ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ‘ಆತಂಕ ಇಲ್ಲದಿದ್ದರೆ ಕೋವಿಡ್‌ ಜಯಿಸಬಹುದು..’

ಜಿಲ್ಲೆಯಲ್ಲಿ ಒಂದೇ ದಿನ 12 ಜನರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ
Last Updated 16 ಜುಲೈ 2020, 17:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಮನಸ್ಸಿನೊಳಗೆ ಆತಂಕ ಇರಬಾರದು. ಏನೇ ಬಂದರೂ ಧೈರ್ಯವಾಗಿ ಎದುರಿಸಬೇಕು. ಆಗ ಮಾತ್ರ ಕಾಯಿಲೆ ಅಷ್ಟೇ ಅಲ್ಲ. ಯಾವುದನ್ನೂ ಬೇಕಾದರೂ ಮೆಟ್ಟಿ ನಿಲ್ಲಬಹುದು...

ಕೊರೊನಾ ಸೋಂಕಿಗೆ ತುತ್ತಾಗಿ ಇಲ್ಲಿಯ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಂಟು ಜನ ರೋಗಿಗಳು ಗುಣಮುಖರಾಗಿ ಗುರುವಾರ ಸೋಂಕಿನಿಂದ ಮುಕ್ತರಾಗಿದ್ದಾರೆ. ಸಂತೋಷದ ಹೊನಲಿನಲ್ಲೇ ಹೊರಬಂದ ಅವರೆಲ್ಲರನ್ನೂ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು ಆತ್ಮೀಯವಾಗಿ ಬೀಳ್ಕೊಟ್ಟರು. ಅದರಲ್ಲಿ ಇಬ್ಬರು ‘ಪ್ರಜಾವಾಣಿ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.

‘ನಾನು ಜುಲೈ 3ಕ್ಕೂ ಮುನ್ನ ಹೊರಜಿಲ್ಲೆಗೆ ಹೋಗಿ ಬಂದಿದ್ದೆ. ರಾಜ್ಯದ ವಿವಿಧೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನನ್ನಿಂದ ಕುಟುಂಬ ಹಾಗೂ ಬೇರೆಯವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸ್ವಯಂ ಪ್ರೇರಣೆಯಿಂದ ಗಂಟಲು, ಮೂಗು ದ್ರವ ಪರೀಕ್ಷೆಗೆ ಒಳಗಾದೆ. ಜುಲೈ 12ರಂದು ಬಿಡುಗಡೆಯಾದ ವರದಿಯಲ್ಲಿ ಪಾಸಿಟಿವ್‌ ಬಂದಿತು. ಆದರೂ ಧೃತಿಗೆಡಲಿಲ್ಲ’ ಎಂದು ಚಿತ್ರದುರ್ಗದ 69 ವರ್ಷದ ವೃದ್ಧೆ ಪಿ-37230 ತಿಳಿಸಿದರು.

‘ನನಗೆ ಈವರೆಗೂ ಯಾವುದೇ ರೋಗ ಲಕ್ಷಣ ಕಂಡು ಬರಲಿಲ್ಲ. ಮಾಮೂಲಿಯಂತೆ ಆರೋಗ್ಯವಾಗಿಯೇ ಇದ್ದೆ. ನಿತ್ಯ ನನ್ನ ಪುತ್ರ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದ. ಜತೆಗೆ ಆಸ್ಪತ್ರೆಯಲ್ಲಿನ ವೈದ್ಯರು, ನರ್ಸ್‌ಗಳು ಕುಟುಂಬದವರಂತೆ ನಮ್ಮನ್ನು ಆರೈಕೆ ಮಾಡಿದ್ದಾರೆ. ಇತರೆ ಸಿಬ್ಬಂದಿ ಬಿಸಿನೀರು, ಊಟ, ತಿಂಡಿ ಸಮಯಕ್ಕೆ ಸರಿಯಾಗಿ ತಂದು ಕೊಡುತ್ತಿದ್ದರು. ಆಸ್ಪತ್ರೆ ಎಂದರೆ ಅನೇಕರಿಗೆ ಭಯ. ಆದರೆ, ನಾವಿದ್ದ ಸ್ಥಳದಲ್ಲಿ ಅಂತಹ ವಾತಾವರಣ ಇರಲಿಲ್ಲ. ಇದರಿಂದಾಗಿ ಆತಂಕಕ್ಕೆ ಒಳಗಾಗದೆ, ಐದೇ ದಿನದಲ್ಲಿ ಗುಣವಾಗಲು ಸಾಧ್ಯವಾಯಿತು’ ಎಂದು ಹರ್ಷ ವ್ಯಕ್ತಪಡಿಸಿದರು.

ಧೈರ್ಯ ಹೆಚ್ಚಾಗಿದೆ: ‘ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತವಾದ ನಂತರ ನನ್ನಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಸಂದಿಗ್ಧ ಸಂದರ್ಭವನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿತೆ’ ಎಂದು ಹಿರಿಯೂರಿನ 54 ವರ್ಷದ ಮಹಿಳೆ ಪಿ-35983 ಆತ್ಮವಿಶ್ವಾಸದಿಂದ ಹೇಳಿದರು.

‘ಕೆಮ್ಮು, ಜ್ವರಕ್ಕೆ ಭಯ ಪಡುವವಳು ನಾನು. ಇನ್ನೂ ಕೋವಿಡ್-19 ದೃಢಪಟ್ಟಾಗ ಆತಂಕ ಹೆಚ್ಚಾಯಿತು. 50 ವರ್ಷ ಮೇಲ್ಪಟ್ಟವರು ಕೆಲವೆಡೆ ಮೃತಪಟ್ಟಿರುವುದನ್ನು ಕಂಡು ಹೆದರಿದ್ದೆ. ವೈದ್ಯರು, ಶುಶ್ರೂಷಕಿಯರು ಹಾಗೂ ಕುಟುಂಬದವರು ಭೀತಿಗೆ ಒಳಗಾಗದಂತೆ ಧೈರ್ಯ ತುಂಬಿದರು’ ಎಂದರು.

‘ಕಾಯಿಲೆ ಬಗ್ಗೆ ನನಗೆ ಮೊದಲಿನಿಂದಲೂ ಭೀತಿ ಇದೆ. ಅದನ್ನು ಬಹುಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತೇನೆ. ಇನ್ನಷ್ಟು ಕುಗ್ಗಲು ಇದೇ ಕಾರಣವಾಗಿತ್ತು. ಒಮ್ಮೆ ಶೀತ, ಕೆಮ್ಮು ಬಂದರೆ ತಿಂಗಳಾದರೂ ಗುಣಮುಖವಾಗುವುದಿಲ್ಲ. ಸಾಮಾನ್ಯವಾಗಿ ಚಳಿ, ಮಳೆ ಗಾಲದಲ್ಲಿ ಸ್ವಲ್ಪ ಉಸಿರಾಟದ ಸಮಸ್ಯೆಯೂ ಇರುತ್ತದೆ. ಜೂನ್‌ನಲ್ಲಿ ಹಾಸನಕ್ಕೆ ಹೋಗಿ ಬಂದಿದ್ದೆ. ಕೆಮ್ಮು ಹತ್ತದಿನೈದು ದಿನವಾದರೂ ಹೋಗಲಿಲ್ಲ. ಅದಕ್ಕಾಗಿ ಖುದ್ದು ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಪಟ್ಟೆ. ಸೋಂಕಿನಿಂದ ಮುಕ್ತವಾಗಿ ಮನೆಗೆ ಹಿಂದಿರುಗಿರುವುದು ಸಂತಸ ಉಂಟು ಮಾಡಿದೆ’ ಎಂದು ಹೇಳಿದರು.

25ವರ್ಷದ ಪುರುಷ ಪಿ-42032, 35 ವರ್ಷದ ಪುರುಷ-24613, ಪಿ 41 ವರ್ಷದ ಪುರುಷ-45018, 44ವರ್ಷದ ಮಹಿಳೆ ಪಿ-35982, 65ವರ್ಷದ ಪುರುಷ ಪಿ-45018 ಸೇರಿ ಎಂಟು ಜನ ಇಲ್ಲಿ ಗುಣಮುಖರಾಗಿ ಬಿಡುಗಡೆಯಾದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವರಾಜ್ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT