಿದ ಮಳೆಯಿಂದಾಗಿ ಅಲ್ಲಿಯೂ ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿ ಕೂಡ ವಾಹನ ಸವಾರರು ಹರಸಾಹಸ ಪಟ್ಟುಕೊಂಡೆ ಸಂಚರಿಸುವಂಥ ಪರಿಸ್ಥಿತಿ ಇದ್ದು, ತ್ವರಿತವಾಗಿ ಸರಿಪಡಿಸಬೇಕು ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ರಘು.

ಕಾಂಕ್ರೀಟ್ ರಸ್ತೆಗೆ ಆಗ್ರಹ

ರಸ್ತೆ ನಿರ್ಮಾಣಕ್ಕೆ ಮಳೆಗಾಲ ಸೂಕ್ತವಲ್ಲ. ಆದರೂ ಪ್ರಾರಂಭಿಸಿ, ರಸ್ತೆ ಅಗೆದಿದ್ದಾರೆ. ಇದರಿಂದಾಗಿ ವಾಹನಗಳು ಸಂಚರಿಸದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಾರನ್ನು ಸದ್ಯ ಡ್ರೈವರ್‌ಗೆ ಒಪ್ಪಿಸಿದ್ದೇನೆ. ದ್ವಿಚಕ್ರ ವಾಹನವನ್ನೂ ಹೊರಗೆ ತೆಗೆದಿಲ್ಲ. ದೂರ ಹೋಗಬೇಕೆಂದರೆ ಪ್ರತಿ ಬಾರಿ ಆಟೊದಲ್ಲಿ ಹೋಗುತ್ತಿದ್ದೇನೆ ಎನ್ನುತ್ತಾರೆ ಸ್ಥಳೀಯ ನಿವಾಸಿ ದೊಡ್ಡಪ್ಪ.

ಒಂದು ವಾರದಿಂದಲೂ ಕೆಲವರ ವಾಹನಗಳು ಅವರ ಮನೆ ಮುಂದೆ ನಿಲ್ಲುತ್ತಿಲ್ಲ. ರಸ್ತೆಯ ತುದಿಯಲ್ಲಿ ನಿಲ್ಲುತ್ತಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಡಾಂಬಾರು ರಸ್ತೆ ನಿರ್ಮಿಸಿದರೆ, ಮಳೆಗಾಲದಲ್ಲಿ ಹಾಳಾಗುವ ಸಾಧ್ಯತೆ ಇದ್ದು, ಕಾಂಕ್ರೀಟ್ ರಸ್ತೆಯನ್ನೇ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಈಚೆಗೆ ಮಣ್ಣು ಸಾಗಿಸುವ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡು ಸಂಪೂರ್ಣ ಹದಗೆಟ್ಟಿದೆ. ಒಣಗಿದ ನಂತರ ಕೆಲಸ ಪ್ರಾರಂಭಿಸುವುದಾಗಿ ರಸ್ತೆ ಅಗೆಯಲು ಬಂದಿದ್ದವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ನಿರ್ಮಾಣ ಕಾರ್ಯ ತ್ವರಿತವಾಗಿ ಆಗಲಿ.
ಗುರುಮೂರ್ತಿ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !